ಸಾರಾಂಶ
ಕುಮಟಾ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳನ್ನು ಕೇವಲ ಘೋಷಣೆಯಷ್ಟೇ ಮಾಡದೆ ಚಾಚೂತಪ್ಪದೇ ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದೇವೆ. ಇಂತಹ ಕಾರ್ಯಕ್ರಮವನ್ನು ಬೇರೆ ಯಾವುದೇ ಪಕ್ಷದವರು ಈವರೆಗೆ ಜಾರಿಗೊಳಿಸಲಿಲ್ಲ; ಮುಂದೆಯೂ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ ಹೇಳಿದರು.ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಜನರು ಕಿತ್ತೆಸೆದು, ಕಾಂಗ್ರೆಸ್ ಸರ್ಕಾರವನ್ನು ಅಭೂತಪೂರ್ವಾಗಿ ಬೆಂಬಲಿಸಿದ್ದಕ್ಕೆ ಜನರು ನಂಬಿದಂತೆ ನಾವು ನಡೆದುಕೊಂಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾರ್ಗದರ್ಶನದಲ್ಲಿ ನಾವು ರಾಜ್ಯದ ಜನತೆಗೆ ಹಾಗೂ ಬಡ ಜನತೆಗೆ ಏನೇನು ಬೇಕು ಎನ್ನುವುದನ್ನು ಅರ್ಥ ಮಾಡಿಕೊಂಡು ೫೯೪ ಅಂಶಗಳ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೆವು. ಅದರಲ್ಲಿ ೨೪೩ ನ್ನು ಈಗಾಗಲೇ ನಾವು ಪೂರ್ಣಗೊಳಿಸಿದ್ದೇವೆ ಎಂದರು.
ಶಕ್ತಿ ಯೋಜನೆಯಲ್ಲಿ ತಾಲೂಕಿನಲ್ಲಿ 5.45 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ. ಇದರ ವೆಚ್ಚ ಸುಮಾರು ₹೪೫ ಕೋಟಿ ಆಗಲಿದೆ. ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಸುಮಾರು ೩೫ ಸಾವಿರಕ್ಕೂ ಅಧಿಕ ಫಲಾನುಭವಿಗಳು ಪಡೆಯುತ್ತಿದ್ದಾರೆ. ಗೃಹಜ್ಯೋತಿಯಲ್ಲಿ ೧೦೦ ಪ್ರತಿಶತ ಸಾಧನೆ ಮಾಡಿದ್ದೇವೆ. ಗ್ಯಾರಂಟಿಗಳ ಜತೆಗೆ, ಜನತೆಯ ಅಗತ್ಯ ಅಭಿವೃದ್ಧಿ ಕಾರ್ಯಗಳು ಕೂಡ ನಡೆಯುತ್ತಿದೆ ಎಂದರು.ಶಾಸಕರ ಅನುದಾನವೂ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ ಎಂಬ ಶಾಸಕ ದಿನಕರ ಶೆಟ್ಟಿ ಹೇಳಿಕೆ ಹಾಗೂ ಕಾಂಗ್ರೆಸ್ ಸರ್ಕಾರದ್ದು ಶೂನ್ಯ ಸಾಧನೆಯ ಸಮಾವೇಶ ಎಂಬ ಬಿಜೆಪಿ ಪತ್ರಿಕಾಗೋಷ್ಠಿಗೆ ಪ್ರತಿಕ್ರಿಯಿಸಿದ ಭುವನ್ ಭಾಗ್ವತ್, ಶಾಸಕರಿಗೆ ಸುಳ್ಳು ಹೇಳುವುದೊಂದೇ ಕೆಲಸ. ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಅನುದಾನ ಒದಗಿಸಿದೆ. ೨೦೨೩-೨೪ನೇ ಸಾಲಿನಲ್ಲಿ ಸುಮಾರು ₹೧೧ ಕೋಟಿ, 2024-25ನೇ ಸಾಲಿನಲ್ಲಿ ₹23.91 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ನೀಡಲಾಗಿದೆ ಎಂದರು.
ನಿಕಟಪೂರ್ವ ಬ್ಲಾಕ್ ಅಧ್ಯಕ್ಷ ಹೊನ್ನಪ್ಪ ನಾಯಕ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಕುರಿತಾಗಿ ಟೀಕಿಸುವ ಶಾಸಕರು, ಬಿಜೆಪಿ ಅವಧಿಯಲ್ಲಿ ಯಾವೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎನ್ನುವುದರ ಪಟ್ಟಿ ಬಿಡುಗಡೆ ಮಾಡಲಿ ಎಂದು ಸವಾಲೆಸೆದಿದ್ದಾರೆ. ಶಾಲಾ ಕಟ್ಟಡಕ್ಕೆ ಸುಮಾರು ಎರಡು ಕೋಟಿ ರುಪಾಯಿ ಬಿಡುಗಡೆಯಾಗಿದೆ. ಶಾಸಕರೇ ಅಡಿಗಲ್ಲು ಸಮಾರಂಭದಲ್ಲಿಯೂ ಭಾಗವಹಿಸುತ್ತಿದ್ದಾರೆ ಎಂದರು.ಅಶೋಕ ಗೌಡ, ನಾಗೇಶ ನಾಯ್ಕ, ಶಂಕರ ಅಡಿಗುಂಡಿ, ವಿ.ಎಲ್.ನಾಯ್ಕ, ಎಂಟಿ.ನಾಯ್ಕ, ಶಾಂತಾರಾಮ ನಾಯ್ಕ, ನಾಗರಾಜ ನಾಯ್ಕ, ಸಚಿನ ನಾಯ್ಕ, ಕೃಷ್ಣ ಗೌಡ ಇತರರು ಇದ್ದರು.