ಕನ್ನಡಪ್ರಭ ವಾರ್ತೆ ಹೊನ್ನಾವರ
ಭಾರತವು ಪುಣ್ಯಭೂಮಿಯಾಗಿದ್ದು, ಸಾಂಸ್ಕೃತಿಕ, ಧಾರ್ಮಿಕವಾಗಿ ಶ್ರೀಮಂತರಾಷ್ಟ್ರವಾಗಿದೆ. ಈ ನೆಲದ ಗೌರವ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಕೊಂಡಾಕುಳಿ ಓಂಕಾರಾಶ್ರಮದ ಸ್ವಾಮಿ ಶಿವಾತ್ಮನಂದ ಪುರಿ ನುಡಿದರು.ಹಿಂದೂ ಸಮ್ಮೇಳನಾ ಸಂಚಾಲನಾ ಸಮಿತಿ ಸಾಲ್ಕೋಡ್ ಮಂಡಲದ ವತಿಯಿಂದ ಅರೇಅಂಗಡಿ ಆಸ್ಪತ್ರೆಯ ಮಂಭಾಗದಲ್ಲಿ ಆಯೋಜಿಸಿದ್ದ ಹಿಂದೂ ಸಮ್ಮೇಳನ ಉದ್ಘಾಟಿಸಿ ಆರ್ಶಿವಚನ ನೀಡಿದರು.
ಶ್ರೀಗಳು ಭಾರತ ಯೋಗ ಭೂಮಿಯಾಗಿದ್ದು, ಇಲ್ಲಿಯ ಕಲೆ ಹಾಗೂ ಸಂಸ್ಕ್ರತಿ ಆಚಾರ ವಿಚಾರಧಾರೆಯನ್ನು ಜಗತ್ತಿಗೆ ತಿಳಿಸಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ನಮ್ಮ ಸಂಪದ್ರಾಯ ಆಚಾರ ವಿಚಾರವನ್ನು ಸಾರಿ ಹೇಳುತ್ತಿವೆ. ನಾವೆಲ್ಲರೂ ದೇಶಾಭಿಮಾನ ಮೂಡಿಸಿಕೊಂಡು ಉತ್ತಮ ಪ್ರಜೆಯಾಗಿ ಕರ್ತವ್ಯ ನಿರ್ವಹಿಸೋಣ ಎಂದು ಕರೆ ನೀಡಿದರು.ಕೇಂದ್ರೀಯ ಕಾರ್ಯಾಲಯ ಪ್ರಮುಖ ಶ್ರೀಪಾದ ದಿಕ್ಸೂಚಿ ಭಾಷಣ ಮಾಡಿ, ಸ್ವಾತಂತ್ರ್ಯಪೂರ್ವ ಭಾರತವು ಸಮೃದ್ದಿಯಾಗಿತ್ತು. ಪರಕೀಯರ ದಬ್ಬಾಳಿಕೆಯಿಂದ ನಮ್ಮಲ್ಲಿಯ ಅನೇಕ ದೇವಾಲಯಗಳು ನಾಶ ಹೊಂದಿದವು. ಇಂದಿಗೂ ನಮ್ಮ ಆಚರಣೆಗಳಿಗೆ ತಡೆಯೊಡ್ಡುವ ಕೆಲಸ ನಡೆಯುತ್ತಿದೆ. ನಾವೆಲ್ಲರೂ ಜಾಗೃತರಾಗಿ, ನಮ್ಮ ಧರ್ಮದ ಆಚರಣೆಗಳನ್ನು ಪಾಲಿಸದೆ ಹೊದಲ್ಲಿ, ಇನ್ನಷ್ಟು ಅಧಃಪತನವಾಗಲಿದೆ ಎಂದರು.
ಹಲವು ದಶಕದಿಂದ ಹೆರಿಗೆ ಸಮಯದಲ್ಲಿ ನೆರವಾಗುವ ಸೂಲಗಿತ್ತಿ ವಿಶಾಲಾಕ್ಷಿ ಮಡಿವಾಳರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇ. ಸುಬ್ರಹ್ಮಣ್ಯ ಭಟ್, ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಗಣಪತಿ ನಾಯ್ಕ ಮಾತನಾಡಿದರು.
ದತ್ತಾತ್ರೆಯ ಅವಧಾನಿ ಸ್ವಾಗತಿಸಿ, ರಜನಿ ನಾಯ್ಕ ವಂದಿಸಿದರು. ನಾಗರಾಜ ಹೆಗಡೆ ಖಾಸ್ಕಂಡ ಮತ್ತು ಶಿವಾನಂದ ಮರಾಠಿ ಕಾರ್ಯಕ್ರಮ ನಿರ್ವಹಿಸಿದರು.ಗಮನಸೆಳೆದ ಶೋಭಾಯಾತ್ರೆ:
ಸಭಾ ಕಾರ್ಯಕ್ರಮ ಮೊದಲು ಸುಗ್ಗಿ, ಕೋಲಾಟ, ಭಜನಾ ತಂಡ, ಛದ್ಮವೇಶದಂತಹ ವಿವಿಧ ಕಲಾ ತಂಡಗಳು, ಮಹಿಳೆಯರು ಪೂರ್ಣಕುಂಭದ ಮೂಲಕ, ಸಾರ್ವಜನಿಕರು ಭಾಗಿಯಾಗಿ ಭವ್ಯ ಶೋಭಾಯಾತ್ರೆಯಲ್ಲಿ ಸ್ವಾಮೀಜಿಯವರನ್ನು ಬರಮಾಡಿಕೊಳ್ಳಲಾಯಿತು.