ಸಾರಾಂಶ
ಭದ್ರಾವತಿ ತಹಸೀಲ್ದಾರ್ ಆಗಿದ್ದವರು ನಿಯಮ ಮೀರಿ ಅರಣ್ಯ ಪ್ರದೇಶಕ್ಕೆ ಸಾಗುವಳಿ ಚೀಟಿ, ಪಹಣಿ ನೀಡಿ ಜಮೀನು ಮಂಜೂರಾತಿ ಮಾಡಿದ್ದ ಬಗ್ಗೆ ಭದ್ರಾವತಿಯ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ 6 ತಿಂಗಳ ಹಿಂದೆಯೇ ಸೂಕ್ತ ಕ್ರಮಕ್ಕಾಗಿ ಡಿಸಿಗೆ ದೂರು ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಜಿಲ್ಲಾಧಿಕಾರಿ ಕ್ರಮ ಜರುಗಿಸಿಲ್ಲ. ಹೀಗೆಂದು ಶಿವಕುಮಾರ್ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಭದ್ರಾವತಿ
ಈ ಹಿಂದಿನ ತಹಸೀಲ್ದಾರ್ ಆರ್. ಪ್ರದೀಪ್ ನಿಯಮ ಮೀರಿ ಅರಣ್ಯ ಪ್ರದೇಶಕ್ಕೆ ಸಾಗುವಳಿ ಚೀಟಿ, ಪಹಣಿ ನೀಡಿ ಜಮೀನು ಮಂಜೂರಾತಿ ಮಾಡಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ 6 ತಿಂಗಳ ಹಿಂದೆಯೇ ದೂರು ಸಲ್ಲಿಸಲಾಗಿದೆ. ಆದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆರೋಪಿಸಿದ್ದಾರೆ.ತಾಲೂಕು ಹೊಳೆಹೊನ್ನೂರು ಹೋಬಳಿ ಮಲ್ಲಾಪುರ ಗ್ರಾಮದ ಸರ್ವೆ ನಂ.87ರಲ್ಲಿ ಮಲ್ಲೇಶಪ್ಪ ಬಿನ್ ಮಲ್ಲಾರಪ್ಪ ಎಂಬವರಿಗೆ ಸಾಗುವಳಿ ಚೀಟಿ ನೀಡಿ, ಪಹಣಿ ಹಾಗೂ ಎಂ.ಆರ್.ಎಚ್ 21/2022-23ರಲ್ಲಿ 4.5 ಎಕರೆ ಜಮೀನು ಮಂಜೂರು ಮಾಡಿದ್ದಾರೆ. ಮಲ್ಲಾಪುರದ ಸರ್ವೆ ನಂ.87 ಮೀಸಲು ಅರಣ್ಯ ಪ್ರದೇಶವಾಗಿದೆ. ಮಲ್ಲೇಶಪ್ಪ ಅವರು ಅರಣ್ಯಾಧಿಕಾರಿಗಳಿಂದ ಎನ್‌ಒಸಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಅದರಂತೆ ವಲಯ ಅರಣ್ಯಾಧಿಕಾರಿ ಶಾಂತಿಸಾಗರ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಚನ್ನಗಿರಿ ಉಪವಿಭಾಗ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಭದ್ರಾವತಿ ವಿಭಾಗದವರು ಸ್ಥಳ ಪರಿಶೀಲಿಸಿ 3.30 ಗುಂಟೆ ಜಮೀನು ಅರಣ್ಯ ಇಲಾಖೆಯ ಮೀಸಲು ಅರಣ್ಯ ಪ್ರದೇಶ ಎಂದು ಎನ್‌ಒಸಿ ನೀಡಲು ಬರುವುದಿಲ್ಲ ಎಂದು 2023ರ ಜ.2ರಲ್ಲಿ ತಿಳಿಸಿದ್ದಾರೆ ಎಂದಿದ್ದಾರೆ.
ಆದರೆ ಇದ್ಯಾವುದನ್ನು ಗಮನಿಸದೇ ತಾಲೂಕು ಬಗರ್‌ಹುಕುಂ ಕಮಿಟಿಯಲ್ಲಿ ಏಕಪಕ್ಷಿಯವಾಗಿ ಉಳುಮೆ ಮಾಡದ, ಹಾಲಿ ಮರ -ಗಿಡಗಳಿಂದ ಕೂಡಿರುವ ಅರಣ್ಯ ಪ್ರದೇಶಕ್ಕೆ ತಹಸೀಲ್ದಾರ್ ಹುದ್ದೆಯಲ್ಲಿದ್ದ ಆರ್. ಪ್ರದೀಪ್ ಸಾಗುವಳಿ ಚೀಟಿ, ಪಹಣಿ ನೀಡಿ, ಜಮೀನು ಮಂಜೂರಾತಿ ಮಾಡಿದ್ದಾರೆ. ಇದರಲ್ಲಿ ಅವ್ಯವಹಾರ ನಡೆದಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆ ಅಂದಿನ ತಹಸೀಲ್ದಾರ್ ಆಗಿದ್ದ ಆರ್.ಪ್ರದೀಪ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅವ್ಯವಹಾರದಲ್ಲಿ ಭಾಗಿಯಾಗಿರುವ ತಾಲೂಕು ಕಚೇರಿ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಸಹ ಕ್ರಮ ಕೈಗೊಳ್ಳುವಂತೆ ಶಿವಕುಮಾರ್ ದೂರು ಸಲ್ಲಿಸಿದ್ದರು. ಇನ್ನಾದರೂ ಜಿಲ್ಲಾಡಳಿತ, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಜರುಗಿಸಲು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.- - - -ಡಿ9-ಬಿಡಿವಿಟಿ3: ಶಿವಕುಮಾರ್