ಸಾರಾಂಶ
ಮೂರ್ಖರು ನಡೆದ ದಾರಿಯಲ್ಲಿ ವಿದ್ಯಾವಂತರು ಹೆಜ್ಜೆ ಇಡುವಂತಾಗಬಾರದು. ಜನರಲ್ಲಿ ಮೌಢ್ಯ ಬಿತ್ತದೆ ಅರಿವನ್ನುಂಟು ಮಾಡಬೇಕು. ಜನರಲ್ಲಿ ವೈಜ್ಞಾನಿಕತೆಯನ್ನು ಬೆಳೆಸಬೇಕೆನ್ನುವುದು ಸಂವಿಧಾನದ ಆಶಯ. ಸಂವಿಧಾನದ ಭಾಗ 4ಎ, ವಿಧಿ 51 ಎ (ಎಚ್) ರಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು
ಸಂವಿಧಾನ ಅರಿವು
ದಾವಣಗೆರೆ: ಮೂರ್ಖರು ನಡೆದ ದಾರಿಯಲ್ಲಿ ವಿದ್ಯಾವಂತರು ಹೆಜ್ಜೆ ಇಡುವಂತಾಗಬಾರದು. ಜನರಲ್ಲಿ ಮೌಢ್ಯ ಬಿತ್ತದೆ ಅರಿವನ್ನುಂಟು ಮಾಡಬೇಕು. ಜನರಲ್ಲಿ ವೈಜ್ಞಾನಿಕತೆಯನ್ನು ಬೆಳೆಸಬೇಕೆನ್ನುವುದು ಸಂವಿಧಾನದ ಆಶಯ. ಸಂವಿಧಾನದ ಭಾಗ 4ಎ, ವಿಧಿ 51 ಎ (ಎಚ್) ರಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು ಪ್ರತಿ ಭಾರತೀಯರ ಕರ್ತವ್ಯ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟಿನ ನಿರ್ದೇಶಕ ಅಬ್ದುಲ್ ರೆಹಮಾನ್ ಪಾಷ ತಿಳಿಸಿದರು.ಇಲ್ಲಿನ ಎಂಸಿಸಿ ಬಿ ಬ್ಲಾಕಿನಲ್ಲಿರುವ ಕರುಣಾ ಜೀವ ಕಲ್ಯಾಣ ಟ್ರಸ್ಟಿನ ಕಚೇರಿಯಲ್ಲಿ ಶನಿವಾರ ನಡೆದ ‘ವೈಜ್ಞಾನಿಕ ಮನೋವೃತ್ತಿ ಮತ್ತು ಸಂವಿಧಾನ ಸಾಕ್ಷರತೆ’ ಎಂಬ ಒಂದು ದಿನದ ಕಾರ್ಯಾಗಾದಲ್ಲಿ ಶಿಬಿರಾರ್ಥಿಗಳಿಗೆ ಸಂವಿಧಾನದ ರಚನೆ, ಕಾರ್ಯಗಳು ಮತ್ತು ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿದರು.
ಭಾರತ ಸಂವಿಧಾನ ಎಂದರೆ, ಧರ್ಮ, ಜಾತಿ, ಲಿಂಗ, ವರ್ಗ, ಪ್ರದೇಶ, ಭಾಷೆ ಎಲ್ಲವನ್ನೂ ಮೀರಿ ಭಾರತದ ನಾಗರಿಕರಾದ ನಮಗೆಲ್ಲರಿಗೂ ವೈಯುಕ್ತಿಕ ಮತ್ತು ಸಾರ್ವಜನಿಕ ಬದುಕಿನ ದಾರಿದೀಪ ಎಂದರು.ಸಂವಿಧಾನದ ಪ್ರಸ್ತಾವನೆಯನ್ನು ಅನಾವರಣ ಮಾಡುವುದರ ಮೂಲಕ ಚಿಂತಕ ಪ್ರೊ.ಎಂ.ಬಸವರಾಜ್ ಉದ್ಘಾಟನೆ ಮಾಡಿದರು. ಮೌಢ್ಯ ಮತ್ತು ಸಂವಿಧಾನದ ರಚನೆಯ ಬಗ್ಗೆ ತಮಗಿದ್ದ ಕೆಲವೊಂದು ಪ್ರಶ್ನೆಗಳಿಗೆ ಶಿಬಿರಾರ್ಥಿಗಳು ಪ್ರಶ್ನಿಸುವುದರ ಮೂಲಕ ಉತ್ತರ ಪಡೆದರು.
ಕರುಣಾ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಕೀಲ ಅನಿಷ್ ಪಾಷ, ರೈತ ನಾಯಕ ಶ್ರೀ ತೇಜಸ್ವಿ ಪಟೇಲ್, ಜಾಗತಿಕ ಲಿಂಗಾಯತ ಅಧ್ಯಕ್ಷ ರುದ್ರಮುನಿ, ಕುಸುಮಾ ಲೋಕೇಶ್, ಗುರುಮೂರ್ತಿ, ಕೆ.ಎಸ್.ಈಶ್ವರಪ್ಪ ಇತರರು ಇದ್ದರು.