ಉಡುಪಿ: ಇಲ್ಲಿನ ಕಡಿಯಾಳಿಯ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶರ್ವಾಣಿ ಮಂಟಪದಲ್ಲಿ ಲೇಖಕ ಗುರುಪ್ರಸಾದ ಭಟ್ ಅವರ ಎರಡು ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಭಾರತ್ ವಿಕಾಸ್ ಪರಿಷದ್ (ಭಾರ್ಗವ ಶಾಖೆ) ಅವರ ಆಶ್ರಯದಲ್ಲಿ ಆಯೋಜಿಸಲಾಯಿತು.ಕಾರ್ಯಕ್ರಮದ ಮುಖ್ಯ ಅಭ್ಯಾಗತರಾದ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅವರು, ಇತಿಹಾಸದಲ್ಲಿ ಮುಂದಿನ ಜನಾಂಗಕ್ಕೆ ಸತ್ಯದ ದರ್ಶನ ಮಾಡಿಸುವಂತಹ ವ್ಯವಸ್ಥೆ ನಮ್ಮಲ್ಲಿ ಕಡಿಮೆಯಿದೆ. ನಮ್ಮ ಸತ್ಯ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯ ಅತ್ಯಗತ್ಯ ಎಂದರು.

ಅದ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಪಾದೇಕಲ್ಲು ವಿಷ್ಣು ಭಟ್ ಅವರು, ಸತ್ಯವನ್ನು ಬಿಟ್ಟು ಬೇರೇನೂ ಬರೆಯುವುದಿಲ್ಲ ಎಂದು ನಮ್ಮ ಪ್ರಾಚೀನ ಲೇಖಕರು ಪ್ರಮಾಣ ನೀಡಿಯೇ ಬರೆಯಲು ಪ್ರಾರಂಭಿಸುತ್ತಿದ್ದರು. ಸತ್ಯವನ್ನು ಹೇಳಲು ಅವರು ಕಿಂಚಿತ್ ಹಿಂಜರಿಯಲಿಲ್ಲ. ಹೀಗೆಯೇ, ನಮ್ಮ ಇತಿಹಾಸದಲ್ಲಿ ನಡೆದ ಸತ್ಯಸಂಗತಿಗಳನ್ನು ಬರೆದು ಇಲ್ಲಿಯವರೆಗೆ ಇತಿಹಾಸದ ಮೇಲಾಗಿರುವ ದೌರ್ಜನ್ಯವನ್ನು ಸರಿಪಡಿಸಬೇಕಾಗಿದೆ ಎಂದರು.ಉಡುಪಿ ನಿವಾಸಿಯಾದ ಲೇಖಕ ಗುರುಪ್ರಸಾದ ಭಟ್ ಅವರು "ಈ ಎರಡು ಗ್ರಂಥಗಳನ್ನು ನಾನೇಕೆ ಬರೆದೆ " ಎಂದು ಮಾಹಿತಿ ನೀಡಿದರು. ಒಂದು ಸೈದ್ಧಾಂತಿಕ ವರ್ಗದ ಇತಿಹಾಸಕಾರರು ಅಸಂಬದ್ಧತೆಯನ್ನೇ ತುಂಬಿ ಬರೆದ ಭಾರತೀಯ ಇತಿಹಾಸವನ್ನು ನಾವು ಇಂದು ಸರಿಪಡಿಸಬೇಕಾಗಿದೆ. ಅವರು ಸೃಷ್ಟಿಸಿದ ಕಲ್ಪಿತಕತೆಗಳನ್ನು ಸಮಕಾಲೀನ ಪುರಾವೆಗಳ ಆಧಾರದಿಂದಲೇ ಬಯಲುಗೊಳಿಸಿ, ಸರಿಪಡಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಆ ನಿಟ್ಟಿನಲ್ಲಿ ಶ್ರೀ ಶೃಂಗೇರಿ ಮಠದ ಮೇಲೆ ಶಿವಾಜಿ ಮಹಾರಾಜರು ಎಸಗಿದರೆನ್ನಲಾದ ಲೂಟಿ ಮತ್ತು ಕೊಳ್ಳೆಯ ಆರೋಪವನ್ನು ಪುರಾವೆಗಳ ಸಮೇತ ಅಲ್ಲಗಳೆದಿದ್ದು ಹಾಗೂ ಶಿವಾಜಿ ಮಹಾರಾಜರು ಮೃತ್ಯುವಶರಾದ 112 ವರ್ಷಗಳು ಕಳೆದ ನಂತರ ಜರುಗಿದ ಲೂಟಿಗೆ ಅವರನ್ನು ನೇರವಾಗಿ ಆರೋಪಿಸುವುದು ಸರಿಯಲ್ಲ. ಅಂತೆಯೇ, ಔರಂಗಜೇಬನು ನಿಲ್ಲಿಸಿದ್ದ ಪುರಿಯ ಶ್ರೀ ಜಗನ್ನಾಥ ರಥೊತ್ಸವವನ್ನು 71 ವರ್ಷಗಳ ದೀರ್ಘಕಾಲದ ಬಳಿಕ ಪುನಾರಂಭಿಸಿದ ಕೀರ್ತಿ ಮರಾಠರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು. ಡಾ. ನಂದನ ಪ್ರಭು ಅವರು ಪುಸ್ತಕಗಳ ಪರಿಚಯ ಮಾಡಿದರು. ಆ.ಭಾ.ಸಾ.ಪ. ಕಾರ್ಯದರ್ಶಿ ಗುರುಪ್ರಸಾದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.