ಸಂಘಟನೆ ಪ್ರಾರಂಭಿಸುವುದು ಸುಲಭ. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅದನ್ನು ಮುಂದುವರಿಸಿಕೊಂಡು ಹೋಗುವುದು ಮುಖ್ಯ.

ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಸಂಘಟನೆ ಪ್ರಾರಂಭಿಸುವುದು ಸುಲಭ. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅದನ್ನು ಮುಂದುವರಿಸಿಕೊಂಡು ಹೋಗುವುದು ಮುಖ್ಯ. ಕದಂಬ ಸೈನ್ಯ ಕನ್ನಡ ಪರ ಸಂಘಟನೆ ಇದು ಉತ್ತಮವಾದ ಕಾರ್ಯ ನಡೆಸುವ ಮೂಲಕ ಕನ್ನಡದ ಕುರಿತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಹಿರೇಕೇರೂರಿನ ಸಾಮಾಜಿಕ ಕಾರ್ಯಕರ್ತ ರಮೇಶ ಹನುಮಂತಪ್ಪ ಹಡಗದ ಹೇಳಿದರು.

ತಾಲೂಕಿನ ಶ್ರೀ ಕ್ಷೇತ್ರ ಭುವನಗಿರಿಯ ಶ್ರೀಭುವನೇಶ್ವರಿ ದೇವಾಲಯದ ಸಭಾಭವನದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂಘಟನೆಯಲ್ಲಿ ಹುದ್ದೆ ಮುಖ್ಯವಲ್ಲ. ಉತ್ತಮ ಕೆಲಸ ಮಾಡಿ ನಾಡು, ನುಡಿಯ ರಕ್ಷಣೆ ಮಾಡುವುದು ಮುಖ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕದಂಬ ಸೈನ್ಯ ಕನ್ನಡ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಮಾತನಾಡಿ, ನಾವು ಕನ್ನಡಿಗರು ಎನ್ನುವುದನ್ನು ಮರೆತಿದ್ದೇವೆ. ಮೊದಲು ನಾವು ಕನ್ನಡದವರಾಗಬೇಕು. ನಾವೆಲ್ಲ ಕನ್ನಡಿಗರ ಕುಲಮಕ್ಕಳು. ನಮ್ಮ ಭಾಷೆಯ ಬಗ್ಗೆ ನಮ್ಮ ನೆಲದ ಬಗ್ಗೆ ನಾವು ಜಾಗೃತರಾಗಿರಬೇಕು ಎಂದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹೆಗಡೆ ಹಾರ್ಸಿಮನೆ, ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ, ತಾಲೂಕು ಭಾರತ ಸೇವಾದಳದ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ, ಎಂ.ಪಿ. ಮುಳಗುಂದ ಗದಗ, ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ, ದೇವಾಲಯದ ಉಪಾಧ್ಯಕ್ಷ ಸಿ.ಎನ್. ಹೆಗಡೆ ಗುಂಜಗೋಡ, ಕದಂಬ ಸೈನ್ಯದ ಜಿಲ್ಲಾಧ್ಯಕ್ಷ ಗುತ್ಯಪ್ಪ ಮಾದರ ಬನವಾಸಿ ಹಾಗೂ ವಿವಿಧ ಜಿಲ್ಲೆಯ ಕದಂಬ ಸೈನ್ಯ ಕನ್ನಡ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭ ಪತ್ರಕರ್ತ ಬನವಾಸಿ ಸುಧೀರ ಆರ್.ನಾಯರ್ ಅವರಿಗೆ ಕದಂಬ ಕಾಕುತ್ಸವರ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲೆಯ ಹಾಗೂ ವಿವಿಧ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರಿಗೆ ವೀರರಾಣಿ ಚೆನ್ನಬೈರಾದೇವಿ, ಕದಂಬ ರಂಗ ರತ್ನ, ಕದಂಬ ರತ್ನ, ಕದಂಬ ಪ್ರಗತಿಪರ ರೈತ, ಕದಂಬ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘಟನೆಯ ಉದಯಕುಮಾರ ಕಾನಳ್ಳಿ ಬನವಾಸಿ ಪ್ರಾಸ್ತಾವಿಕ ಮಾತನಾಡಿದರು.

ಐತಿಹಾಸಿಕ ಕ್ಷೇತ್ರವಾದ ಬನವಾಸಿ ಅಭಿವೃದ್ಧಿ ಪ್ರಾಧಿಕಾರದಂತೆ ಭುವನಗಿರಿಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಭುವನಗಿರಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಬೇಕು ಎಂದು ಉಪಸ್ಥಿತರಿದ್ದ ಗಣ್ಯರು ಸರ್ಕಾರವನ್ನು ಆಗ್ರಹಿಸಿದರು.