ದೊಡ್ಡಬಳ್ಳಾಪುರ: ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ ಶ್ರಮಿಸಬೇಕು ಎಂದು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಹೇಳಿದರು
ದೊಡ್ಡಬಳ್ಳಾಪುರ: ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ ಶ್ರಮಿಸಬೇಕು ಎಂದು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಹೇಳಿದರು.
ತಾಲೂಕಿನ ಮೆಳೆಕೋಟೆಯ ರಾಜೀವಗಾಂಧಿ ಸಮುದಾಯ ಭವನದಲ್ಲಿ ಶ್ರೀರಾಮಸುಬ್ಬಯ್ಯ ಸ್ಮಾರಕ ಪ್ರೌಢಶಾಲೆಯ 2002-03ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಶಿಕ್ಷಣ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಅವುಗಳಿಗೆ ನಾವೆಲ್ಲರೂ ಹೊಂದಿಕೊಳ್ಳಬೇಕಿದೆ. ಕೇವಲ ಅಂಕ ಗಳಿಸುವುದಷ್ಟೇ ಶಿಕ್ಷಣದ ಉದ್ದೇಶವಾಗಬಾರದು. ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು, ಮಾನವೀಯತೆ, ಸೃಜನಶೀಲತೆ ಹಾಗೂ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸುವುದೂ ಮುಖ್ಯವಾಗಿದೆ ಎಂದರು.
ಪ್ರತಿ ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಆಶಯದಿಂದ ತಮ್ಮ ವೃತ್ತಿ ಜೀವನದಲ್ಲಿ ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದೇನೆ. ಮಕ್ಕಳಿಗೆ ನೀಡಿದ ಶಿಸ್ತು ಹಾಗೂ ಮಾರ್ಗದರ್ಶನದ ಹಿಂದೆ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಉದ್ದೇಶವಿತ್ತು. ಶಿಕ್ಷಕರ ಜವಾಬ್ದಾರಿ ತರಗತಿಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿಯೂ ಮಹತ್ವದ್ದಾಗಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಜತೆಗೆ, ಮೊಬೈಲ್ ಹಾಗೂ ತಂತ್ರಜ್ಞಾನದ ಬಳಕೆಯಲ್ಲೂ ಪೋಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಓದಿನೊಂದಿಗೆ ಕ್ರೀಡೆ, ಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸುವ ವಾತಾವರಣವನ್ನು ಕಲ್ಪಿಸಬೇಕು ಎಂದು ಸಲಹೆ ನೀಡಿದರು.ಗಂಟಿಗಾನಹಳ್ಳಿ ಸಂದೀಪ್ ಮಾತನಾಡಿ, ಅಂದಿನ ಶಿಕ್ಷಣ ವ್ಯವಸ್ಥೆ ಬೇರೆಯೇ ಆಗಿತ್ತು. ಇಂದಿನ ಶಿಕ್ಷಣ ಸಂಪೂರ್ಣ ಬದಲಾಗಿದೆ. ಮಕ್ಕಳಿಗೆ ಸಾಮಾನ್ಯ ಜ್ಞಾನ, ಸಂಸ್ಕಾರದ ಜೊತೆಗೆ ಶಿಕ್ಷಣ ಕಲಿಸುವ ಅಗತ್ಯತೆ ತೀವ್ರವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಸಸಿಗಳನ್ನು ನೆಡಲಾಯಿತು. ನಿವೃತ್ತ ಶಿಕ್ಷಕರಾದ ಯೋಗನರಸಿಂಹಮೂರ್ತಿ, ಆಶಾ, ಸುಜಾತಾ, ಕುಮಾರಸ್ವಾಮಿ, ಶರಣಪ್ಪ, ಹಳೆಯ ವಿದ್ಯಾರ್ಥಿಗಳಾದ ಅಶೋಕ್, ಅಶ್ವಥ್, ಸಿಂಧು ಮತ್ತಿತರರು ಉಪಸ್ಥಿತರಿದ್ದರು.4ಕೆಡಿಬಿಪಿ6-
ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆಯಲ್ಲಿ ಶ್ರೀರಾಮಸುಬ್ಬಯ್ಯ ಸ್ಮಾರಕ ಪ್ರೌಢಶಾಲೆಯ 2002-03ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನೀಲಕಂಠ ಗವಾಂಕರ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.