ನಮ್ಮ ಜೀವಿತಾವಧಿಯತನಕವೂ ಗುರುವಿನ ಋಣ ತೀರಿಸಲು ಸಾಧ್ಯವೇ ಇಲ್ಲ ಎಂದು ಕಲ್ಪತರು ಶಾಖಾ ಮಠದ ಶ್ರೀ ರಾಜಯೋಗಾನಂದನಾಥ ಸ್ವಾಮೀಜಿ ಹೇಳಿದರು.
ಕನ್ನಡಪ್ರಭವಾರ್ತೆ, ತುರುವೇಕೆರೆ
ನಮ್ಮ ಜೀವಿತಾವಧಿಯತನಕವೂ ಗುರುವಿನ ಋಣ ತೀರಿಸಲು ಸಾಧ್ಯವೇ ಇಲ್ಲ ಎಂದು ಕಲ್ಪತರು ಶಾಖಾ ಮಠದ ಶ್ರೀ ರಾಜಯೋಗಾನಂದನಾಥ ಸ್ವಾಮೀಜಿ ಹೇಳಿದರು. ತಾಲೂಕಿನ ಬ್ಯಾಲಹಳ್ಳಿ ಗೇಟ್ ನಲ್ಲಿರುವ ನೆಹರು ವಿದ್ಯಾ ಶಾಲಾ ರಜತ ಮಹೋತ್ಸವ ಕೇಂದ್ರೀಯ ಪ್ರೌಢಶಾಲೆಯಲ್ಲಿ ನಡೆದ 2005 ಮತ್ತು 2006 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಗುರುಗಳ ಸ್ಮರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇದು ಎಲ್ಲರಲ್ಲೂ ಬರುವುದಿಲ್ಲ. ಸಂಸ್ಕಾರ ಇದ್ದರೆ ಮಾತ್ರ ಅದು ಸಾಧ್ಯ. ಈ ಶಾಲೆಯಲ್ಲಿ ಪಾಠಪ್ರವಚನ ಮಾಡಿದ ಗುರುಗಳು ವಿದ್ಯಾರ್ಥಿಗಳಿಗೆ ನೀಡಿರುವ ಮಾರ್ಗದರ್ಶನವೇ ಈ ಕಾರ್ಯಕ್ರಮ ಏರ್ಪಡಿಸಲು ಪ್ರೇರಣೆ ಆಗಿದೆ. ಇಂದು ಉತ್ತಮ ಶಿಷ್ಯರನ್ನು ಹೊಂದುವುದೂ ಸಹ ಒಂದು ಪುಣ್ಯವೇ. ಗುರುವಿಗೆ ತಿರುಮಂತ್ರ ಹಾಕುವ ಈ ದಿನಗಳಲ್ಲಿ ತಮಗೆ ಪಾಠ ಕಲಿಸಿದ ಎಲ್ಲಾ ಗುರುಗಳನ್ನು ಒಂದೇ ವೇದಿಕೆಯಲ್ಲಿ ಗೌರವಿಸುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ಅವರು ಹೇಳಿದರು. ವಿದ್ಯೆ ಎಂಬ ಸಂಪತ್ತು ಎಂದೂ ಕರಗದು. ಸಾಧಿಸುತ್ತಾ ಹೋದಂತೆ ಅದು ಬೆಟ್ಟದಷ್ಟು ಬೆಳೆಯುತ್ತದೆ. ಎಲ್ಲರೂ ನಿಮ್ಮನ್ನು ಗೌರವಿಸುವಂತೆ ಮಾಡುತ್ತದೆ. ನಮ್ಮ ಶ್ರೀ ಆದಿಚುಂಚನಗಿರಿ ಮಠ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿದೆ. ಲಕ್ಷಾಂತರ ಮಕ್ಕಳ ಭವಿಷ್ಯವನ್ನು ತೆರೆದಿದೆ. ಗುರುಗಳು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧ ಇದೆ. ಅದನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.ನಿವೃತ ಶಿಕ್ಷಕ ತೋಂಟದಾರ್ಯ ಮಾತನಾಡಿ ತಾನು ಪಾಠ ಮಾಡಿದ ಶಿಷ್ಯ ಉತ್ತಮ ಪ್ರಜೆ ಆದರೆ ಮಾತ್ರ ಪಾಠ ಮಾಡಿದ ಶಿಕ್ಷಕನ ಸೇವೆ ಸಾರ್ಥಕವಾಗುತ್ತದೆ. ಪಾಠ ಹೇಳಿದ ಶಿಕ್ಷಕರನ್ನು ಹೇಗೆ ಗೌರವಿಸುತ್ತಿದ್ದೀರೋ ಅದೇ ರೀತಿ ನಿಮಗೆ ಜೀವ, ಜೀವನ ಕೊಟ್ಟ ತಂದೆ ತಾಯಿಯರನ್ನೂ ಸಹ ಗೌರವಿಸಿ. ಶಿಕ್ಷಕರು ಜೀವನ ರೂಪಿಸಬಲ್ಲರು. ಆದರೆ ಮಾತಾಪಿತೃಗಳು ತಮ್ಮ ಜೀವವನ್ನೆಲ್ಲಾ ಒತ್ತೆ ಇಟ್ಟು ತನ್ನ ಕರುಳ ಕುಡಿ ಉತ್ತಮ ಪ್ರಜೆಯಾಗಲಿ ಎಂದು ಹಗಲಿರುಳೂ ಹೋರಾಟ ಮಾಡುತ್ತಾರೆ. ಅಂತಹ ಪೋಷಕರನ್ನು ಎಂದೆಂದೂ ನೋಯಿಸಬೇಡಿ ಎಂದರು. ಈ ಶಾಲೆ ಗ್ರಾಮಾಂತರ ಪ್ರದೇಶದಲ್ಲಿ ಇದ್ದರೂ ಸಹ ರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದೆ. ಶಿಕ್ಷಕರಿಗೆ ಇಚ್ಚಾಶಕ್ತಿ ಇದ್ದರೆ ಎಂತಹವರನ್ನೂ ಸಹ ಪ್ರತಿಭಾನ್ವಿತರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ ಎಂದರು. ಶಿಸ್ತು ಮತ್ತು ಸಂಸ್ಕಾರವನ್ನು ಕೊಡುವವನೇ ಶಿಕ್ಷಕ. ಶಿಕ್ಷಕ ಶಾಲೆಯಲ್ಲಿರುವ ಎಲ್ಲ ಮಕ್ಕಳೂ ನಮ್ಮ ಮಕ್ಕಳೇ ಎಂಬ ಭಾವನೆಯಿಂದ ಪಾಠ ಮಾಡಬೇಕು. ಕೇವಲ ಯಾಂತ್ರಿಕವಾಗಿ ದುಡಿಮೆಗಾಗಿ ಮಕ್ಕಳಿಗೆ ಭೋಧನೆ ಮಾಡಿದರೆ ಅದು ಆತ್ಮವಂಚನೆ ಮಾಡಿಕೊಂಡಂತೆ ಆಗುತ್ತದೆ ಎಂದು ನಿವೃತ್ತ ಶಿಕ್ಷಕಿ ಗಿರಿಜಾ ಹೇಳಿದರು. ಈ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಲಕ್ಷ್ಮಯ್ಯ, ಕೃಷ್ಣಪ್ಪ, ಮುದಿನಾ, ಶಿವರಾಜು, ವಿಜಯಾನಂದ್, ವೆಂಕಟೇಗೌಡ, ಬಸವಯ್ಯ, ಗ್ರಾಮದ ಮುಖಂಡರಾದ ನೇರಳಕಟ್ಟೆ ಶಂಕರಣ್ಣ, ಕೃಷ್ಣಪ್ಪ, ಗೊಲ್ಲರಹಟ್ಟಿಯ ಟಿ.ತಿಮ್ಮಯ್ಯ ಗೋಪಾಲ್, ಕುಮಾರ್, ರಾಜೇಶ್, ಸಣ್ಣಯ್ಯ, ತಿಮ್ಮೇಗೌಡ, ಶಂಕರಪ್ಪ, ಜುಂಜಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ತಮಗೆ ಪಾಠ ಹೇಳಿದ ಗುರುಗಳನ್ನು ಗ್ರಾಮದ ಮುಖ್ಯ ರಾಜಬೀದಿಯಿಂದ ಚಿಟ್ಟಿಮೇಳ ವಾದ್ಯದೊಂದಿಗೆ ಪುಷ್ಪಾರ್ಚನೆ ಮಾಡುತ್ತಾ, ಗುರುಗಳಿಗೆ ಜಯಕಾರ ಹಾಕುತ್ತಾ, ಎಲ್ಲಾ ಶಿಕ್ಷಕರಿಗೆ ಆರತಿ ಎತ್ತಿ, ದೃಷ್ಠಿ ತೆಗೆದು ವೇದಿಕೆಗೆ ಕರೆ ತರಲಾಯಿತು. ಈ ವೇಳೆ 2004 ರಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮಾಡಿದ್ದ ವಿದ್ಯಾರ್ಥಿಗಳು ಸಹ ಶಿಕ್ಷಕರನ್ನು ಗೌರವಿಸಿದರು. ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ವಿ.ಪಿ.ಮಹೇಶ್ ಸ್ವಾಗತಿಸಿದರು. ಮಂಜುಳಾ ವಂದಿಸಿದರು.