ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಡೆದಾಳುವ ನೀತಿ ಹಲವಾರು ವರ್ಷಗಳಿಂದಲೂ ಚಾಲನೆಯಲ್ಲಿರುವುದನ್ನು ಕಂಡಿದ್ದೇನೆ.
ಕನ್ನಡಪ್ರಭ ವಾರ್ತೆ ಟಿ. ನರಸೀಪುರರಾಜ್ಯದಲ್ಲಿ ಬಲಿಷ್ಠವಾಗಿರುವ ವೀರಶೈವ ಲಿಂಗಾಯತ ಸಮಾಜವನ್ನು ಯಾವುದೇ ದುಷ್ಠ ಶಕ್ತಿಗಳು ಷಡ್ಯಂತ್ರ,ಕುತಂತ್ರದಿಂದ ಒಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೆಂದ್ರ ಹೇಳಿದರು.ಪಟ್ಟಣದ ವಿವೇಕಾನಂದ ನಗರದಲ್ಲಿ ನವೀಕರಿಸಲಾಗಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ನವೀಕರಣಗೊಂಡಿರುವ ಸಭಾ ಭವನ ಉದ್ಘಾಟಿಸಿ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಡೆದಾಳುವ ನೀತಿ ಹಲವಾರು ವರ್ಷಗಳಿಂದಲೂ ಚಾಲನೆಯಲ್ಲಿರುವುದನ್ನು ಕಂಡಿದ್ದೇನೆ. ಯಾವ ಸಂದರ್ಭದಲ್ಲಿ ವೀರಶೈವ ಲಿಂಗಾಯತರಲ್ಲಿ ಒಡಕು ಉಂಟು ಮಾಡಿದರೆ, ರಾಜ್ಯದಲ್ಲಿ ಸಮಾಜವನ್ನು ಒಡೆದು ಹಾಕುವ ಪ್ರಯತ್ನ ಮಾಡಿದರೆ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬಹುದು ಎಂಬ ಕುತಂತ್ರದಿಂದ ಕಾಣದ ಕೈಗಳು ಕತಂತ್ರ, ಷಡ್ಯಂತ್ರದಿಂದ ಅನೇಕ ಬಾರಿ ಸಮಾಜದ ಮೇಲೆ ದಾಳಿ ಮಾಡಲು ಯತ್ನಿಸಿರುವುದನ್ನೂ ನಾವೆಲ್ಲರೂ ಕಂಡಿದ್ದೇವೆ, ಆದರೆ ಸಮಾಜ ಒಡೆಯುವ ದುಸ್ಸಾಹಸಕ್ಕೆ ಮುಂದಾಗಿರುವರಿಗೆ ಹೇಳಲು ಬಯಸುತ್ತೇನೆ ಎಂತದ್ದೇ ಷಡ್ಯಂತ್ರ, ಕುತಂತ್ರ ನಡೆದರೂ ಸಹ ರಾಜ್ಯದ ಬಲಿಷ್ಠ ವೀರಶೈವ ಸಮಾಜವನ್ನು ಒಡೆಯಬೇಕೆಂಬ ಯಾವ ದುಷ್ಟ ಶಕ್ತಿಗಳ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದರು. ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆವೀರಶೈವ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪರಮಪೂಜ್ಯರು, ಜಗದ್ಗುರುಗಳು, ಸ್ವಾಮೀಜಿಗಳ ತಪಸ್ಸಿದೆ, ವಿವಿಧ ದಾಸೋಹದ ಮೂಲಕ ರಾಜ್ಯದಲ್ಲಿ ಅನ್ನದಾಸೋಹ, ಅಕ್ಷರ ಹಾಗೂ ಜ್ಞಾನ ದಾಸೋಹವನ್ನು ನಾಡಿಗೆ ಉಣ ಬಡಿಸುವ ಯಾವುದೇ ಸಮಾಜ ಇದೆಯೆಂದರೆ ಅದು ನಮ್ಮ ಹೆಮ್ಮೆಯ ವೀರಶೈವ ಸಮಾಜದ ಮಠ ಮಾನ್ಯಗಳು. ಪರಮಪೂಜ್ಯರು ಎನ್ನುವುದನ್ನು ಮರೆಯುವಂತಿಲ್ಲ, ಹಾಗಾಗಿ ವೀರಶೈವ ಸಮಾಜವನ್ನು ಯಾವುದೇ ಷಡ್ಯಂತ್ರಗಳ ಮೂಲಕ ಒಡೆಯಲು ಸಾದ್ಯವಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿ ಬಲಿಷ್ಠವಾಗಿರುತ್ತದೆ ಎಂದು ನುಡಿದರು.ನಮ್ಮ ವೀರಶೈವ ಸಮಾಜ ಇತರೆ ಸಮಾಜಲ್ಕೆ ನೆರಳು, ಆಶ್ರಯ ಕೊಟ್ಟಿದೆ, ಸುತ್ತೂರು, ಸಿದ್ದಗಂಗಮಠಗಳು ಶಿಕ್ಷಣ ಕ್ರಾಂತಿಯನ್ನೇ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿವೆ. ಮಠ ಮಾನ್ಯಗಳು ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಸೀಮಿತವಾಗಿಲ್ಲ. ಆಶ್ರಯ ಹುಡುಕಿ ಬರುವವವರ ಯಾವುದೇ ಧರ್ಮ, ಜಾತಿ, ಕುಲವನ್ನು ಪ್ರಶ್ನಿಸದೇ ಅವರಿಗೆ ಆಶ್ರಯ ದೊರಕಿಸಿಕೊಟ್ಟಿದೆ ಎಂದ ಅವರು, ವೀರಶೈವ ಲಿಂಗಾಯತ ಸಮಾಜದಲ್ಲಿ ಬಡತನ ಇರಬಹುದು, ಆದರೆ ಸ್ವಾಭಿಮಾನಕ್ಕೆ ಯಾವುದೇ ಕೊರತೆ ಇಲ್ಲ ಎಂದರು. ವೀರಶೈವ ಲಿಂಗಾಯತ ಮಠಮಾನ್ಯಗಳ ಕೊಡುಗೆ ಅಪಾರರಾಜ್ಯ ಅರಣ್ಯ ಮತ್ತುಪರಿಸರ ಖಾತೆ ಸಚಿವ ಬಿ. ಈಶ್ವರ ಖಂಡ್ರೆ ಮಾತನಾಡಿ,ಇಂದು ಕರ್ನಾಟಕ ಐಟಿ, ಬಿಟಿ ರಾಜ್ಯವಾಗಿ ಪ್ರಖ್ಯಾತಿ ಪಡೆಯುವುದರ ಹಿಂದೆ ವೀರಶೈವ ಲಿಂಗಾಯತ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ. ಎಲ್ಲ ಜಾತಿ, ಜನಾಂಗದವರಿಗೂ ಉಚಿತವಾಗಿ ಆಶ್ರಯ, ಅಕ್ಷರ ಮತ್ತು ಅನ್ನ ದಾಸೋಹದ ಮೂಲಕ ಶಿಕ್ಷಣ ನೀಡುವ ಮೂಲಕ ಜ್ಞಾನಾಧಾರಿತ ಸಮಾಜದ ನಿರ್ಮಾಣಕ್ಕೆ ನಮ್ಮ ಮಠಮಾನ್ಯಗಳು ಕೊಡುಗೆ ನೀಡಿವೆ ಎಂದು ವಿವರಿಸಿದರು.ಹಾನಗಲ್ ಕುಮಾರೇಶ್ವರರು ಅಖಿಲ ಭಾರತ ವೀರಶೈವ ಮಹಾಸಭಾ ಕಟ್ಟಿ ಬೆಳೆಸಿದರು. ಶತಾಯುಷಿ ಲೋಕನಾಯಕ ಭೀಮಣ್ಣ ಖಂಡ್ರೆ ಅವರು ಅಧ್ಯಕ್ಷರಾಗಿದ್ದಾಗ ಸಂಘಟನೆ ಬಲಪಡಿಸಿದರು, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ತುಮಕೂರು ಸಿದ್ದಗಂಗಾಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರು ಲಿಂಗಾಯತ ಬೇರೆ ಅಲ್ಲ, ವೀರಶೈವ ಬೇರೆ ಅಲ್ಲ ನಾವಿಬ್ಬರೂ ಒಂದೇ. ನಮ್ಮ ಸಮುದಾಯದ ಒಗ್ಗಟ್ಟು ಒಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು. ಮಹಾಸಭಾ ಅದೇ ಹಾದಿಯಲ್ಲಿ ನಡೆಯುತ್ತಿದೆ ಎಂದರು. ಚಿರತೆ ಸಮಸ್ಯೆಗೆ ಪರಿಹಾರಟಿ. ನರಸೀಪುರ ತಾಲೂಕಿನಲ್ಲಿ ಚಿರತೆಯ ಸಮಸ್ಯೆ ಇದೆ. ಮಾನವ-ಚಿರತೆ ಸಂಘರ್ಷ ಹೆಚ್ಚಾಗಿರುವ ತಾಲೂಕುಗಳಲ್ಲಿ ಟಿ. ನರಸೀಪುರ ಕೂಡ ಒಂದಾಗಿದೆ. ಚಿರತೆ ವಸತಿ ಪ್ರದೇಶ ಅಥವಾ ಹೊಲ, ಗದ್ದೆಗಳ ಬಳಿ ಕಾಣಿಸಿಕೊಂಡಾಗ ಬೋನು ಇಟ್ಟು ತಕ್ಷಣ ಅದನ್ನು ಸೆರೆ ಹಿಡಿದು ರಕ್ಷಿಸಲು ಹೆಚ್ಚುವರಿ ಬೋನುಗಳ ಅಗತ್ಯವಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಬಸವಣ್ಣನವರದ್ದು ಉದಾತ್ತವಾದ ವ್ಯಕ್ತಿತ್ವ, ಎನಗಿಂತ ಕಿರಿಯರಿಲ್ಲ ಎಂದು ಹೇಳುತ್ತಾರೆ. ಸಮುದಾಯವನ್ನು ಪ್ರತಿನಿಧಿಸುವ ಬುದ್ಧ, ಬಸವ, ಅಂಬೇಡ್ಕರ್ ಜನ ಸಮುದಾಯಗಳು ಒಟ್ಟಿಗೆ ಕುಳಿತು ಶಾಂತಿ ಸಂದೇಶವನ್ನು, ಸೋದರತ್ವ ಸಂಕೇತವನ್ನು ಸಾರುವ ಅನ್ಯ ಧರ್ಮೀಯರನ್ನು ಗೌರವಿಸುವಂತೆ ಸಂವಿಧಾನದ ಮೂಲಕ ಹೇಳಲಾಗಿದೆ. ಬಸವಣ್ಣನವರ ಸಮ ಸಮಾಜದ ಪರಿಕಲ್ಪನೆಯನ್ನುನಾವೆಲ್ಲಾ ಅಭ್ಯಸಿಸಿ ಯುವ ಸಮಾಜವನ್ನು ಸೈದ್ದಾಂತಿಕ ನೆಲೆಗಟ್ಟಿನ ಕೆಳಗಡೆ ನೈತಿಕತೆಯಿಂದ ಕೂಡಿರುವ ಯುವ ಶಕ್ತಿಯನ್ನು ಕಟ್ಟುವುದು ಇವತ್ತಿನ ಸಂಧರ್ಭದಲ್ಲಿ ಅನಿವಾರ್ಯ.ಮತ್ತು ಅವಶ್ಯಕತೆಯಾಗಿದೆ, ಆಮೂಲಕ ಬಸವ ಕಂಡಂತಹ ಸುಖೀರಾಜ್ಯದ ಸ್ಥಾಪನೆ ಮಾಡುವಂತಹ ಕೆಲಸ ಮಾಡಬೇಕಿದೆ ಎಂದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಿದ್ದಗಂಗ ಮಠದ ಕಿರಿಯ ಶ್ರೀಗಳು, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಹಲವಾರ ಮುಡುಕನ ಪುರ ಮಠದ ಷಡಕ್ಷರ ದೇಶೀಕೇಂದ್ರ ಸ್ವಾಮಿ, ಮಾಡ್ರಹಳ್ಳಿ ಪಟ್ಟದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಆಶೀರ್ವಚನ ನೀಡಿದರು.ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕ ಅಶ್ವಿನ್ ಕುಮಾರ್, ಬಿಜೆಪಿ ಮುಖಂಡ ಡಾ. ರೇವಣ್ಣ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಎಂ. ಪ್ರಕಾಶ್, ಜಿಪಂ ಮಾಜಿ ಸದಸ್ಯರಾದ ಸುಧಾ ಮಹದೇವಯ್ಯ, ಸದಾನಂದ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮಹದೇವಸ್ವಾಮಿ, ಕೋಶ ಅಧ್ಯಕ್ಷ ನಂಜುಂಡಸ್ವಾಮಿ, ಕಾರ್ಯದರ್ಶಿ ಶಿವು, ಯುವ ಘಟಕದ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಕಿರಣ್, ಪೂಜಿತ್ ಕುಮಾರ್, ತೋಂಟೇಶ್, ಮೂಗೂರು ಕುಮಾರಸ್ವಾಮಿ, ಕೆಇಬಿ ಸಿದ್ದಲಿಂಗಸ್ವಾಮಿ, ಕಾವೇರಿಪುರ ಮಲ್ಲು, ಮಂಜುನಾಥ್, ಮಲ್ಲಪ್ಪ,ದಯಾನಂದ್ ಪಟೇಲ್, ಪ್ರಸಾದ್, ಅರವಿಂದ್, ಪ್ರಭು, ವಿಜಯಕುಮಾರ್, ರೂಪ ಪರಮೇಶ್, ಸುಧಾ ರಮೇಶ್, ಅಂಬಿಕಾ ಲೋಕೇಶ್ ಜ್ಞಾನೇಶ್ವರಿ ಇದ್ದರು.------------------