ಸಾರಾಂಶ
ಸಿಐಟಿಯು ರಾಜ್ಯ ಕಾರ್ಯದರ್ಶಿ ಹೇಳಿಕೆ । ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಪದಾಧಿಕಾರಿಗಳ ಸಭೆಕನ್ನಡಪ್ರಭ ವಾರ್ತೆ ಕೊಪ್ಪಳ
ಕಟ್ಟಡ ಕಾರ್ಮಿಕರು ಜೀವ ಹಾಗೂ ಸುರಕ್ಷತೆ ಬದುಕಿಗಾಗಿ ಸಂಘಟಿತರಾಗಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ ಹೇಳಿದರು.ನಗರದಲ್ಲಿ ಜರುಗಿದ ಕಲಬುರಗಿ-ಬೆಳಗಾವಿ ಕಾರ್ಮಿಕ ವಿಭಾಗಗಳ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.
ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಪ್ರತಿನಿತ್ಯ ಅವಘಡ ಸಂಭವಿಸುತ್ತಿವೆ. ದುಡಿಯುತ್ತಿರುವ ಕಾರ್ಮಿಕರ ಜೀವಕ್ಕೆಮತ್ತು ಬದುಕಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಆದ್ದರಿಂದ ಕಟ್ಟಡ ಕಾರ್ಮಿಕರು ಕೇವಲ ಕಲ್ಯಾಣ ಮಂಡಳಿ ಸೌಲಭ್ಯಗಳಿಗಾಗಿ ಮಾತ್ರ ಸಂಘಟಿತರಾದರೆ ಪ್ರಯೋಜನವಿಲ್ಲ, ಬದಲಾಗಿ ಜೀವ ಹಾಗೂ ಬದುಕಿನ ರಕ್ಷಣೆಗಾಗಿ ಸಂಘಟಿತರಾಗಬೇಕು ಎಂದರು.ಕಟ್ಟಡ ನಿರ್ಮಾಣಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕಟ್ಟಡ ಕಾರ್ಮಿಕ ಕಾನೂನು ಜಾರಿಗೊಳಿಸಲು, ಕಲ್ಯಾಣ ಮಂಡಳಿ ರಚನೆಯಾಗಲು ಹಾಗೂ ಸೌಲಭ್ಯಗಳನ್ನು ಜಾರಿಗೊಳಿಸುವಲ್ಲಿಯೂ ಕಟ್ಟಡ ನಿರ್ಮಾಣ ಕಾರ್ಮಿಕರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ ಕೇವಲ ಅವರಲ್ಲಿ ಸೌಲಭ್ಯಗಳಿಗಾಗಿ ಮಾತ್ರ ಜಾಗೃತಿ ಮೂಡಿದರೆ ಸಾಲದು. ಕೆಲಸದ ಸ್ಥಳಗಳಲ್ಲಿ ಅಗತ್ಯ ಸುರಕ್ಷತೆಯ ಕ್ರಮಗಳಿಗಾಗಿ ಹೋರಾಡುವಂತೆ ಕಾರ್ಮಿಕ ಸಂಘಗಳು ಕೆಲಸ ಮಾಡಬೇಕಿದೆ. ಕಲಬುರಗಿ ಹಾಗೂ ಬೆಳಗಾವಿ ವಿಭಾಗದಲ್ಲಿ ಇರುವ ಲಕ್ಷಾಂತರ ಕಾರ್ಮಿಕರಲ್ಲಿ ಸಂಘಟನೆ ಪ್ರಜ್ಞೆ ಹೆಚ್ಚಿಸಲು ನಮ್ಮ ಸಂಘಗಳು ಶ್ರಮಿಸಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಫೆಡರೇಶನ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಎರಡು ವಿಭಾಗಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಸಂಘಟಿಸಲು ಕಟ್ಟಡ ಕಾರ್ಮಿಕ ಜಿಲ್ಲಾ ಸಮಿತಿಗಳು ವಹಿಸಬೇಕಾದ ಕ್ರಮಗಳು, ನಿವಾರಿಸಿಕೊಳ್ಳಬೇಕಾದ ನ್ಯೂನತೆಗಳು, ಸಂಘಟನಾ ಕ್ರಮಗಳು, ಮುಂದಿನ ಗುರಿಗಳು ಕುರಿತು ಗಮನಹರಿಸಬೇಕು ಎಂದರು.ಸಿಐಟಿಯು ಜಿಲ್ಲಾ ಅಧ್ಯಕ್ಷ ನಿರುಪಾದಿ ಬೆಣಕಲ್, ರಾಜ್ಯ ಉಪಾಧ್ಯಕ್ಷ ಖಾಸಿಂ ಸರ್ದಾರ್, ಜಿಲ್ಲಾ ಪದಾಧಿಕಾರಿಗಳಾದ ಕಾಶಿ ಸರ್ದಾರ್, ನಾಗಯ್ಯ ಸ್ವಾಮಿ, ಯಲ್ಲಾಲಿಂಗ, ಶಬ್ಬೀರ್ ಜಾಲಹಳ್ಳಿ, ಗೌಸ್ ಪೀರ್, ಆನಂದರಾಜ, ಹೊನ್ನೂರು ಸಾಬ್, ಮೆಹಬೂಬ್, ಬಸವರಾಜ ಮಾಳಿಗಿ, ರಾಜು ಪಾಟೀಲ್, ರಂಗಪ್ಪ ದೊರೆಗಳ್, ಮಂಜುನಾಥ ಡಗ್ಗಿ, ಜಗನ್ನಾಥ, ರುದ್ರಪ್ಪ ನಾಯಕ್, ರಿಯಾಜ್ ಅಹ್ಮದ್ ಇತರರಿದ್ದರು.