ಜನ ಪ್ರತಿನಿಧಿಗಳಿಂದ ಭದ್ರಾ ಕಾಮಗಾರಿ ಪೂರ್ಣ ಅಸಾಧ್ಯ

| Published : Jan 11 2025, 12:45 AM IST

ಸಾರಾಂಶ

ನಾಯಕನಹಟ್ಟಿಯಲ್ಲಿ ನಡೆದ ರೈತ ಸಭೆಯಲ್ಲಿ ಸಿರಿಗೆರೆ ಶ್ರೀಗಳ ಬಳಿಗೆ ತೆರಳುವ ಸಂಬಂಧ ಕರಪತ್ರ ಪ್ರದರ್ಶಿಸಲಾಯಿತು.

ಸಿರಿಗೆರೆ ಶ್ರೀ ಬಳಿಗೆ ರೈತರ ನಿಯೋಗ । ಪಟೇಲ್ ಜಿಎಂ ತಿಪ್ಪೇಸ್ವಾಮಿ ಹೇಳಿಕೆಕನ್ನಡಪ್ರಭ ವಾರ್ತೆ ನಾಯಕನಹಟ್ಟಿ

ಜಿಲ್ಲೆಯ ಜನ ಪ್ರತಿನಿಧಿಗಳಿಂದ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸುವುದು ಅಸಾಧ್ಯದ ಕೆಲಸವಾಗಿದ್ದು, ಹಾಗಾಗಿ ಕೆರೆಗಳಿಗೆ ನೀರು ತುಂಬಿಸಿದ ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮೊರೆ ಹೋಗುವುದಾಗಿ ಜಿಪಂ ಮಾಜಿ ಸದಸ್ಯ ಹಾಗೂ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ನಾಯಕನಹಟ್ಟಿ ಪಟ್ಟಣದ ಹಟ್ಟಿಮಲ್ಲಪ್ಪ ನಾಯಕ ಸಂಘದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಸಹಸ್ರಾರು ಮಂದಿ ರೈತರು ಜ.13 ರಂದು ಜಾಥಾ ಮೂಲಕ ತರಳಬಾಳು ಶ್ರೀಗಳ ಬಳಿ ತೆರಳುವರು. ಮನವಿ ಸಮರ್ಪಣೆ ಮಾಡಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಈ ಬಾರಿ ವರುಣನ ಕೃಪೆಯಿಂದ ಭರ್ಜರಿ ಮಳೆಯಾಗಿದು, ಎಲ್ಲಾ ಕೆರೆಗಳಿಗೆ ನೀರು ಬಂದು ರೈತರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಮಳೆ ಬಾರದಿದ್ದರೆ ಬೆಂಗಳೂರಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಬಸ್ ಮಾಲೀಕರು ಸೇರಿಂದಂತೆ ಎಲ್ಲ ಹೋರಾಟಗಾರರು ಸಭೆ ಸೇರಿ ಸಿರಿಗೆರೆ ಶ್ರೀಗಳ ಬಳಿಗೆ ತೆರಳೋಣ ಎಂದು ಹೇಳಿದರು.

ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆಗೆ ಇದುವರೆಗೆ ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿದ್ದು ಯಾವುದೇ ಕೆರೆಗಳಿಗೆ ನೀರು ಬಂದಿಲ್ಲ. ಕಳೆದ 40ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಅತೀವೃಷ್ಟಿಯಾದಾಗ ಸಾವಿರಾರು ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತದೆ. ಅದನ್ನು ಹಿಡಿದಿಟ್ಟು ನಮ್ಮ ಎಲ್ಲಾ ಕೆರೆಗಳ ತುಂಬಿಸಬಹುದು ಎಂದು ತಿಳಿಸಿದರು.

ಸಭೆಯಲ್ಲಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದಿಯಪ್ಪ, ರೈತ ಮುಖಂಡ ಆರ್.ಬಿ.ನಿಜಲಿಂಗಪ್ಪ, ಡಾ.ನಾಗರಾಜ್ ಮೀಸೆ, ನವೀನ್ ಮದಕರಿ, ಡಿ.ಟಿ.ಮಂಜುನಾಥ, ತಿಪ್ಪೇಸ್ವಾಮಿ, ಬೋರಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯ ಓಬಯ್ಯ, ಬೋಸೆರಂಗಸ್ವಾಮಿ, ಜೋಗಿಹಟ್ಟಿ ಮಂಜು, ತಾರಕೇಶ್, ಪಪಂ ಮಾಜಿ ಸದಸ್ಯ ಟಿ.ಬಸಣ್ಣ ಭಾಗವಹಿಸಿದ್ದರು.