ವಚನಕಾರರ ಆಶಯಗಳನ್ನು ಹತ್ತಿಕ್ಕುವುದು ಅಸಾಧ್ಯ: ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ

| Published : Jul 16 2025, 12:45 AM IST

ವಚನಕಾರರ ಆಶಯಗಳನ್ನು ಹತ್ತಿಕ್ಕುವುದು ಅಸಾಧ್ಯ: ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಚನ ಚಳವಳಿಯ ಹಿರಿಮೆ- ಗರಿಮೆಗಳನ್ನು ನಾವು ಹೆಮ್ಮೆಯಿಂದ ಮಾತನಾಡುತ್ತಿದ್ದರೂ ಅವರ ಸಿದ್ಧಾಂತಗಳನ್ನು ಹೊರಜಗತ್ತಿಗೆ ತಿಳಿಸುವಲ್ಲಿ ವಿಫಲರಾಗಿದ್ದೇವೆ. ಅದನ್ನು ಗಂಭೀರವಾಗಿ ಕೇಳಿಸಿಕೊಳ್ಳುವ ಮತ್ತು ಕೇಳಿಸುವ ವ್ಯವಧಾನ ಕಡಿಮೆಯಾಗುತ್ತಿದೆ.

ತುಮಕೂರು: ವಚನಕಾರರ ಆಶಯಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ನುಡಿದರು.

ಅವರು ಬಸವಕೇಂದ್ರ ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್, ನಗರದ ಮುರುಘರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಜಯಂತಿ ನಿಮಿತ್ತ ಡಾ. ವಿಜಯಕುಮಾರ್ ಕಮ್ಮಾರ ಅವರ ‘ವಚನಗಳಲ್ಲಿ ವೈಜ್ಞಾನಿಕತೆ’ ಮತ್ತು ‘ಆತ್ಮಕಲ್ಯಾಣದ ಅನುಭವ ಮಂಟಪ’ ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಶೂದ್ರವರ್ಗಕ್ಕೆ ಸೇರಿದ್ದ ಹಲವಾರು ಜಾತಿಗಳನ್ನು ಒಂದೇ ವೈಚಾರಿಕ ನೆಲೆಗಟ್ಟಿನ ಅಡಿಯಲ್ಲಿ ಒಂದೇ ದೈವವನ್ನು ಒಪ್ಪಿಕೊಳ್ಳುವ ಮೂಲಕ ಸಂಘಟಿಸಲ್ಪಟ್ಟ ಈ ಚಳವಳಿ ಸಹಜವಾಗಿಯೇ ಜನರಿಂದ ಜನರಿಗಾಗಿಯೇ ಎಂಬ ಮುಕ್ತತೆಯನ್ನು ಉಳ್ಳದ್ದು. ಈ ಚಳವಳಿಯ ಗಡಿರೇಖೆಗಳು ಜಡವಲ್ಲ, ಚಲನಶೀಲವಾಗಿವೆ. ಯಾರು ಬೇಕಾದರೂ ಒಳಬರುವ ಮತ್ತು ಹೊರಹೋಗುವ ಮುಕ್ತ ವೈಚಾರಿಕ ಸ್ವಾತಂತ್ರ್ಯವುಳ್ಳದ್ದಾಗಿದೆ ಎಂದರು.

ತಳಸಮುದಾಯದ ಹಲವಾರು ಕಾಯಕಜೀವಿಗಳು ತಮ್ಮ ಜಾತಿಗಳನ್ನು ಬದಿಗಿಟ್ಟು ಕಾಯಕಗಳನ್ನು ಉಳಿಸಿಕೊಂಡು ಸ್ವಾಭಿಮಾನದ ಮೇಲು- ಕೀಳಿಲ್ಲದ ಒಂದು ವಿಶಾಲ ಜನಜೀವನದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡು ವಚನ ಚಳವಳಿಯ ತೆಕ್ಕೆಗೆ ಸೇರಿಕೊಂಡವು. ಇಂತಹ ಚಳವಳಿಯ ಮೇಲೆ ಪದೇ ಪದೇ ಪುರೋಹಿತಶಾಹಿ ಮನೋಭಾವದವರಿಂದ ಅಕ್ಷರ ದಾಳಿಗಳು ಸಂಭವಿಸುತ್ತಿರುವುದು ಖಂಡನೀಯ ಎಂದರು.

ಲೇಖಕರೂ, ವಚನತತ್ವ ಚಿಂತಕರೂ ಆದ ಡಾ. ವಿಜಯಕುಮಾರ್ ಕಮ್ಮಾರ ಅವರು ಮಾತನಾಡಿ, ವಚನ ಚಳವಳಿಯ ಹಿರಿಮೆ- ಗರಿಮೆಗಳನ್ನು ನಾವು ಹೆಮ್ಮೆಯಿಂದ ಮಾತನಾಡುತ್ತಿದ್ದರೂ ಅವರ ಸಿದ್ಧಾಂತಗಳನ್ನು ಹೊರಜಗತ್ತಿಗೆ ತಿಳಿಸುವಲ್ಲಿ ವಿಫಲರಾಗಿದ್ದೇವೆ. ಅದನ್ನು ಗಂಭೀರವಾಗಿ ಕೇಳಿಸಿಕೊಳ್ಳುವ ಮತ್ತು ಕೇಳಿಸುವ ವ್ಯವಧಾನ ಕಡಿಮೆಯಾಗುತ್ತಿದೆ. ವಚನಕಾರರ ಆಶಯಗಳನ್ನು ಸಾರಿಸಾರಿ ಹೇಳುವ ಒಂದು ವಿದ್ವಾಂಸರ ಪಡೆಯನ್ನು ಕಟ್ಟುವ ಅನಿವಾರ್ಯ ಸ್ಥಿತಿ ಉಂಟಾಗಿದೆ ಎಂದರು.

ಅಧ್ಯಕ್ಷತೆಯನ್ನು ಬಸವಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಬಿ. ಸಿದ್ಧರಾಮಣ್ಣ ವಹಿಸಿದ್ದರು. ವೇದಿಕೆಯಲ್ಲಿ ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್ ಡಿ.ವಿ.ಶಿವಾನಂದ್, ರಾಮಕೃಷ್ಣಪ್ಪ, ಬಸವಕೇಂದ್ರದ ಕಲ್ಪನಾ ಉಮೇಶ್ ಜಾಗತಿಕ ಲಿಂಗಾಯಿತ ಮಹಾಸಭಾದ ಶಿವಲಿಂಗಯ್ಯ ಉಪಸ್ಥಿತರಿದ್ದರು.

ಬಸವಕೇಂದ್ರದ ಕಾರ್ಯದರ್ಶಿ ಸ್ವಾಗತಿಸಿದರು, ವೀಣಾ ವಂದಿಸಿದರು, ಬಸವ ಕೇಂದ್ರದ ಮಹಿಳೆಯರು ವಚನ ಪ್ರಾರ್ಥನೆ ಮಾಡಿದರು.