ಗ್ರಾಹಕರ ಹಕ್ಕು, ಕಾಯ್ದೆಗಳ ಮಾಹಿತಿ ಹೊಂದಿರುವುದು ಅವಶ್ಯ: ಎಡಿಸಿ ಮಮತಾ ದೇವಿ

| Published : Dec 25 2024, 12:49 AM IST

ಗ್ರಾಹಕರ ಹಕ್ಕು, ಕಾಯ್ದೆಗಳ ಮಾಹಿತಿ ಹೊಂದಿರುವುದು ಅವಶ್ಯ: ಎಡಿಸಿ ಮಮತಾ ದೇವಿ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಎಸ್.ಎಂ.ಎಸ್.ಪಿ. ಸಂಸ್ಕೃತ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನವನ್ನು ಆಚರಿಸಲಾಯಿತು.

ಉಡುಪಿ: ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಕನ್ನಡಪ್ರಭ ವಾರ್ತೆ ಉಡುಪಿ

ಗ್ರಾಹಕರ ರಕ್ಷಣೆಗಾಗಿಯೇ ಇರುವ ಹಕ್ಕು, ಕಾನೂನುಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡರೆ ಮಾತ್ರ ದೈನಂದಿನ ಸರಕು ಮತ್ತು ಸೇವೆಗಳನ್ನು ಪಡೆಯುವಾಗ ಎದುರಿಸುವ ವಂಚನೆ ಮತ್ತು ಮೋಸದಿಂದ ಪಾರಾಗಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಹೇಳಿದರು.ಅವರು ಮಂಗಳವಾರ ನಗರದ ಎಸ್.ಎಂ.ಎಸ್.ಪಿ. ಸಂಸ್ಕೃತ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಗ್ರಾಹಕರ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪಿ.ಆರ್. ಯೋಗೀಶ್ ಮಾತನಾಡಿ, ಗ್ರಾಹಕರ ರಕ್ಷಣಾ ಕಾಯ್ದೆಯನ್ನು 1986ರಲ್ಲಿ ಜಾರಿಗೆ ತರಲಾಗಿದೆ. ಈ ಹಿಂದೆ ವಸ್ತುಗಳನ್ನು ನೇರವಾಗಿ ಹಣ ಪಾವತಿಸಿ ಖರೀದಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕ ವಸ್ತುಗಳ ಖರೀದಿ ಹಾಗೂ ಸೇವೆಯನ್ನು ಪಡೆಯುತ್ತಿದ್ದೇವೆ. ಹೊಸ ಸವಲತ್ತುಗಳೊಂದಿಗೆ ಹೊಸ ಸಮಸ್ಯೆಗಳು ಉದ್ಭವಿಸಿದ್ದರಿಂದ ಕೆಲವು ಬದಲಾವಣೆಗಳೊಂದಿಗೆ ಗ್ರಾಹಕರ ರಕ್ಷಣೆಗೆ 2019ರಲ್ಲಿ ಹೊಸ ಕಾಯ್ದೆ ಜಾರಿ ಮಾಡಲಾಯಿತು ಎಂದರು.ಗ್ರಾಹಕ ತನ್ನ ಸೇವೆಯಿಂದ ವಂಚಿತನಾದಾಗ ತ್ವರಿತ ನ್ಯಾಯ ಪಡೆಯಲು ಆನ್ಲೈನ್ ಮೂಲಕ ಅಥವಾ ಬಳಕೆದಾರರ ವೇದಿಕೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಇದರಿಂದ ಕಡಿಮೆ ಶುಲ್ಕದಲ್ಲಿ ಶೀಘ್ರವಾಗಿ ತೀರ್ಪು ದೊರಕಿಸಿಕೊಡುವಲ್ಲಿ ಬಳಕೆದಾರರ ವೇದಿಕೆಯು ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಹಾಗೂ ಬಳಕೆದಾರರ ವೇದಿಕೆಯ ಮಾಜಿ ಸಂಚಾಲಕ ಎ.ಪಿ.ಕೊಡಂಚ ಉಪನ್ಯಾಸ ನೀಡಿದರು. ಸಂಸ್ಕೃತ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಸತ್ಯನಾರಾಯಣ ಪಿ. ರಾವ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಮಾನಸ ಸಿ. ಪೈ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಸುನಿಲ್‌ ತಿ. ಮಾಸರಡ್ಡಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಸುಜಾತಾ ಬಿ., ಬಳಕೆದಾರರ ವೇದಿಕೆಯ ಸಂಚಾಲಕ ಯು.ಜಿ. ಕಾಮತ್, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ವಿ. ಎಡ್ಕೆ ಉಪಸ್ಥಿತರಿದ್ದರು.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ ಸ್ವಾಗತಿಸಿದರು. ಬಳಕೆಯ ವೇದಿಕೆಯ ಹರಿಕೃಷ್ಣ ಶಿವತ್ತಾಯ ನಿರೂಪಿಸಿ, ವಂದಿಸಿದರು.