ಅಂಗವಿಕಲರಿಗೆ ಆತ್ಮಸ್ಥೈರ್ಯ ತುಂಬುವುದು ಅಗತ್ಯ: ಜಿಲ್ಲಾಧಿಕಾರಿ ಡಾ.ಕುಮಾರ

| Published : Feb 23 2025, 12:32 AM IST

ಅಂಗವಿಕಲರಿಗೆ ಆತ್ಮಸ್ಥೈರ್ಯ ತುಂಬುವುದು ಅಗತ್ಯ: ಜಿಲ್ಲಾಧಿಕಾರಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗವಿಕಲರು ಸ್ವಾವಲಂಬಿಗಳಾಗಿ ಬದುಕಲು ಈ ರೀತಿಯ ಕಾರ್ಯಕ್ರಮಗಳು ನಡೆಸುವುದು ಅಗತ್ಯ. ಸುಮಾರು ೧೪ ಕಂಪನಿಗಳು ಅಂಗವಿಕಲರಿಗೆ ಮೀಸಲಿರುವ ಉದ್ಯೋಗಗಳನ್ನು ವಿದ್ಯಾರ್ಹತೆಗೆ ಅನುಗುಣವಾಗಿ ನೀಡುತ್ತಿದ್ದಾರೆ. ಈಗಾಗಲೇ ೩೦೦ಕ್ಕೂ ಹೆಚ್ಚು ಜನ ನೋಂದಣಿಯಾಗಿದ್ದಾರೆ. ಉದ್ಯೋಗ ಮೇಳದ ಸದುಪಯೋಗವನ್ನು ಎಲ್ಲಾ ಅಂಗವಿಕಲರು ಪಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜವಾಬ್ದಾರಿಯುತ ಪ್ರಜೆಗಳಾದ ನಾವು ಅಂಗವಿಕಲರಿಗೆ ಕೇವಲ ಅನುಕಂಪ ತೋರಿಸದೆ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಗುರು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಂಗವಿಕಲರ ಕುಂದುಕೊರತೆಗಳ ಪರೀಶೀಲನಾ ಸಭೆ ಮತ್ತು ಅಂಗವಿಕಲರ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಂಗವಿಕಲರು ಸ್ವಾವಲಂಬಿಗಳಾಗಿ ಬದುಕಲು ಈ ರೀತಿಯ ಕಾರ್ಯಕ್ರಮಗಳು ನಡೆಸುವುದು ಅಗತ್ಯ. ಸುಮಾರು ೧೪ ಕಂಪನಿಗಳು ಅಂಗವಿಕಲರಿಗೆ ಮೀಸಲಿರುವ ಉದ್ಯೋಗಗಳನ್ನು ವಿದ್ಯಾರ್ಹತೆಗೆ ಅನುಗುಣವಾಗಿ ನೀಡುತ್ತಿದ್ದಾರೆ. ಈಗಾಗಲೇ ೩೦೦ಕ್ಕೂ ಹೆಚ್ಚು ಜನ ನೋಂದಣಿಯಾಗಿದ್ದಾರೆ. ಉದ್ಯೋಗ ಮೇಳದ ಸದುಪಯೋಗವನ್ನು ಎಲ್ಲಾ ಅಂಗವಿಕಲರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಅಂಗವಿಕಲರಿಗೆ ದೈಹಿಕವಾಗಿ ಅಂಗವೈಕಲ್ಯ ಇದ್ದರೂ ಸಹ ದೇವರು ಅವರಿಗೆ ವಿಶೇಷ ಚೈತನ್ಯ ನೀಡಿ ಕಳಿಸಿದ್ದಾನೆ, ಅವರ ಚೈತನ್ಯವನ್ನು ಗುರುತಿಸಿ ಚೈತನ್ಯಕೆ ಅನುಗುಣವಾಗಿ ಅವರಿಗೆ ಅವಕಾಶ ನೀಡುವುದು ಅತಿ ಮುಖ್ಯವಾಗಿದೆ. ಅಂಗವಿಕಲರ ಕುಂದುಕೊರತೆ ಆಲಿಸಲಾಗಿದೆ. ಅವರು ನೀಡಿರುವ ಅಹವಾಲುಗಳನ್ನು ಕಾನೂನಾತ್ಮಕವಾಗಲ್ಲದೆ ಮಾನವಿಯತೆ ದೃಷ್ಟಿಯಿಂದ ನೋಡಿ ಹಾಗೂ ಅವರ ಕುಂದುಕೊರತೆಗಳನ್ನು ಶೀಘ್ರವಾಗಿ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಮಾತನಾಡಿ, ಅಂಗವಿಕಲರಿಗೆ ಕರುಣೆ ತೊರುವುದನ್ನು ನಿಲ್ಲಿಸಿ ಅವರು ಸ್ವಾವಲಂಬಿಗಳಾಗಿ ಬದುಕು ಸಾಗಿಸಲು ಹೆಚ್ಚು ಅವಕಾಶ ನೀಡಬೇಕು. ಅಂಗವಿಕಲರು ರಾಜ್ಯ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಅಂತವರು ಪ್ರೇರಣೆಯಾಗಿ ತೆಗೆದುಕೊಂಡ ನೀವು ಬದುಕಿನಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಅಂಗವಿಕಲರಿಗೆ ಸಾಂಕೇತಿಕವಾಗಿ ಶ್ರವಣದೋಷ ಯಂತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ ಭಾಗವಹಿಸಿದ್ದರು.190 ವಿಕಲಚೇತನರಿಗೆ ಉದ್ಯೋಗ ನೀಡಲು ಕಂಪನಿ ಒಪ್ಪಿಗೆಮಂಡ್ಯ

ಜಿಲ್ಲಾಡಳಿತ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ವಾಭಿಮಾನಿ ಫೌಂಡೇಶನ್, ಆಕಾಶದೀಪ ಸಂಸ್ಥೆ, ಧೀನಬಂಧು ಸಂಸ್ಥೆ, ಟ್ರೈನ್ ಸಂಸ್ಥೆ ಆಶ್ರಯದಲ್ಲಿ ಫೆ.21 ರಂದು ನಗರದ ಗುರುಭವನದಲ್ಲಿ ನಡೆದ ವಿಕಲಚೇತನರ ಉದ್ಯೋಗಮೇಳದಲ್ಲಿ ಭಾಗವಹಿಸಿದ್ದ 14 ಕಂಪನಿಗಳಿಗೆ 398 ಮಂದಿ ವಿಕಲಚೇತನರು ನೊಂದಾಯಿಸಿಕೊಂಡಿದ್ದು, ಇವರಲ್ಲಿ 190 ವಿಕಲಚೇತನರಿಗೆ ಉದ್ಯೋಗ ನೀಡಲು ಕಂಪನಿಗಳು ಒಪ್ಪಿಗೆ ಪತ್ರ ನೀಡಿ ಬೆಂಗಳೂರಿಗೆ ಬರುವಂತೆ ತಿಳಿಸಿದ್ದಾರೆ ಎಂದು ಜಿಲ್ಲಾ ಅಂಗವಿಕಲರ, ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಹೇಳಿದ್ದಾರೆ.