ಪಡೆದ ಸಾಲ ಸದ್ಬಳಕೆಯಾಗುವುದು ಮುಖ್ಯ

| Published : Dec 16 2023, 02:00 AM IST

ಸಾರಾಂಶ

ಬ್ಯಾಂಕಿನಿಂದ ಸಾಲ ಪಡೆಯುವುದು ಮುಖ್ಯವಲ್ಲ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬ್ಯಾಂಕಿನಿಂದ ಸಾಲ ಪಡೆಯುವುದು ಮುಖ್ಯವಲ್ಲ. ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವುದು ಮುಖ್ಯ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.

ಜಿಪಂ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ಐ.ಸಿ.ಐ.ಸಿ ಬ್ಯಾಂಕ್, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಹಯೋಗದಲ್ಲಿ ಲಕಪತಿ ದಿದಿ ಎನ್.ಆರ್.ಎಲ್.ಎಂ ಯೋಜನೆಯಡಿ ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಕಿನಿಂದ ಸಾಲ ಪಡೆದು ಯಾವುದೇ ಉದ್ಯೋಗ ಕೈಗೊಂಡರು ಆತ್ಮ ಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವೆಂದರು.

ಹಿಂದಿನ ದಿನಗಳಲ್ಲಿ ಪುರುಷರು ಕೆಲಸ ಮಾಡುತ್ತಿದ್ದರೇ, ಮಹಿಳೆಯರು ಮನೆಗೆಲಸ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರು ಸಹ ತಮ್ಮಲ್ಲಿರುವ ಬುದ್ದಿ, ಶಕ್ತಿ ಉಪಯೋಗಿಸಿಕೊಂಡು ಕೆಲಸ ಮಾಡುವ ಮೂಲಕ ಸ್ವಾವಲಂಬಿಗಳಾಗಬೇಕು. ತಾವು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಲ್ಲಿ ಪ್ರಾರಂಭದಲ್ಲಿ ಲಾಭಾಂಶ ಕಡಿಮೆಯಾದರೂ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಆದರೆ, ಶ್ರದ್ದೆಯಿಂದ ಕೆಲಸ ನಿರ್ವಹಿಸಬೇಕು. ಮಹಿಳೆಯರು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಆಹಾರ ಉತ್ಪನ್ನಗಳನ್ನು ತಯಾರಿಸಿ, ಬ್ರ್ಯಾಂಡ್ ಮತ್ತು ಪ್ಯಾಕಿಂಗ್ ಮಾಡಿ ಮಾರಿದಲ್ಲಿ ಇನ್ನಷ್ಟು ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ವ್ಯಾಪಾರ ವಹಿವಾಟು ಸಹ ಹೆಚ್ಚಾಗುವುದು ಎಂದರು.

ಪ್ರಾಸ್ತಾವಿವಾಗಿ ಮಾತನಾಡಿದ ಜಿಪಂ ಯೋಜನಾ ನಿರ್ದೇಶಕ ಎನ್.ವೈ.ಬಸರಿಗಿಡದ ಅವರು ಮಹಿಳೆಯರು ಹೆಚ್ಚು ಹೆಚ್ಚು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿ ಹೆಚ್ಚಿನ ಆದಾಯ ಪಡೆದಯುವಂತೆ ಮಾಡುವ ಉದ್ದೇಶ ಕೇಂದ್ರ ಸರಕಾರ ಹೊಂದಿದೆ. ಇದಕ್ಕಾಗಿ ₹2 ಕೋಟಿ ಮಹಿಳೆಯರನ್ನು ಲಕಪತಿಗಳನ್ನಾಗಿ ಮಾಡುವುದು ಇದಕ್ಕೆ ಪೂರಕವಾಗಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ವಿವಿಧ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಬ್ಯಾಂಕ್ಗಳಿಂದ ಸಾಲ ನೀಡುವ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯ ಎಲ್ಲ ತಾಲೂಕು, ಗ್ರಾಮ ಪಂಚಾಯತ ಮಟ್ಟದಲ್ಲಿ ಹಾಗೂ ಬ್ಯಾಂಕ್ ಶಾಖಾ ಹಂತದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ವಿವಿಧ ಬ್ಯಾಂಕ್‌ಗಳ ಮೂಲಕ ಸಾಲ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಇಲ್ಲಿಯವರೆಗೆ ವಿವಿಧ ಬ್ಯಾಂಕ್‌ಗಳಿಗೆ 313 ಸ್ವ-ಸಹಾಯ ಗುಂಪುಗಳಿಂದ ₹4.46 ಕೋಟಿಗಳ ಸಾಲದ ಅರ್ಜಿಗಳನ್ನು ಸಲ್ಲಿಸಲಾಗಿದೆ. ಅದರಲ್ಲಿ 105 ಗುಂಪುಗಳಿಗೆ ₹2.17 ಕೋಟಿ ಸಾಲ ಮಂಜೂರಾತಿ ನೀಡಲಾಗಿದೆ. 25 ಸ್ವಸಹಾಯ ಗುಂಪುಗಳಿಗೆ ₹50 ಲಕ್ಷಗಳ ಸಾಲ ಖಾತೆಗೆ ಜಮಾ ಮಾಡಲಾಗಿದೆ. ಸ್ವ-ಸಹಾಯ ಗುಂಪುಗಳು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಧಾರವಾಡ ಐ.ಸಿ.ಐ.ಸಿ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥೆ ಅಪ್ರೀಲ್ ಮದಲಮಟ್ಟಿ, ಜಿಪಂ ಸಹಾಯಕ ಯೋಜನಾಧಿಕಾರಿ ಬಿ.ಡಿ.ತಳವಾರ, ಜಿಲ್ಲಾ ವ್ಯವಸ್ಥಾಪಕ ಭೀಮಾನಂದ ಶೆಟ್ಟರ, ಜಿಲ್ಲಾ ಸಮಾಲೋಚಕ ವೈ.ಕೆ.ಪಾರ್ಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

---

ಬಾಕ್ಸ್ . . .

₹1.92 ಕೋಟಿ ಸಾಲ ಮಂಜೂರಾತಿ ಪತ್ರ ವಿತರಣೆ

ಐ.ಸಿ.ಐ.ಸಿ ಬ್ಯಾಂಕ್‌ನಿಂದ 64 ಸ್ವ-ಸಹಾಯ ಗುಂಪುಗಳಿಗೆ ₹1.92 ಕೋಟಿಗಳ ಸಾಲ ಮಂಜೂರಾತಿ ನೀಡಲಾಗುತ್ತಿದ್ದು, ಈ ಪೈಕಿ ಸಾಂಕೇತಿಕವಾಗಿ ಕಿರಸೂರಿನ ಗೌರಿಶಂಕರ ಮಹಿಳಾ ಸ್ವ-ಸಹಾಯಕ ಸಂಘ, ಆನದಿನ್ನಿಯ ದುರ್ಗಾದೇವಿ ಮಹಿಳಾ ಸ್ವ-ಸಹಾಯಕ ಸಂಘ, ವೀರಾಪೂರಿನ ಮೈಲಾರಲಿಂಗೇಶ್ವರ ಎಸ್.ಎಚ್.ಜಿ, ಸೀಮಿಕೇರಿಯ ಕಾಳಿಕಾದೇವಿ ಎಸ್.ಎಚ್.ಜಿ ಹಾಗೂ ಮುರನಾಳ ಹಸನ್ ಡೋಂಗ್ರಿ ಸಂಜೀವಿನಿ ಎಸ್.ಎಚ್.ಜಿಗಳಿಗೆ ತಲಾ ₹4 ಲಕ್ಷಗಳ ಸಾಲ ಮಂಜೂರಾತಿ ಪತ್ರಗಳನ್ನು ಜಿ.ಪಂ ಸಿಇಓ ಶಶೀಧರ ಕುರೇರ್ ವಿತರಿಸಿದರು.