ಸಂವಿಧಾನದಡಿ ಸಿಗುವ ಹಕ್ಕಿಗಾಗಿ ಹೋರಾಟ ಅಗತ್ಯ

| Published : Jan 19 2025, 02:19 AM IST

ಸಾರಾಂಶ

It is necessary to fight for the right under the constitution

-ಸಂವಿಧಾನೇರೋ ಮಾನ್‌ಪಾನ್ ಅಭಿಯಾನದ ರಾಜ್ಯಮಟ್ಟದ ವಿಚಾರಗೋಷ್ಠಿಯಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣಾನಾಯ್ಕ ಸಲಹೆ

-----

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಬಂಜಾರ ಜನಾಂಗ ಸಂವಿಧಾನದ ಹಂಗಿನಲ್ಲಿದೆಯೇ ಹೊರತು ಯಾರ ಮುಲಾಜಿನಲ್ಲಿಲ್ಲ. ಮುಂದಿನ ಪೀಳಿಗೆ ಉಳಿಯಬೇಕಾಗಿರುವುದರಿಂದ ಸಂವಿಧಾನದಡಿ ಸಿಗಬೇಕಾದ ಹಕ್ಕಿಗಾಗಿ ಹೋರಾಡೋಣ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್-ಕರ್ನಾಟಕ, ದಿಕ್ಸೂಚಿ ಬಂಜಾರ-ಕರ್ನಾಟಕ ವತಿಯಿಂದ ಸಂವಿಧಾನ ಗೌರವ ಅಭಿಯಾನ ಸಂವಿಧಾನೇರೋ ಮಾನ್ ಪಾನ್ ಅಭಿಯಾನದ ಅಂಗವಾಗಿ ಉಮಾಪತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬರ ಸಂವಿಧಾನ ಬದಲಾಯಿಸಿದ್ದು ಯಾರು? ಬಲಪಡಿಸಿದ್ದು ಯಾರು? ವಿಷಯ ಕುರಿತ ರಾಜ್ಯ ಮಟ್ಟದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಲಂಬಾಣಿ ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ವೈಯಕ್ತಿಕ ಪ್ರತಿಷ್ಠೆಗಳನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಅನ್ಯಾಯದ ವಿರುದ್ಧ ಹೋರಾಡಬೇಕು. ಸಂವಿಧಾನ ಬದಲಾವಣೆಯಾದರೆ ಮಕ್ಕಳ ಭವಿಷ್ಯ ಏನಾಗಬಹುದು ಎನ್ನುವ ಗೊಂದಲದಲ್ಲಿದ್ದೇವೆ. ಲಂಬಾಣಿ ಸಮಾಜಕ್ಕೆ ಮುಂದೆ ಮಾರಕವಾಗಬಹುದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ನಮ್ಮ ಸಮಾಜದ ಒಬ್ಬರಾದರೂ ಸಚಿವರಿರುತ್ತಾರೆ. ಪ್ರತಿ ತಾಲೂಕು ಜಿಲ್ಲಾ ಮಟ್ಟದಲ್ಲಿ ಸಂಘಟನೆ ಹುಟ್ಟು ಹಾಕಿ ಹೋರಾಟ ಮಾಡಬೇಕಿದೆ ಎಂದರು.

ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ್ ಮಾತನಾಡಿ, ಅಂಬೇಡ್ಕರ್ ದೇಶಕ್ಕೆ ಸಂವಿಧಾನವನ್ನು ದೊಡ್ಡ ಕೊಡುಗೆಯಾಗಿ ನೀಡಿದ್ದಾರೆ. ಚುನಾವಣೆಯಲ್ಲಿ ಅಂಬೇಡ್ಕರ್‌ರವರನ್ನು ಸೋಲಿಸಿದ ಕಾಂಗ್ರೆಸ್ ಪಕ್ಷ ಅನೇಕ ಹಗರಣಗಳಲ್ಲಿ ಸಿಲುಕಿಕೊಂಡಿದೆ. ಮುಡಾ, ವಾಲ್ಮೀಕಿ ಹಗರಣದಲ್ಲಿರುವ ರಾಜ್ಯ ಸರ್ಕಾರಕ್ಕೆ ಅಂಬೇಡ್ಕರ್ ಹೆಸರೇಳುವ ನೈತಿಕತೆಯಿಲ್ಲ ಎಂದರು.

ದಿಕ್ಸೂಚಿ ಮಾತುಗಳನ್ನಾಡಿದ ಕುಡುಚಿ ಮಾಜಿ ಶಾಸಕ ಪಿ.ರಾಜೀವ್, ಸಂವಿಧಾನ ಬದಲಾವಣೆ ಬಗ್ಗೆ ಸಾಕಷ್ಟು ಗೊಂದಲ, ಚರ್ಚೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಸಂವಿಧಾನ ಬದಲಾವಣೆ ಮಾಡುತ್ತಾರೆಂಬ ಆತಂಕವಿದೆ. ಲಂಬಾಣಿ ಸಮಾಜಕ್ಕೂ ಸಂವಿಧಾನಕ್ಕೂ ಅವಿನಾಭಾವ ಸಂಬಂಧವಿದೆ. ಅಂಬೇಡ್ಕರ್‌ ಅವರು ಸಂವಿಧಾನ ನೀಡಿದಾಗ ಆರು ಜಾತಿಗಳನ್ನು ಸಂವಿಧಾನದೊಳಗೆ ಸೇರಿಸುತ್ತಾರೆ. 1919 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್ ಕಮಿಟಿ ರಚಿಸಿ ಮೀಸಲಾತಿ ನೀಡಿದರು ಎಂದು ಸ್ಮರಿಸಿದರು.

ಸಂವಿಧಾನ ಜಾರಿಗೆ ಬಂದು 75 ವರ್ಷವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಸಂತ ಸೇವಾಲಾಲ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರವರ ಫೋಟೋವನ್ನು ಪ್ರತಿ ಮನೆಯಲ್ಲಿಟ್ಟು ಪೂಜಿಸುವುದನ್ನು ಲಂಬಾಣಿ ಜನಾಂಗ ಮರೆಯಬಾರದು. ಸಂವಿಧಾನದಿಂದ ನಮ್ಮ ಜನಾಂಗ ಈ ಮಟ್ಟಕ್ಕೆ ಬೆಳೆದಿದೆ. ರಾಹುಲ್‌ಗಾಂಧಿ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಆದರೆ, ಅವರ ಅಜ್ಜಿ ಇಂದಿರಾಗಾಂಧಿ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡದೆ ನ್ಯಾಯಾಂಗಕ್ಕೆ ಅವಮಾನ ಮಾಡಿದರು ಎಂದರು.

ದೇಶಕ್ಕೆ ಸಂವಿಧಾನ ಸಮರ್ಪಣೆ ಮಾಡಿದ ದಿನವನ್ನು ಕಾಂಗ್ರೆಸ್ ಗೌರವಿಸುತ್ತಿಲ್ಲ. ಬಿಜೆಪಿ, ಮೇಲ್ವರ್ಗದ ಪರವಾಗಿದೆ ಎಂದು ಕಾಂಗ್ರೆಸ್ ಅಪ ಪ್ರಚಾರದಲ್ಲಿ ತೊಡಗಿದೆ. ಮೀಸಲಾತಿ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ಆರ್ ಎಸ್ಎಸ್ ಸಿದ್ದಾಂತ ಸ್ಪಷ್ಟವಾಗಿದೆ. ಆರ್ಟಿಕಲ್ 368ರ ಪ್ರಕಾರ ಸಂವಿಧಾನ ತಿದ್ದುಪಡಿಗೆ ಅವಕಾಶ ಕೊಟ್ಟಿದೆ. ಸಂವಿಧಾನದ ಅಧಿಕಾರ ಕಿತ್ತಿರುವುದು ಕಾಂಗ್ರೆಸ್ಸೆ ಹೊರತು ಬಿಜೆಪಿಯಲ್ಲ ಎಂದರು.

ಮಾಜಿ ಶಾಸಕ ಅಶೋಕ್‌ನಾಯ್ಕ ಮಾತನಾಡಿ, ಅತ್ಯಂತ ಸ್ವಾಭಿಮಾನಿ, ಶ್ರಮಜೀವಿ ಸಮಾಜ ಬಂಜಾರರರದು. ಪ್ರಾಮಾಣಿಕ, ನಿಸ್ವಾರ್ಥ ಸೇವಾ ಗುಣ ಹೊಂದಿರುವ ಲಂಬಾಣಿ ಸಮಾಜ ಸಂವಿಧಾನದಡಿ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳಿಗಾಗಿ ಸಂಘಟಿತರಾಗಿ ಹೋರಾಡಬೇಕಿದೆ ಎಂದರು.

ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿದರು. ಮಾಜಿ ಸಂಸದ ಡಾ.ಉಮೇಶ್ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯೆ ಅನುಸೂಯ ಜಾಧವ್ ವೇದಿಕೆಯಲ್ಲಿದ್ದರು.

ತಾ.ಪಂ ಮಾಜಿ ಸದಸ್ಯ ಸುರೇಶ್‌ನಾಯ್ಕ ಸೇರಿದಂತೆ ಲಂಬಾಣಿ ಸಮಾಜದ ಅನೇಕರು ವಿಚಾರಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

-------------------

ಪೋಟೋ ಕ್ಯಾಪ್ಸನ್

ಚಿತ್ರದುರ್ಗದ ಉಮಾಪತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಂವಿಧಾನೇರೋ ಮಾನ್‌ಪಾನ್ ಅಭಿಯಾನದ ರಾಜ್ಯ ಮಟ್ಟದ ವಿಚಾರಗೋಷ್ಠಿಯನ್ನು ಶಾಸಕ ಕೃಷ್ಣನಾಯ್ಕ ಉದ್ಘಾಟಿಸಿದರು.

------------

ಫೋಟೋ ಫೈಲ್ ನೇಮ್- 18 ಸಿಟಿಡಿ2