ಸಾರಾಂಶ
ವಿದ್ಯುತ್ ಅಪಘಾತ ತಡೆ, ಅವುಗಳಿಂದ ರಕ್ಷಣೆ ಕುರಿತ ಪ್ರಬಂಧ, ಭಾಷಣ ಸ್ಪರ್ಧೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ಚಾಲನೆ
ಕನ್ನಡಪ್ರಭ ವಾರ್ತೆ ತುಮಕೂರುವಿದ್ಯುತ್ ಉಳಿತಾಯ ಮತ್ತು ವಿದ್ಯುತ್ ಅಪಘಾತಗಳಿಂದ ಜನರ ಪ್ರಾಣ ರಕ್ಷಿಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ ಎಂದು ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಬೆಸ್ಕಾಂ ತುಮಕೂರು ವಿಭಾಗ, ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿದ್ಯುತ್ ಅಪಘಾತ ತಡೆ ಮತ್ತು ಅವುಗಳಿಂದ ರಕ್ಷಣೆ ಕುರಿತ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಪಡೆಯುವುದಕ್ಕಿಂತಲೂ, ವಿಷಯವನ್ನು ಅರಿತು, ಅದನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕೆಂದರು. ವಿದ್ಯಾರ್ಥಿಗಳು ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವೇದಿಕೆಯ ಭಯ(ಸ್ಟೇಜ್ ಫೀಯರ್) ದೂರವಾಗುತ್ತದೆ. ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸ್ಥೈರ್ಯ ಬರುತ್ತದೆ. ಭಾಷಣಗಳಿಂದ ಸಮೋಹನ ಕಲೆ ಕರಗತವಾಗಿ, ಒಳ್ಳೆಯ ನಾಯಕರಾಗಿ ಬೆಳೆಯಲು ಸಹಕಾರಿಯಾಗಲಿದೆ. ಹಾಗಾಗಿ ಮಕ್ಕಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ, ಒಳ್ಳೆಯ ವಿಷಯಗಳನ್ನು ಬರೆದು, ಭಾಷಣ ಮಾಡಿ, ಹೆಸರು ಗಳಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಸ್ಕಾಂ ಇಇ ಪ್ರಶಾಂತ ಕೂಡ್ಲಗಿ ಮಾತನಾಡಿ, ಮಕ್ಕಳಿಗೆ ವಿದ್ಯುತ್ ಅಪಘಾತ ಮತ್ತು ಅವುಗಳ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬೆಸ್ಕಾಂ ಹೈಸ್ಕೂಲ್ ಮಕ್ಕಳಿಗೆ ಚಿತ್ರಕಲೆ, ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದೆ. ಈಗಾಗಲೇ 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡು, ತಮ್ಮ ಚಿತ್ರಗಳನ್ನು ಇಲಾಖೆಗೆ ನೀಡಿದ್ದಾರೆ. ಅವುಗಳ ಮೌಲ್ಯಮಾಪನ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಫಲಿತಾಂಶ ಹೊರಬೀಳಲಿದೆ. ಇಂದು ನಡೆಯುವ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯ ತೀರ್ಪುಗಾರರಾಗಿ ಬೆಸ್ಕಾಂ ಎಇಇಗಳು ಕಾರ್ಯನಿರ್ವಹಿಸಲಿದ್ದು, ಮೌಲ್ಯಮಾಪನ ಮಾಡಿ, ವಿಜೇತರನ್ನು ಆಯ್ಕೆ ಮಾಡಲಿದ್ದು, ಪ್ರಥಮ ಬಹುಮಾನವಾಗಿ 2 ಸಾವಿರ ರು., ದ್ವಿತೀಯ ಬಹುಮಾನವಾಗಿ 1 ಸಾವಿರ ರು., ತೃತೀಯ ಬಹುಮಾನವಾಗಿ 750 ರು., ನೀಡಲಾಗುವುದು ಎಂದರು.ಮಳೆ, ಗಾಳಿಗೆ ವಿದ್ಯುತ್ ಲೈನ್ ಬಿದ್ದು, ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು, ಅಲ್ಲದೆ ವದ್ದೆ ಕೈಯಿಂದ ಸುಚ್ ಮುಟ್ಟುವುದು, ಸುಚ್ ಆನ್ ಮಾಡಿ, ಮೊಬೈಲ್ ಮತ್ತು ಐರನ್ ಬಾಕ್ಸ್ ಚಾರ್ಜ್ ಹಾಕುವುದು ಮಾಡಬಾರದು. ಬೀದಿ ದೀಪಗಳನ್ನು ಆನ್ ಮಾಡುವಾಗ ಎಚ್ಚರ ವಹಿಸಬೇಕು. ಇದನ್ನು ನೀವು ತಿಳಿದು ಕೊಳ್ಳುವುದಲ್ಲದೆ, ನಿಮ್ಮ ಪೋಷಕರಿಗೂ ತಿಳಿಸಬೇಕೆಂದು ಸಲಹೆ ನೀಡಿದರು.
ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಸಿ.ಎಸ್. ಬಸವರಾಜಯ್ಯ ಮಾತನಾಡಿ, ವಿದ್ಯುತ್ ಉಳಿತಾಯ, ವಿದ್ಯುತ್ ಸುರಕ್ಷತೆಯ ಜೊತೆಗೆ, ವಿದ್ಯುತ್ ಪೋಲಾಗದಂತೆಯೂ ನಾವೆಲ್ಲರೂ ಗಮನಹರಿಸಬೇಕಿದೆ. ಅಗತ್ಯವಿದ್ದಾಗ ಮಾತ್ರ ವಿದ್ಯುತ್ ದೀಪಗಳನ್ನು ಬಳಸಬೇಕು. ವಿದ್ಯುತ್ ಎಷ್ಟು ಉಪಯೋಗವೋ, ಅಷ್ಟೇ ಅಪಾಯಕಾರಿಯೂ ಹೌದು. ಹಾಗಾಗಿ ವಿವೇಚನೆಯಿಂದ ನಡೆದುಕೊಳ್ಳುವಂತೆ ಸಲಹೆ ನೀಡಿದರು.ತುಮಕೂರು ತಾಲೂಕಿನ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು, ವಿದ್ಯುತ್ ಸುರಕ್ಷತೆ ಮತ್ತು ಅನುಸರಿಸಬೇಕಾದ ಕ್ರಮಗಳ ಕುರಿತು ಭಾಷಣ ಮತ್ತು ಪ್ರಬಂಧ ಮಂಡಿಸಿದರು. ವೇದಿಕೆಯಲ್ಲಿ ಬೆಸ್ಕಾಂ ಎಇಇಗಳಾದ ಜಲ್ಲೇಶ್ ಬಿ.ಎನ್., ಗುರುರಾಜ್ ಟಿ., ಹರೀಶ್, ನಾಗರಾಜು, ಜಗದೀಶ್ ಜಿ., ನಟರಾಜು, ಜಿ.ಎಚ್.ಆರ್. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.