ಸಾರಾಂಶ
ಗೊಜನೂರಿನಲ್ಲಿ ಕಸಾಪದಿಂದ ಚಿಣ್ಣರ ಚಾವಡಿ ಕಾರ್ಯಕ್ರಮ
ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ಪ್ರತಿನಿತ್ಯ ಕನ್ನಡ ಪುಸ್ತಕ ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದು ಲಕ್ಷ್ಮೇಶ್ವರ ಎಪಿಎಂಸಿಯ ಸಹಾಯಕ ಕೃಷಿ ಮಾರುಕಟ್ಟೆ ಅಧಿಕಾರಿ ನಿಜಲಿಂಗಪ್ಪ ತೋಟದ ಹೇಳಿದರು.ಶನಿವಾರ ಸಮೀಪದ ಗೊಜನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಚಿಣ್ಣರ ಚಾವಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹಾಗೂ ಪ್ರೀತಿ ಹೊಂದುವುದು ಅಗತ್ಯವಾಗಿದೆ. ಮಾತೃಭಾಷೆ ಕನ್ನಡದಲ್ಲಿ ಸುಲಿತವಾಗಿ ಮಾತನಾಡಿದ ಹಾಗೆ ಬೇರೆ ಭಾಷೆಯಲ್ಲಿ ಮಾತನಾಡಲು ಸಾಧ್ಯವಿಲ್ಲ. ಮಕ್ಕಳು ಪ್ರತಿನಿತ್ಯ ಕನ್ನಡ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಕಾರ್ಯ ಮಾಡಬೇಕು. ಕನ್ನಡ ಭಾಷೆಯ ಮಹಾಕವಿ ಪಂಪ ಭಾರತವನ್ನು ಓದುವ ಮೂಲಕ ಕನ್ನಡ ಸಾಹಿತ್ಯದ ಆಳ ಅಗಲ ಅರ್ಥ ಮಾಡಿಕೊಳ್ಳಬಹುದಾಗಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಾವೆಲ್ಲ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಚಿಣ್ಣರ ಚಾವಡಿ ಕಾರ್ಯಕ್ರಮದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಂದೆ ಹಾಗೂ ತಾಯಿ ಪಾತ್ರ ಹೆಚ್ಚೋ ಎನ್ನುವ ಚರ್ಚೆಯಲ್ಲಿ ಭಾಗವಹಿಸಿ ಉತ್ತಮವಾಗಿ ಭಾಗವಹಿಸಿದ್ದು ಕಂಡು ಬಂದಿತು. ಶಿಕ್ಷಕ ಶಿವಾನಂದ ಮಾಯಪ್ಪನವರ ಚಿಣ್ಣರ ಚಾವಡಿ ಕಾರ್ಯಕ್ರಮ ನಡೆಸಿಕೊಟ್ಟರು.ಈ ವೇಳೆ ಅಶೋಕ ಸೊರಟೂರ ಮಾತನಾಡಿ, ಮಕ್ಕಳು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದುವುದು ಅಗತ್ಯವಾಗಿದೆ. ಶಿಕ್ಷಕರು ಮಕ್ಕಳಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹಾರ ಮಾಡಬೇಕು ಅಂದಾಗ ಕನ್ನಡ ಭಾಷೆ ಉಳಿದು ಬೆಳೆಯುತ್ತದೆ ಎಂದು ಹೇಳಿದರು.
ನ್ಯಾಯವಾದಿ ಬಸವರಾಜ ಸಂಶಿ ಮಾತನಾಡಿ ಮಕ್ಕಳು ಕನ್ನಡ ಭಾಷೆಯ ಅಧ್ಯಯನ ಮಾಡುವ ಮೂಲಕ ಭಾಷೆ ಬೆಳವಣಿಗೆಗೆ ತಮ್ಮ ಕಾಣಿಕೆ ನೀಡಬೇಕು ಎಂದು ಹೇಳಿದರು.ಈ ವೇಳೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಪೂಜಾರ, ಗ್ರಾಪಂ ಉಪಾಧ್ಯಕ್ಷ ಮಹಾಂತಗೌಡ ಪಾಟೀಲ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ನೀಲವ್ವ ಮಾದರ ವಹಿಸಿಕೊಂಡು ಕಾರ್ಯಕ್ರಮ ಉದ್ಘಾಟಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಎನ್.ಕೆ.ಹತ್ತಿಕಾಳ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಕ್ಕಳು ಮಾಡಬೇಕು ಎಂದು ಹೇಳಿದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಚ.ಹತ್ತಿಕಾಳ ಇದ್ದರು.
ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಪೂಜಾರ ಹಾಗೂ ನಾಗರಾಜ ಮಜ್ಜಿಗುಡ್ಡ ಕಾರ್ಯಕ್ರಮ ನಿರ್ವಹಿಸಿದರು.