ಸಾರಾಂಶ
ಹಾವೇರಿ: ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟ, ದುರ್ವ್ಯಸನಗಳ ದಾಸರಾಗುತ್ತಿರುವುದು ಕಳವಳವನ್ನುಂಟು ಮಾಡಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದು ಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ್ ಶೆಟ್ಟರ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಆಶ್ರಯದಲ್ಲಿ ಶನಿವಾರ ನಗರದಲ್ಲಿ ನಡೆದ ಜನಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯೋಜನೆಯ ವತಿಯಿಂದ ಮದ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ, ಮಾದಕ ವಸ್ತು ವಿರೋಧಿ ಹಾಗೂ ತಂಬಾಕು ವಿರೋಧಿ ದಿನಾಚರಣೆಗಳು ಯಶಸ್ವಿಯಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹತ್ತು ಹಲವಾರು ಜನಜಾಗೃತಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಉತ್ತಮ ಸ್ಪಂದನೆ ಸಿಗುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು. ನಿಕಟ ಪೂರ್ವ ಅಧ್ಯಕ್ಷ ಡಾ. ಮುತ್ತಣ್ಣ ಎಲಿಗಾರ, ಕೋಶಾಧಿಕಾರಿ ಮಂಜುನಾಥ್, ಪ್ರಕಾಶ ಶೆಟ್ಟಿ, ನಿಜಲಿಂಗಪ್ಪ ಬಸೇಗೆಣ್ಣಿ, ಪ್ರಭಾಕರರಾವ್ ಮಂಗಳೂರು, ನಾಗೇಂದ್ರ ಕಡಕೋಳ ಹಾಗೂ ವೇದಿಕೆಯ ಸದಸ್ಯರು ಪಾಲ್ಗೊಂಡಿದ್ದರು. ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಭಾಸ್ಕರ್ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕು ಯೋಜನಾಧಿಕಾರಿ ನಾರಾಯಣ್ ಜಿ. ಸ್ವಾಗತಿಸಿದರು. ತೀರ್ಥಪ್ರಸಾದ ನಿರೂಪಿಸಿದರು. ಮಂಜುನಾಥ್ ವಂದಿಸಿದರು.