ಹೇಮಾವತಿ ನದಿಯಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದ ರೇವಣ್ಣ, ಕಾನೂನಿನ ಪ್ರಕಾರ ನೀರು ಬಿಡಬೇಕಾದ ಪರಿಸ್ಥಿತಿ ಇದ್ದಾಗ ನೀರು ಬಿಡಬಾರದು ಎಂದು ನಾವು ಹೇಳುವುದಿಲ್ಲ. ಆದರೆ ಮೊದಲು ಹಾಸನ ಜಿಲ್ಲೆಯ ರೈತರಿಗೆ, ಜಾನುವಾರುಗಳಿಗೆ ಮತ್ತು ಸ್ಥಳೀಯ ಅಗತ್ಯಗಳಿಗೆ ನೀರು ಒದಗಿಸಬೇಕು.
ಕನ್ನಡಪ್ರಭವಾರ್ತೆ, ಹಾಸನ
ಅಚ್ಚುಕಟ್ಟು ಪ್ರದೇಶದ ಕೆರೆಕಟ್ಟೆಗಳನ್ನು ತುಂಬಿಸದೆ ಜಿಲ್ಲೆಯ ರೈತರ ಹಿತವನ್ನು ಬಲಿಕೊಟ್ಟು ಹೇಮಾವತಿ ಜಲಾಶಯದಲ್ಲಿರುವ ನೀರನ್ನು ತುಮಕೂರು ಹಾಗೂ ತಮಿಳುನಾಡಿಗೆ ಬಿಡಲಾಗುತ್ತಿದೆ. ಇದರಿಂದ ಜಲಾಶಯದ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಜಿಲ್ಲೆಯ ರೈತರ ಹಿತ ಕಾಪಾಡಿದ ಬಳಿಕವೇ ನೆರೆಯ ವಿಚಾರಗಳನ್ನು ಪರಿಗಣಿಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸರ್ಕಾರವನ್ನು ಆಗ್ರಹಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿ ಜಲಾಶಯದಿಂದ ಕಳೆದ ಕೆಲ ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ನೀರು ಹೊರಹೋಗುತ್ತಿದೆ. ಜಲಾಶಯದಲ್ಲಿ 16 ರಿಂದ 18 ಟಿಎಂಸಿ ನೀರು ಖಾಲಿಯಾಗಿದೆ. ಈ ನೀರು ಎಲ್ಲಿಗೆ ಹೋಗುತ್ತಿದೆ, ಯಾವ ಉದ್ದೇಶಕ್ಕಾಗಿ ಹರಿಸಲಾಗುತ್ತಿದೆ ಎಂಬುದನ್ನು ಸರ್ಕಾರ ಜಿಲ್ಲೆ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಹೇಮಾವತಿ ನದಿಯಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದ ರೇವಣ್ಣ, ಕಾನೂನಿನ ಪ್ರಕಾರ ನೀರು ಬಿಡಬೇಕಾದ ಪರಿಸ್ಥಿತಿ ಇದ್ದಾಗ ನೀರು ಬಿಡಬಾರದು ಎಂದು ನಾವು ಹೇಳುವುದಿಲ್ಲ. ಆದರೆ ಮೊದಲು ಹಾಸನ ಜಿಲ್ಲೆಯ ರೈತರಿಗೆ, ಜಾನುವಾರುಗಳಿಗೆ ಮತ್ತು ಸ್ಥಳೀಯ ಅಗತ್ಯಗಳಿಗೆ ನೀರು ಒದಗಿಸಬೇಕು. ಜಿಲ್ಲೆಯ ರೈತರು ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಜಮೀನುಗಳಿಗೆ ನೀರು ಸಿಗುತ್ತಿಲ್ಲ. ಹಳ್ಳಿಗಳಿಗೂ ಸಮರ್ಪಕವಾಗಿ ನೀರು ಹೋಗಿಲ್ಲ. ಇಂತಹ ಸಂದರ್ಭದಲ್ಲಿ ಜಲಾಶಯದ ನೀರನ್ನು ಹೊರ ಜಿಲ್ಲೆ ಹಾಗೂ ರಾಜ್ಯಕ್ಕೆ ಹರಿಸಿದರೆ ಜಿಲ್ಲೆಯ ರೈತರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಅಣೆಕಟ್ಟೆ ತುಂಬಿದ್ದಾಗ ಮೇಲ್ಮಟ್ಟದ ನಾಲೆಗಳಿಗೆ ನೀರು ಹರಿಸಲಾಗುತ್ತಿತ್ತು. ಆದರೆ, ಇದೀಗ ನೀರು ಇಳಿಮುಖವಾಗಿರುವುದರಿಂದ ಮೇಲ್ಮಟ್ಟದ ನಾಲೆಗಳಿಗೆ ನೀರು ಹರಿಸಲಾಗುತ್ತಿಲ್ಲ. ಯಾವ ಹಳ್ಳಿಗಳಿಗೂ ನೀರು ತಲುಪಿಲ್ಲ. ಹೀಗಿರುವಾಗ ನೀರಿನ ನಿರ್ವಹಣೆ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದರು.ಮಳೆಗಾಲ ಮುಗಿಯುತ್ತಿದ್ದು, ಇನ್ನು ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬರುವ ಸಾಧ್ಯತೆ ಕಡಿಮೆ. ಈ ಸಂದರ್ಭದಲ್ಲಿ ಜಲಾಶಯದಲ್ಲಿರುವ ನೀರನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಎಲ್ಲಾ ನೀರನ್ನು ಹೊರಗೆ ಹರಿಸಿ ಕೊನೆಗೆ ಖಾಲಿ ಡ್ಯಾಂಗೆ ಪೂಜೆ ಮಾಡುವ ಪರಿಸ್ಥಿತಿ ತರಬೇಡಿ. ಎಲ್ಲಿಗೆ ನೀರು ಹರಿಸಲಾಗುತ್ತಿದೆ? ಏಕೆ ಹರಿಸಲಾಗುತ್ತಿದೆ? ಜಿಲ್ಲೆಯ ರೈತರಿಗೆ ಇದರ ಬಗ್ಗೆ ಮಾಹಿತಿ ಏಕೆ ನೀಡುತ್ತಿಲ್ಲ? ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು. ರಾಜಕೀಯ ಆಮೇಲೆ ಮಾಡೋಣ. ನಮ್ಮ ಹಣೆಬರಹದಲ್ಲಿ ಏನಾಗುತ್ತದೆಯೋ ಆಗಲಿ. ಈಗ ಮೊದಲು ರೈತರನ್ನು ಉಳಿಸಿಕೊಡಿ ಎಂದು ಹೇಳಿದರು.
ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿದ ಅವರು, ಕಾನೂನುಬದ್ಧವಾಗಿ ನೀರು ಹರಿಸಬೇಕಾದ ಅನಿವಾರ್ಯತೆ ಇದ್ದರೆ ಅದನ್ನು ವಿರೋಧಿಸುವುದಿಲ್ಲ. ಆದರೆ ರಾಜ್ಯದೊಳಗಿನ ರೈತರ ಅಗತ್ಯ, ಕುಡಿಯುವ ನೀರು ಮತ್ತು ಜಾನುವಾರುಗಳ ನೀರಿನ ಅವಶ್ಯಕತೆಯನ್ನು ಪರಿಗಣಿಸಿ ನೀರು ನಿರ್ವಹಣೆ ಮಾಡಬೇಕು ಎಂದರು.ಕಸ್ತೂರಿರಂಗನ್ ವರದಿಗೆ ನಮ್ಮ ವಿರೋಧ:
ಪಶ್ಚಿಮ ಘಟ್ಟ ಪ್ರದೇಶಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ವಿಚಾರವಾಗಿ ಮಾತನಾಡಿದ ರೇವಣ್ಣ, ವರದಿ ಜಾರಿಗೆ ತಮ್ಮ ಪಕ್ಷದಿಂದ ಸಂಪೂರ್ಣ ವಿರೋಧವಿದೆ. ಈ ವಿಚಾರವನ್ನು ಕೇವಲ ರಾಜಕೀಯವಾಗಿ ನೋಡಬಾರದು. ಮಲೆನಾಡು ಭಾಗದ ರೈತರು, ಕಾಫಿ ಬೆಳೆಗಾರರು ಹಾಗೂ ಸ್ಥಳೀಯ ಜನರ ಬದುಕಿನ ಮೇಲೆ ಪರಿಣಾಮ ಬೀರುವ ವಿಚಾರವಾಗಿರುವುದರಿಂದ ಎಲ್ಲರೂ ಒಗ್ಗಟ್ಟಾಗಿ ನಿಲುವು ತೆಗೆದುಕೊಳ್ಳಬೇಕು ಎಂದು ಹೇಳಿದರು.ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ವಿಧಾನಮಂಡಲದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಬೇಕು. ಸದನದಲ್ಲಿ ದೀರ್ಘ ಚರ್ಚೆ ನಡೆಸುವುದಕ್ಕಿಂತ ಎಲ್ಲ ಪಕ್ಷಗಳೂ ಒಗ್ಗಟ್ಟಿನಿಂದ ಒಂದೇ ಸಾಲಿನ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ರಾಜ್ಯದ ನಿಲುವು ತಿಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರಕ್ಕೆ ರಾಜ್ಯದ ಆಕ್ಷೇಪಣೆ ಸಲ್ಲಿಸಲು ಸೆ.೨೭ರವರೆಗೆ ಕಾಲಾವಕಾಶವಿದ್ದು, ಸೆ.೨೧ರಿಂದ ೨೩ರವರೆಗೆ ವಿಶೇಷ ಅಧಿವೇಶನ ನಡೆಯುತ್ತಿದೆ. ವರದಿ ಕುರಿತು ಸರ್ಕಾರವು ಸ್ಥಳೀಯರು ಮತ್ತು ರೈತರ ಅಭಿಪ್ರಾಯಗಳನ್ನು ಆಲಿಸುತ್ತಿದೆ. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಸರ್ವಪಕ್ಷ ನಿಯೋಗ ಕೇಂದ್ರಕ್ಕೆ ಹೋಗುವುದಾದರೆ ನಾವೂ ಹೋಗುತ್ತೇವೆ. ರೈತರ ಪರವಾಗಿ ಯಾವುದೇ ಹೋರಾಟವಿದ್ದರೂ ಸಹಕರಿಸುತ್ತೇವೆ. ಸದನದಲ್ಲಿ ಚರ್ಚೆಗಿಂತ ಸರ್ವಾನುಮತದ ನಿರ್ಣಯಕ್ಕೆ ನಾವು ಸಿದ್ಧರಿದ್ದೇವೆ ಎಂದು ರೇವಣ್ಣ ಹೇಳಿದರು.
ಇದೆ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಉಪಾಧ್ಯಕ್ಷ ರಾಂಪುರ ಶೇಖರಪ್ಪ, ನಿರ್ದೇಶಕ ಹೊಸೂರು ಗಂಗಾಧರ್, ಜನತಾ ಬಜಾರ್ ಅಧ್ಯಕ್ಷ ಗಂಡಸಿ ಮಂಜಣ್ಣ, ಅರಸೀಕೆರೆ ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಇತರರು ಇದ್ದರು.