ಸಾರಾಂಶ
ಚನ್ನಪಟ್ಟಣ: ತಾಲೂಕಿನಲ್ಲಿ ನಾನು ನಡೆಸುವ ಜನಸಂಪರ್ಕ ಸಭೆಗೆ ಸಂಬಂಧಿಸಿದಂತೆ ಕೆಲವರು ಸಂಸದರು ಇಲ್ಲಿಗೇಕೆ ಬರಬೇಕು ಅವರಿಗೆ ಏನು ಅಧಿಕಾರ ಇದೆ ಎಂದು ಪ್ರಶ್ನಿಸುತ್ತಾರೆ. ನನಗೆ ಅಧಿಕಾರ ನೀಡಿರುವುದು ಜನ, ನೀವು ಕೊಟ್ಟ ಅಧಿಕಾರವನ್ನು ಸಂಪೂರ್ಣವಾಗಿ ನಿಮ್ಮ ಜತೆ ಹಂಚಿಕೊಳ್ಳುವುದು ನನ್ನ ಹಕ್ಕು. ಯಾರಿಗೋ ಹೆದರಿಕೊಂಡು ಸಭೆ ರದ್ದು ಮಾಡುವುದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೆಸರೇಳದೇ ಪರೋಕ್ಷವಾಗಿ ಟಾಂಗ್ ನೀಡಿದರು.
ನಗರದ ಮಂಗಳವಾರಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಯಾರಿಗೋ ಹೆದರಿಕೊಂಡು ನಾನು ಜಾಗ ಖಾಲಿ ಮಾಡುತ್ತೇನೆ ಎಂಬ ಮಾತೇ ಇಲ್ಲ. ತಾಲೂಕಿನ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದರು.ಕಲಾಪದಲ್ಲಿ ಪ್ರಸ್ತಾಪ:
ಸಂಸದರು ಯಾವ ಯಾವ ಪಂಚಾಯಿತಿಗಳಿಗೆ ಎಷ್ಟು ಬಾರಿ ಹೋಗಿ ಸಭೆ ನಡೆಸಿದ್ದಾರೆ. ಅದಕ್ಕೆ ತಗಲಿರುವ ವೆಚ್ಚವೆಷ್ಟು ಎಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ನಾನೊಬ್ಬ ಜನಪ್ರತಿನಿಧಿಯಾಗಿದ್ದು, ತಮ್ಮ ಸಮಸ್ಯೆಗಳನ್ನು ಪರಿಹರಿಸಲಿ ಎಂದೇ ಜನ ನನ್ನನ್ನು ಚುನಾಯಿಸಿದ್ದಾರೆ. ಪ್ರಶ್ನೆ ಕೇಳುವುದಾದರೆ ಸಾರ್ವಜನಿಕವಾಗಿ ಕೇಳಿ ಮೂರನೇ ವ್ಯಕ್ತಿಯಿಂದ ಕೇಳಿಸುವುದಲ್ಲ ಎಂದು ಕಿಡಿಕಾರಿದರು.ಟಿ.ವಿ.ಯವರ ಮುಂದೆ ಮಾತನಾಡಿದರೆ ಪ್ರಚಾರ ಬರಬಹುದು. ಆದರೆ, ಇಲ್ಲಿ ಬಂದು ಕೇಳಿದಾಗ ಜನರ ಸಂಕಷ್ಟದ ಅರಿವಾಗಲಿದೆ. ಚನ್ನಪಟ್ಟಣದಲ್ಲಿ ಇ-ಖಾತೆ ಆಗುತ್ತಿಲ್ಲ, ಜನರಿಗೆ ತೊಂದರೆಯಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಪ್ರಶ್ನಿಸಬೇಕಿತ್ತು, ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಬೇಕಿತ್ತು, ಇದನ್ನು ನಾನು ಸ್ವಾಗತಿಸುತ್ತಿದ್ದೆ ಎಂದರು.
ಅವರಿಗೆ ಜನರ ಕಷ್ಟ ಕೇಳಿ ಅದನ್ನು ಅರಿತುಕೊಳ್ಳುವ ತಾಳ್ಮೆ ಇಲ್ಲ. ನಿಮಗೆ ಇಚ್ಛಾಶಕ್ತಿ ಇದ್ದಲ್ಲಿ ನೀವು ಇಂತಹ ನೂರು ಸಭೆಗಳನ್ನು ಮಾಡಿ ನಾನು ನಿಮಗೆ ಬೆಂಬಲ ನೀಡುತ್ತೇನೆ. ನಿಮ್ಮ ಕೈಲಿ ಬರಲಿಕ್ಕೆ ಆಗಲ್ಲ ಎಂದರೆ, ಬೇರೆ ಯಾರೋ ಮಾಡುತ್ತಾರೆ ಎಂದು ಪ್ರಶ್ನೆ ಎತ್ತಿದ್ದರೆ ಇದು ಸರಿಯೋ ತಪ್ಪೋ ಎಂಬುದನ್ನು ತಾಲೂಕಿನ ಜನರೇ ನಿರ್ಧರಿಸಲಿದ್ದಾರೆ ಎಂದರು. ಪಂಚ ಗ್ಯಾರಂಟಿ ಜಾರಿ:ಕೆಲವರು ನಮ್ಮ ಗ್ಯಾರಂಟಿಗಳ ಕುರಿತು ಲೇವಡಿ ಮಾಡಿದರು. ಹಣ ಎಲ್ಲಿಂದ ಬರುತ್ತದೆ ಎಂದರು. ಆದರೆ, ಇಂದು ನಾವು ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ನಿರುದ್ಯೋಗಿ ಪದವೀಧರರಿಗೆ ನೀಡಿರುವ ಐದನೇ ಗ್ಯಾರಂಟಿಯನ್ನು ಶೀಘ್ರದಲ್ಲೇ ಜಾರಿಗೆ ತರಲಿದ್ದೇವೆ. ಅನ್ನಭಾಗ್ಯ ಯೋಜನೆಗೆ ಹಣ ನೀಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. ಆದರೆ, ಜನರ ಖಾತೆಗೆ ನಾವು ನೇರವಾಗಿ ಹಣ ಪಾವತಿಸುವ ಮೂಲಕ ನಮ್ಮ ಮಾತು ಉಳಿಸಿಕೊಂಡಿದ್ದೇವೆ ಎಂದರು.
ಅಂಬಾನಿ ಅದಾನಿಗೆ ಸಹಕರಿಸಿಲ್ಲ:ನಾವು ನಿಮ್ಮಂತೆ ಕೈಗಾರಿಕೋದ್ಯಮಿಗಳಿಗೆ ಸಹಕಾರ ನೀಡುತ್ತಿಲ್ಲ. ನಿಮ್ಮ ಪಾಲಸಿಗಳು ಅದಾನಿ, ಅಂಬಾನಿ ಅಂತಹ ಉದ್ಯಮಿಗಳಿಗೆ ಅನುಕೂಲವಾಗಿರುತ್ತದೆ. ಆದರೆ, ನಮ್ಮ ಪಾಲಸಿಗಳು ಬಡವರಿಗೆ ಅನುಕೂಲ ಕಲ್ಪಿಸುವುದಾಗಿದೆ. ನಿಮ್ಮಂತೆ ಉಳ್ಳವರಿಗೆ ಅನುಕೂಲ ಕಲ್ಪಿಸುವ ಕಾರ್ಯಗಳನ್ನು ನಾವು ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವನ್ನು ತಿವಿದರು.
ಸಮಸ್ಯೆ ಬಗೆಹರಿಸಿ:ಇಂದಿನ ಜನಸಂಪರ್ಕ ಸಭೆಯಲ್ಲಿ ರಸ್ತೆ, ಚರಂಡಿ, ಸೈಟು, ಮನೆ, ಇ-ಖಾತೆಗೆ ಸಂಬಂಧಿಸಿದಂತೆ, ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ನ್ಯಾಯಬದ್ಧವಾಗಿ ನಡೆದುಕೊಂಡು ಜನರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇ-ಖಾತೆಗೆ ಸಂಬಂಧಿಸಿದಂತೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಚನ್ನಪಟ್ಟಣ ವ್ಯಾಪ್ತಿಯಲ್ಲಿ 9.5 ಸಾವಿರ ನಿವೇಶನಗಳಿಗೆ ಮಾತ್ರ ಇ-ಖಾತೆ ನೀಡಲಾಗಿದೆ. ಹಣ ಕೊಟ್ಟವರಿಗೆ ಮಾತ್ರ ಇ-ಖಾತೆ ಮಾಡಿಕೊಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಕ್ಕಪಕ್ಕದಲ್ಲೇ ಎ ಹಾಗೂ ಬಿ ಖಾತೆ ನೀಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಖಾತೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ಎಷ್ಟು ಗ್ರಾಮ ಠಾಣಾ ಇದೆ ಸರ್ವೇ ಮಾಡಿಸುವಂತೆ ಸೂಚಿಸಿದರು.ನಿವೇಶನ ರಹಿತರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಎಲ್ಲೆಲ್ಲಿ ಸರ್ಕಾರಿ ಭೂಮಿ ಇದೆಯೋ ಅಲ್ಲಿ ಭೂಮಿ ಗುರುತಿಸಿ ನಿವೇಶನ ನೀಡಲು ಸೂಚಿಸಲಾಗಿದೆ. ಸರ್ವೇ ಕಾರ್ಯ ಸಹ ಆರಂಭಗೊಂಡಿದೆ. ಇಲ್ಲಿ ಯಾವ ಶಾಸಕರು ಇದ್ದಾರೆ ಎನ್ನುವುದನ್ನು ನಾವು ನೋಡುವುದಿಲ್ಲ. ಜನರಿಗೆ ಅನುಕೂಲ ಕಲ್ಪಿಸುತ್ತೇವೆ ಎಂದರು.
ಸಭೆಯಲ್ಲಿ ಮಾಜಿ ಶಾಸಕ ಎಂ.ಸಿ.ಅಶ್ವತ್ಥ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್, ರಾಜ್ಯ ಕುಕ್ಕುಟ ಮಹಾ ಮಂಡಳದ ಅಧ್ಯಕ್ಷ ಡಿ.ಕೆ.ಕಾಂತರಾಜು, ಮುಖಂಡರಾದ ದುಂತೂರು ವಿಶ್ವನಾಥ್, ಎಂ.ಸಿ.ಕರಿಯಪ್ಪ, ಎ.ಸಿ.ವೀರೇಗೌಡ, ತಹಸೀಲ್ದಾರ್ ಮಹೇಂದ್ರ, ಪೌರಾಯುಕ್ತ ಪುಟ್ಟಸ್ವಾಮಿ ಇತರರಿದ್ದರು.ಪೊಟೋ೧೬ಸಿಪಿಟ೨: ಚನ್ನಪಟ್ಟಣದ ಮಂಗಳವಾರಪೇಟೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))