ಸಾರಾಂಶ
ಸೊರಬ: ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಜೊತೆಗೆ ಸರ್ವ ಸಮುದಾಯದವರಲ್ಲಿ ಸೌಹಾರ್ದತೆ ಮೂಡಿಸಲು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರವಹಿಸಿವೆ ಎಂದು ರಾಜ್ಯ ಮಡಿವಾಳ ಸಮಾಜದ ಸಹ ಕಾರ್ಯದರ್ಶಿ ಹಿರಣ್ಯಪ್ಪ ಕುಂಬ್ರಿ ಹೇಳಿದರು.
ಸೊರಬ: ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಜೊತೆಗೆ ಸರ್ವ ಸಮುದಾಯದವರಲ್ಲಿ ಸೌಹಾರ್ದತೆ ಮೂಡಿಸಲು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರವಹಿಸಿವೆ ಎಂದು ರಾಜ್ಯ ಮಡಿವಾಳ ಸಮಾಜದ ಸಹ ಕಾರ್ಯದರ್ಶಿ ಹಿರಣ್ಯಪ್ಪ ಕುಂಬ್ರಿ ಹೇಳಿದರು. ತಾಲೂಕಿನ ಪುಟ್ಟನಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ನಿಮಿತ್ತ ಹಮ್ಮಿಕೊಂಡ ಸಾಮಾಜಿಕ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಾಟಕಗಳು ಸಮಾಜದಲ್ಲಿ ಸರ್ವರನ್ನೂ ಒಗ್ಗೂಡಿಸುತ್ತವೆ. ಪ್ರಸ್ತುತ ದಿನಮಾನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದೆ. ನಾಟಕವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ನಾಟಕಗಳು ನಮ್ಮ ಸುತ್ತಲಿನ ವಿದ್ಯಾಮಾನಗಳನ್ನು ಪ್ರತಿಬಿಂಬಿಸುತ್ತವೆ ಎಂದರು.
ಗ್ರಾಮದಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯು ಹೆಚ್ಚಾಗುತ್ತಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೇವಸ್ಥಾನ ಸಮಿತಿ ಅಧ್ಯಕ್ಷ ಬಾಸೂರು ಚಂದ್ರೇಗೌಡ, ಮನುಕುಲಕ್ಕೆ ನೈತಿಕತೆಯ ಪಾಠಮಾಡಿ ಸತ್ಯ-ಶುದ್ಧ ಸನ್ನಡೆತೆಯ ಸಾತ್ವಿಕ ಬದುಕಿನ ಸಂಸ್ಕಾರ ಅರುಹಿದ ಚೈತ್ಯನ್ಯ ಶಕ್ತಿ ಶ್ರೀ ವೀರಭದ್ರ ದೇವರು. ನಂಬಿ ಬಂದ ಭಕ್ತರಿಗೆ ಇಷ್ಟಾರ್ಥಗಳನ್ನು ಸಿದ್ಧಿಸುವ ಶಕ್ತಿ ಶ್ರೀ ವೀರಭದ್ರ ದೇವರದಲ್ಲಿದೆ. ಗ್ರಾಮದಲ್ಲಿನ ಶ್ರೀ ದೇವರ ದೇವಸ್ಥಾನದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಸರ್ವರ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಎಸ್.ಮಧುಬಂಗಾರಪ್ಪ ಅವರ ಮುಖೇನ ಸರ್ಕಾರದಿಂದ ಅನುದಾನಗಳನ್ನು ಕೊಡಿಸುವಂತೆ ವೇದಿಕೆಯಲ್ಲಿದ್ದ ರಾಜಕೀಯ ಮುಖಂಡರಲ್ಲಿ ಮನವಿ ಮಾಡಿದರು. ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್ ಮಾತನಾಡಿ, ಕ್ಷೇತ್ರದ ಶಾಸಕರಾದ ಎಸ್.ಮಧುಬಂಗಾರಪ್ಪ ಅವರು ಶಿಕ್ಷಣ ಸಚಿವರಾದ ತರುವಾಯ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಮಾತ್ರವಲ್ಲದೇ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ಈವರೆಗೂ ಆಗಿರದಂತಹ ಚಂದ್ರಗುತ್ತಿಯ ಅಭಿವೃದ್ಧಿ ಪ್ರಾಧಿಕಾರ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಗ್ರಾಮದಲ್ಲಿನ ದೇವಸ್ಥಾನದ ಅಭಿವೃದ್ಧಿಗೆ ಸಚಿವರ ಗಮನಕ್ಕೆ ತಂದು ಅನುದಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು. ಗ್ರಾಪಂ ಅಧ್ಯಕ್ಷ ಕೆ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಬಿಜೆಪಿ ಮುಖಂಡ ಗುರುಪ್ರಸನ್ನಗೌಡ ಬಾಸೂರು, ಪ್ರಮುಖರಾದ ಮೋಹನ್ ಕುಮಾರ್ ಜಡ್ಡಿಹಳ್ಳಿ, ಓ.ಬಿ.ರಾಜಶೇಖರ್ ಕೆರೆಕೊಪ್ಪ ಸೇರಿದಂತೆ ಮತ್ತಿತರರಿದ್ದರು. ಶಿಕ್ಷಕ ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ಕೆ. ಪುಟ್ಟನಹಳ್ಳಿ ಸ್ವಾಗತಿಸಿ, ಬಾಲಚಂದ್ರ ನಿರೂಪಿಸಿದರು.