ವಿಶ್ವಗುರು ಬಸವಣ್ಣನವರ ವಚನಗಳ ಪಾಲನೆ ಅಗತ್ಯ

| Published : Feb 12 2025, 12:32 AM IST

ಸಾರಾಂಶ

ಜಗಜ್ಯೋತಿ ಬಸವಣ್ಣನವರ ತತ್ವ, ವಚನಗಳು ದೇಶದ ಸಂವಿಧಾನ ರಚಿಸುವಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸ್ಪೂರ್ತಿದಾಯಕವಾದವು

ಗದಗ: ವಿಶ್ವಗುರು ಬಸವಣ್ಣನವರ ಐಕ್ಯ ಕಾಯಕ ಶರಣರಾದ ಶರಣ ಮಾದಾರ ಚೆನ್ನಯ್ಯ, ಶರಣ ಸಮಗಾರ ಹರಳಯ್ಯ ಹಾಗೂ ಶರಣ ಡೋಹರ ಕಕ್ಕಯ್ಯನವರು ಬಸವಣ್ಣನವರೊಂದಿಗೆ ಸಮ ಸಮಾಜ ನಿರ್ಮಾಣಕ್ಕಾಗಿ ಕಾಯಕ ನಿಷ್ಠರಾಗಿ ಶ್ರಮಿಸಿದ ಮಹನೀಯರು ಎಂದು ವಿಪ ಶಾಸಕ ಎಸ್.ವಿ. ಸಂಕನೂರ ಹೇಳಿದರು.

ಅವರು ಸೋಮವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಗಜ್ಯೋತಿ ಬಸವಣ್ಣನವರ ತತ್ವ, ವಚನಗಳು ದೇಶದ ಸಂವಿಧಾನ ರಚಿಸುವಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸ್ಪೂರ್ತಿದಾಯಕವಾದವು. ಸಂವಿಧಾನ ರಚನೆಯಾಗಿ 75ವರ್ಷಗಳು ಸಂದಿದ್ದು, ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ತತ್ವ ಪಾಲನೆ ಅಗತ್ಯವಿದೆ ಎಂದರು.

ನಿವೃತ್ತ ಉಪನ್ಯಾಸಕ ಪ್ರೊ.ಸತೀಶ ಪಾಸಿ ಕಾಯಕ ಶರಣರ ಕುರಿತು ಉಪನ್ಯಾಸ ನೀಡಿ 12 ನೆಯ ಶತಮಾನದ ಶರಣರಲ್ಲಿ ಮಾದಾರ ಚೆನ್ನಯ್ಯ ಬಹು ಮುಖ್ಯವಾದ ವ್ಯಕ್ತಿ. ಸತ್ಯಶುದ್ಧ ಕಾಯಕಕ್ಕೆ ಹೆಸರಾದವರು. ತಮಿಳುನಾಡಿನ ಚೋಳರಾಜನ ಅರಮನೆಯ ಲಾಯಕ್ಕೆ ಹುಲ್ಲು ತರುವ ಕೆಲಸ ಮಾಡಿದರು. ಅನಂತರ ಅವರು ಬಸವಾದಿ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತರಾಗಿ ಕಲ್ಯಾಣಕ್ಕೆ ಬಂದರು ಎಂದರು.

ನಿವೃತ್ತ ಪ್ರಾಚಾರ್ಯ ಎನ್.ಎಂ. ಪವಾಡಿಗೌಡರ ಕಾಯಕ ಶರಣರ ಕುರಿತು ಉಪನ್ಯಾಸ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಾಬರ್ಜಿ, ಎಸ್.ಎನ್. ಬಳ್ಳಾರಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಪಂ ಸಿಇಓ ಭರತ್ ಎಸ್, ಡಿವೈಎಸ್ಪಿ ಇನಾಮ್ದಾರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ರವಿ ಗುಂಜಿಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಸೇರಿದಂತೆ ಹಲವರು ಹಾಜರಿದ್ದರು.

ವಚನ ಗಾಯನ ಮೃತ್ಯುಂಜಯ ಹಿರೇಮಠ ಹಾಗೂ ಸಂಗಡಿಗರು ಹಾಡಿದರು. ಉಪನ್ಯಾಸಕ ಆರ್.ಬಿ. ಚಿನಿವಾಲರ ನಿರೂಪಿಸಿದರು.