ಸಾರಾಂಶ
ಪ್ರಜಾಪ್ರಭುತ್ವದ ದೇಶದಲ್ಲಿ ಕೇವಲ ಮತದಾನ ಮಾಡಿದರಷ್ಟೇ ಕರ್ತವ್ಯ ಮುಗಿಯುವುದಿಲ್ಲ. ಅದರ ಹಿಂದಿರುವ ಆಲೋಚನೆಗಳು, ಚಿಂತನೆಗಳು ಮುಖ್ಯವಾಗಿವೆ, ಇಂದು ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಮನೆಯಲ್ಲೇ ಉಳಿಯುವರು. ಆದರೆ ಅವಿದ್ಯಾವಂತರು ಮತದಾನದಲ್ಲಿ ತೊಡಗುವರು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಯುವ ಮತದಾರರು ಆಸೆ- ಆಮಿಷಗಳಿಗೆ ಬಲಿಯಾಗದೆ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಪ್ರಾಮಾಣಿಕ ವ್ಯಕ್ತಿಗಳನ್ನು ಚುನಾಯಿಸಬೇಕಾದ ಕರ್ತವ್ಯ ಯುವಕರ ಕೈಯ್ಯಲ್ಲಿದೆ ಎಂದು ಎರಡನೇ ಅಪರ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ್ ಅಲಬೂರ್ ಹೇಳಿದರು.ಪಟ್ಟಣದ ಎಸ್‌ಡಿಸಿ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಕಚೇರಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಮತ್ತು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಶಕ್ತಿ ಮೇಲೆ ದೇಶ ನಿಂತಿದೆ. ಯುವಕರಿಗೆ ಮತದಾನದ ಹಕ್ಕು ಬಂದಾಗ ರಾಜಕೀಯ ಪಕ್ಷಗಳು ನೀಡುವ ಆಮಿಷಗಳಿಗೆ ತುತ್ತಾಗದೆ ಯಾರು ನಮ್ಮ ಸಮಾಜವನ್ನು ಬದಲಾಯಿಸಲು ಮುಂದಾಗುವರು ಎಂಬುದರ ಬಗ್ಗೆ ಚಿಂತಿಸಿ ಮತ ಚಲಾಯಿಸಬೇಕು. ಎಡವಿದರೆ ಮತ್ತೆ ಐದು ವರ್ಷಗಳ ಕಾಲ ಗುಲಾಮರಂತೆ ಇರಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಪ್ರಜಾಪ್ರಭುತ್ವದ ದೇಶದಲ್ಲಿ ಕೇವಲ ಮತದಾನ ಮಾಡಿದರಷ್ಟೇ ಕರ್ತವ್ಯ ಮುಗಿಯುವುದಿಲ್ಲ. ಅದರ ಹಿಂದಿರುವ ಆಲೋಚನೆಗಳು, ಚಿಂತನೆಗಳು ಮುಖ್ಯವಾಗಿವೆ, ಇಂದು ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಮನೆಯಲ್ಲೇ ಉಳಿಯುವರು. ಆದರೆ ಅವಿದ್ಯಾವಂತರು ಮತದಾನದಲ್ಲಿ ತೊಡಗುವರು. ಇಂತವರಿಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದರಲ್ಲದೆ, ಯಾವುದೇ ಯಶಸ್ಸಿಗೆ ಅಡ್ಡದಾರಿಯಿಲ್ಲ. ಪರಿಶ್ರಮವೊಂದೇ ಮುಖ್ಯ ಮಾರ್ಗ. ಅಡ್ಡದಾರಿಯಲ್ಲಿ ಯಶಸ್ವಿಯಾಗುವವರು ಬಹುಬೇಗನೆ ಕೆಳಕ್ಕೆ ಬೀಳುವರು. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಭಾರತದ ಭವಿಷ್ಯಕ್ಕಾಗಿ ಮತ ಹಾಕಿ ಜವಾಬ್ದಾರಿಯುತ ಪ್ರಜೆಗಳಾಗಬೇಕೆಂದು ಹೇಳಿದರು.ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಭಾಗವಹಿಸುವುದು ಅತ್ಯಗತ್ಯವಾಗಿದೆ. ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಯುವಕರನ್ನು ಸೆಳೆಯುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್.ನಾರಾಯಣಪ್ಪ, ಎಸ್‌ಡಿಸಿ ಕಾಲೇಜಿನ ಕಾರ್ಯದರ್ಶಿ ಉಷಾ ಗಂಗಾಧರ್, ಹಿರಿಯ ವಕೀಲರಾದ ಅಮರೇಶ್, ಆನಂದ್, ರಮೇಶ್, ಬಿಇಒ ಗುರುಮೂರ್ತಿ, ಇನ್ಸ್‌ಪೆಕ್ಟರ್ ದಯಾನಂದ್ ಇದ್ದರು.