ಸಾರಾಂಶ
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವ ಆಶಯ ಇಟ್ಟುಕೊಂಡು ಸಂವಿಧಾನ ರಚನೆ ಮಾಡಿದ್ದಾರೋ ಆ ಆಶಯಗಳನ್ನು ಅನುಷ್ಠಾನಗೊಳಿಸುವಲ್ಲಿ ನಾವು ವಿಫಲರಾಗಿದ್ದೇವೆ.
ಧಾರವಾಡ:
ಸಂವಿಧಾನದ ಆಶಯವನ್ನು ಜನರಿಗೆ ತಿಳಿಸುವ ಕೆಲಸ ಇಂದಿನ ಅಗತ್ಯವಾಗಿದೆ ಎಂದು ಸ್ವರ್ಣಾ ಗ್ರೂಪ್ ಆಫ್ ಕಂಪನಿ ಚೇರಮನ್ ಡಾ. ಸಿಎಚ್ ವಿಎಸ್‌ವಿ ಪ್ರಸಾದ ಅಭಿಪ್ರಾಯಪಟ್ಟರು.ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಪ್ರಬುದ್ಧ ಭಾರತ ಫೌಂಡೇಶನ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಭಿವೃದ್ಧಿ ಅಕಾಡೆಮಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಾಂಸ್ಕೃತಿಕ ಅಭಿವೃದ್ಧಿ ವೇದಿಕೆ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವ ಆಶಯ ಇಟ್ಟುಕೊಂಡು ಸಂವಿಧಾನ ರಚನೆ ಮಾಡಿದ್ದಾರೋ ಆ ಆಶಯಗಳನ್ನು ಅನುಷ್ಠಾನಗೊಳಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದ ಅವರು, ದೇಶ ಸಂವಿಧಾನ ಅಂಗೀಕರಿಸಿ 75 ವರ್ಷ ಗತಿಸಿದೆ. ದೇಶದ ನೆಲ, ಜನ, ಭಾಷೆ, ಆಚಾರ, ವಿಚಾರ, ಲಿಂಗತ್ವ ಎಲ್ಲವನ್ನು ಒಳನ್ನೊಳಗೊಂಡಿರುವ ಪ್ರಪಂಚದಲ್ಲೇ ಶ್ರೇಷ್ಠತೆ ಹೊಂದಿರುವ ಸಂವಿಧಾನವನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ. ಆದರೆ, ಇಂತಹ ಸಂವಿಧಾನದ ಬಗ್ಗೆ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಇಲ್ಲದಾಗಿದೆ ಎಂದರು.ಅಂಬೇಡ್ಕರ್ ಅವರು ಮಹಿಳೆಯರಿಗೆ ವಿಶೇಷ ಸ್ಥಾನವನ್ನು ಸಂವಿಧಾನದಲ್ಲಿ ನೀಡಿದ್ದಾರೆ. ಆ ಸಮುದಾಯಕ್ಕೂ ಸಂವಿಧಾನದ ಬಗ್ಗೆ ಹೆಚ್ಚಿನ ಜ್ಞಾನ ನೀಡುವಲ್ಲಿ ಎಡವಿದ್ದೇವೆ. ದೇಶದಲ್ಲಿ ಸಂವಿಧಾನದ ಬಗ್ಗೆ ಶೇ. 35ರಷ್ಟು ಜನರಿಗೆ ಮಾತ್ರ ಅರಿವಿದೆ, ಉಳಿದವರಿಗೆ ಅದರ ಬಗ್ಗೆ ಜಾಗೃತಿ ಇಲ್ಲದಾಗಿದೆ. ಇದೆಲ್ಲವನ್ನು ಗಮನಿಸಿದಾಗ ಸಂವಿಧಾನವನ್ನು ಪರಿಪೂರ್ಣವಾಗಿ ಆಚರಣೆಗೆ ತರುವಲ್ಲಿ ಹಾಗೂ ತಿಳಿದುಕೊಳ್ಳುವಲ್ಲಿ ನಾವು ಸಂಪೂರ್ಣ ವಿಫಲರಾಗಿದ್ದೇವೆ ಎಂಬ ಭಾವನೆ ಕಾಡುತ್ತಿದೆ ಎಂದು ಹೇಳಿದರು.ರಾಜಕಾರಣಿಗಳೇ ತಮಗೆ ಅನುಕೂಲಕ್ಕೆ ತಕ್ಕಂತೆ ಸಂವಿಧಾನ ಬದಲಿಸುವ ಮೂಲಕ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದು ದೇಶದ ದುರಂತ. ಸಂವಿಧಾನದ ಆಶಯವನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪ್ರಜ್ಞಾವಂತರು ಮಾಡಬೇಕಿದೆ ಎಂದರು.
ಇದೇ ವೇಳೆ ವಿಎಸ್‌ವಿ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಡಾ. ಬಿ.ಕೆ.ಎಸ್. ವರ್ಧನ್ ಸೇರಿದಂತೆ ಅನೇಕರು ಸಮಾರಂಭದಲ್ಲಿ ಭಾಗವಹಿಸಿದ್ದರು.