ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಅನಿವಾರ್ಯತೆ: ಎಚ್.ಡಿ.ಕುಮಾರಸ್ವಾಮಿ

| Published : Apr 30 2024, 02:07 AM IST

ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಅನಿವಾರ್ಯತೆ: ಎಚ್.ಡಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೋಣಂದೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಬಿ.ವೈ.ರಾಘವೇಂದ್ರ, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಇದ್ದರು

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ದೇಶದ ಸುಭದ್ರತೆ ಮತ್ತು ಆರ್ಥಿಕ ದೃಷ್ಟಿಕೋನದ ಹಿನ್ನೆಲೆ ಭಾರತಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಅನಿವಾರ್ಯತೆ ಇದೆ. ಜಗತ್ತಿನ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ದೇಶ ಕೊಂಡೊಯ್ಯುತ್ತಿರುವ ಮೋದಿಯವರ ನಾಯಕತ್ವವನ್ನು ವಿದೇಶಿಯರೂ ಮೆಚ್ಚಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕೋಣಂದೂರಿನಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಮತಯಾಚನೆ ಮಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಅಬಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಬಿಡಗಾಸು ಬಿಡುಗಡೆಯಾಗುತ್ತಿಲ್ಲಾ. ಸಾಲದ್ದಕ್ಕೆ ರಾಜ್ಯದ ಪ್ರತಿ ವ್ಯಕ್ತಿ ತಲೆ ಮೇಲೆ ತಲಾ ₹36000 ಸಾಲದ ಹೊರೆ ಹೇರಲಾಗಿದೆ ಎಂದೂ ಲೇವಡಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳು ಸಂದಿದೆ. ಈ ವರೆಗೆ ಯಾವುದೇ ಜನಪರವಾದ ಕಾರ್ಯಗಳು ಜಾರಿಯೂ ಅಗಿಲ್ಲಾ. ತೆರಿಗೆ ರೂಪದಲ್ಲಿ ಸಂಗ್ರಹವಾದ ಹಣವನ್ನು ಅನಗತ್ಯವಾಗಿ ವ್ಯಯಿಸಿದ ಕಾರಣ ಅಭಿವೃದ್ಧಿ ಕಾರ್ಯಗಳಿಗೂ ಹಣ ಬಿಡುಗಡೆ ಆಗುತ್ತಿಲ್ಲಾ. ಕೇಂದ್ರ ಸರ್ಕಾರದ ಜೊತೆ ಸಂಘರ್ಷ ನಡೆಸಲಾಗುತ್ತಿದೆ. ಪರಿಶಿಷ್ಟ ಸಮುದಾಯದ ₹11000 ಕೋಟಿ ಹಣವನ್ನೂ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲಾಗಿದೆ. ಗ್ಯಾರಂಟಿ ರೂಪದಲ್ಲಿ ಕೊಟ್ಟು ಇನ್ನೊಂದೆಡೆಯಿಂದ ಪಿಕ್ ಪಾಕೆಟ್ ಮಾಡುತ್ತಿದೆ. ರಾಜ್ಯದ ಜನರು ಇದಕ್ಕೆ ತಕ್ಕ ಬೆಲೆ ತೆರಬೇಕಾಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಬರಗಾಲದಿಂದ ಜನರು ತತ್ತರಿಸುತ್ತಿದ್ದರು, ಆ ಬಗ್ಗೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಚುನಾವಣೆ ಕಾರ್ಯದಲ್ಲಿ ನಿರತವಾಗಿದೆ. ಬರ ಪರಿಹಾರದ ಸಲುವಾಗಿ ರಾಜ್ಯ ಸರ್ಕಾರ ₹18500 ಕೋರಿಕೆ ಸಲ್ಲಿಸಿದ ಮೇರೆಗೆ ಕೇಂದ್ರ ಸರ್ಕಾರ ₹3454 ಕೋಟಿ ಬಿಡುಗಡೆ ಮಾಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ ₹1500 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು. ಬಿ.ವೈ.ರಾಘವೇಂದ್ರ್ರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಅನುದಾನ ಹರಿದು ಬಂದಿದೆ ಎಂದೂ ಹೇಳಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕಾಂಗ್ರೆಸ್ಸಿನ 65 ವರ್ಷಗಳ ಆಡಳಿತದಲ್ಲಿ ಹೀನಸ್ಥಿತಿ ತಲುಪಿದ್ದ ದೇಶದ ಭವಿಷ್ಯವನ್ನು ಕಳೆದ 10 ವರ್ಷಗಳಲ್ಲಿ ಮೋದಿ ಬದಲಾಯಿಸಿದ್ದು, ಆರ್ಥಿಕವಾಗಿ 5ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಹೀಗಾಗಿ ದೇಶದಲ್ಲಿ ನಡೆದಿರುವ ಚುನಾವಣೆ ಇಡೀ ವಿಶ್ವದ ಗಮನ ಸೆಳೆದಿದ್ದು ನರೇಂದ್ರ ಮೋದಿಯವರು ಮತ್ತೊಮ್ಮೆ ಈ ದೇಶದ ಆಡಳಿತದ ಚುಕ್ಕಾಣಿ ಹಿಡಯಬೇಕೆಂಬ ಆಶಯ ಹೊಂದಿದೆ. ಸಂಸದ ರಾಘವೇಂದ್ರರ ಹಿಂದಿನ ಅವಧಿಯಲ್ಲಿ ಈ ಕ್ಷೇತ್ರಕ್ಕೆ ₹1500 ಕೋಟಿಗೂ ಮಿಕ್ಕಿ ಅನುದಾನ ಬಂದಿದೆ. ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರನ್ನು ಅವಮಾನಿಸುತ್ತಿರುವ ಸಿದ್ದು-ಡಿಕೆಶಿ ನೇತೃತ್ವದ ಸರ್ಕಾರ ಯಾರಪ್ಪನ ಹಣ ಅಂತ ಈ ಯೋಜನೆಗೆ ವೆಚ್ಚ ಮಾಡುತ್ತೀರಿ ಎಂದೂ ವಾಗ್ದಾಳಿ ನಡೆಸಿದರು.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಕಳೆದ ಅವಧಿಯಲ್ಲಿ ನಿಮ್ಮಗಳ ಆಶೀರ್ವಾದದಿಂದ ಗೆದ್ದು ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿ ಸೇತುವೆ ಕುಡಿವ ನೀರು ಮುಂತಾದ ಯೋಜನೆಗಳಿಗೆ ₹20 ಸಾವಿರ ಕೋಟಿಗೂ ಮಿಕ್ಕಿ ಅನುದಾನ ತಂದಿದ್ದೇನೆ. ಮಡಬೆಕಾದ ಹಲವಾರು ಕಾರ್ಯಗಳಲ್ಲಿ ಭದ್ರಾವತಿ ವಿಐಎಸ್‍ಎಲ್, ಮುಳುಗಡೆ ಸಂತ್ರಸ್ಥರು ಅರಣ್ಯ ಭೂಮಿ ಸೇರಿ ಜಿಲ್ಲೆಯಲ್ಲಿ ಹಲವಾರು ಗಂಭೀರ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಅತ್ಯಂತ ಸುರಕ್ಷಿತವಾಗಿದೆ. ಮತ್ತು ನೆರೆರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಅನಿವಾಸಿ ಭಾರತೀಯರೂ ಸ್ವಾಭಿಮಾನದ ಜೀವನ ನಡೆಸುವಂತಾಗಿದೆ. ಪ್ರಜಾತಂತ್ರ ವ್ಯವಸ್ಥೆ ಹಾಗೂ ಪತ್ರಿಕಾ ಮಾಧ್ಯಮದ ಸ್ವಾತಂತ್ರ್ಯಕ್ಕೂ ಆದ್ಯತೆ ನೀಡಲಾಗಿದೆ.

ಕರಾವಳಿ ಮಲೆನಾಡಿನ ಸಂಪರ್ಕ ಸುಗಮಗೊಳಿಸುವ ಸಲುವಾಗಿ ಆಗುಂಬೆ ಘಾಟಿ ಮಾರ್ಗದಲ್ಲಿ ಸುರಂಗ ನಿರ್ಮಿಸಲು ಡಿಪಿಆರ್ ಸಿದ್ಧವಾಗಿದೆ. ₹300 ಕೋಟಿ ವೆಚ್ಚದ ಈ ಕಾಮಗಾರಿ ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 12 ಕಿಮೀ ಉದ್ದ ಸುರಂಗ ನಿರ್ಮಾಣವಾಗಲಿದೆ ಎಂದರು.

ವೇದಿಕೆಯಲ್ಲಿ ಹೆದ್ದೂರು ನವೀನ್, ಕಡಿದಾಳು ಗೋಪಾಲ್, ಕುಣಜೆ ಕಿರಣ್, ಹರತಾಳು ಹಾಲಪ್ಪ, ರಘುಪತಿ ಭಟ್, ಪ್ರಸನ್ನಕುಮಾರ್, ಬೇಗುವಳ್ಳಿ ಸತೀಶ್, ರಾಘವೇಂದ್ರ ನಾಯಕ್, ಪುಣ್ಯಪಾದ,ಟಿ.ಮಂಜುನಾಥ್, ಚಂದವಳ್ಳಿ ಸೋಮಶೇಕರ್, ಪ್ರಶಾಂತ್ ಕುಕ್ಕೆ ಇದ್ದರು.