ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವುದು ಕಡ್ಡಾಯ

| Published : Sep 05 2024, 12:39 AM IST

ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವುದು ಕಡ್ಡಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ನಿಗದಿಪಡಿಸಿದ ಷರತ್ತು ಉಲ್ಲಂಘಿಸಿ ಗಣಪತಿ ಪ್ರತಿಷ್ಠಾಪನೆ ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಪವನ್‌ಕುಮಾರ್ ತಿಳಿಸಿದರು.

ತಿಪಟೂರು: ಸರ್ಕಾರ ನಿಗದಿಪಡಿಸಿದ ಷರತ್ತು ಉಲ್ಲಂಘಿಸಿ ಗಣಪತಿ ಪ್ರತಿಷ್ಠಾಪನೆ ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಪವನ್‌ಕುಮಾರ್ ತಿಳಿಸಿದರು. ನಗರದ ತಾಲೂಕು ಆಡಳಿತದ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹಾಗೂ ವಿಸರ್ಜನೆಗೆ ಅನುಮತಿ ಪತ್ರ ಕಡ್ಡಾಯವಾಗಿ ಪಡೆಯಬೇಕು. ನಗರದಲ್ಲಿ ನಗರಸಭೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂಯಿಂದ ಆಯೋಜಕರು ಅನುಮತಿ ಪತ್ರ ಪಡೆದು ಗಣಪತಿ ಪ್ರತಿಷ್ಠಾಪನೆ ಮಾಡಬೇಕು. ಪಿಒಪಿ ಅಥವಾ ಬಣ್ಣ ಲೇಪಿತ ಗಣೇಶಗಳನ್ನು ಹೊರತುಪಡಿಸಿ ಮಣ್ಣಿನಿಂದ ಕೂಡಿದ ನೈಸರ್ಗಿಕ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪನೆ ಮಾಡಬೇಕು ಎಂದು ಸೂಚಿಸಿದರು.

ರಸ್ತೆಗೆ ಅಡ್ಡವಾಗಿ ವಿದ್ಯುತ್ ಕಂಬಗಳಿಗೆ ಫ್ಲೆಕ್ಸ್, ಬ್ಯಾನರ್ ಕಟ್ಟುವಂತಿಲ್ಲ. ವಿಶಾಲ ಪ್ರದೇಶದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ ಸ್ವಚ್ಛತೆ ಆದ್ಯತೆ ನೀಡಬೇಕು. ರಾತ್ರಿ ೧೦ಗಂಟೆಯ ನಂತರ ಧ್ವನಿವರ್ಧಕ ಬಳಸುವಂತಿಲ್ಲ. ಗಣಪತಿ ಮಂಟಪದಲ್ಲಿ ಅಥವಾ ಮೆರವಣಿಗೆ ಸಮಯದಲ್ಲಿ ಮದ್ಯ ಸೇವನೆ ಮಾಡಿ ಪುಂಡಾಟದ ನೃತ್ಯ, ಅಶ್ಲೀಲ ನೃತ್ಯ, ಅಶ್ಲೀಲ ಚಿತ್ರಗೀತೆಗಳನ್ನು ಹಾಕುವಂತಿಲ್ಲ ಎಂದರು.

ಪ್ರತಿಷ್ಢಾಪನೆ ಸ್ಥಳಗಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ದೀಪಾಲಂಕಾರ, ಧ್ವನಿವರ್ಧಕ ಅಳವಡಿಸಲು ಬೆಸ್ಕಾಂ ಇಲಾಖೆಯಿಂದ ಸೂಚನೆಯನುಸಾರ ನಿಯಮ ಪಾಲಿಸಬೇಕು. ಸಾರ್ವಜನಿಕರಿಗೆ, ಆಸ್ತಿ ಪಾಸ್ತಿಗಳಿಗೆ ಹಾನಿಯುಂಟಾಗದಂತೆ ಜಾಗೃತಿ ವಹಿಸಬೇಕು. ಅಲ್ಲದೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರಸಾದ ವಿನಿಯೋಗ ಮಾಡುವಾಗ ಆಹಾರ ಇಲಾಖೆಯ ಗಮನಕ್ಕೆ ತಂದು ಆಹಾರವನ್ನು ಪರಿಶೀಲಿಸಿದ ನಂತರ ಪ್ರಸಾದ ವಿನಿಯೋಗ ಮಾಡಬೇಕು. ಈ ಸಂದರ್ಭದಲ್ಲಿ ಅಹಿತಕರ ಘಟನೆ ಅಥವಾ ಅನಾಹುತ ಸಂಭವಿಸಿದರೆ ಅದಕ್ಕೆ ಆಯೋಜಕರೇ ನೇರ ಕಾರಣರಾಗಲಿದ್ದಾರೆ. ಈ ಎಲ್ಲಾ ನಿಯಮಗಳನ್ನು ಪಾಲಿಸುವ ಮೂಲಕ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಹಬ್ಬವನ್ನು ಆಚರಿಸುವಂತೆ ತಿಳಿಸಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಬೆಸ್ಕಾಂ ಎಇಇ ಮನೋಹರ್, ಸಬ್‌ಇನ್ಸ್‌ಫೆಕ್ಟರ್ ವೆಂಕಟೇಶ್, ಕೃಷಿ ಇಲಾಖೆಯ ಡಾ. ಪವನ್, ತೋಟಗಾರಿಕೆ ಇಲಾಖೆಯ ಚಂದ್ರಶೇಖರ್, ಎಆರ್‌ಟಿಓ ಭಗವಾನ್‌ದಾಸ್, ತಾಲೂಕು ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ ಸೇರಿದಂತೆ ಅಗ್ನಿಶಾಮಕ ಅಧಿಕಾರಿಗಳು, ನಗರಸಭೆ ಸಿಬ್ಬಂದಿ ಮತ್ತಿತರರಿದ್ದರು.