ಸಾರಾಂಶ
- ಬೀರೂರು ಶೈಕ್ಷಣಿಕ ವಲಯದ ಪ್ರೌಢ ಶಾಲಾ ವಿಜ್ಞಾನ ವಿಚಾರ ಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆಕನ್ನಡಪ್ರಭ ವಾರ್ತೆ,ಬೀರೂರು
ದೇಶದ ಅಭಿವೃದ್ಧಿ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಮಾತ್ರ ಸಾಧ್ಯ ಹಾಗಾಗಿ ಪ್ರೌಢಶಾಲಾ ಹಂತದಲ್ಲಿ ವೈಜ್ಞಾನಿಕ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚೋಪ್ದಾರ್ ತಿಳಿಸಿದರು.ಪಟ್ಟಣದ ಶ್ರೀ ಅಕ್ಕಮಹಾದೇವಿ ಪ್ರೌಢ ಶಾಲೆಯಲ್ಲಿ ಬೀರೂರು ಶೈಕ್ಷಣಿಕ ವಲಯದ ಪ್ರೌಢ ಶಾಲಾ ವಿಜ್ಞಾನ ವಿಚಾರ ಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಪರಿಕಲ್ಪನೆಗಳು ಮೊಳಕೆ ಒಡೆದು ಅವರು ಮುಂದಿನ ದಿನಗಳಲ್ಲಿ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ತಾಂತ್ರಿಕ ಕೌಶಲ್ಯ ರೂಪಿಸಲು ಸಹಾಯಕವಾಗುತ್ತದೆ. ವಿದ್ಯಾರ್ಥಿಗಳು ಈ ಅವಕಾಶ ಬಳಸಿಕೊಂಡು ತಮ್ಮಲ್ಲಿನ ವೈಜ್ಞಾನಿಕ ಕೌಶಲ್ಯ ಬೆಳೆಸಿಕೊಳ್ಳಲು ಶಿಕ್ಷಕರ ಮಾರ್ಗದರ್ಶನ ಪಡೆದು ಬೆಳೆಯಬೇಕೆಂದು ಸಲಹೆ ನೀಡಿದರು. ನಮ್ಮ ದೇಶ ಆರ್ಥಿಕ ಪ್ರಗತಿ ಸಾಧಿಸಲು ಸಹಾಯವಾಗುತ್ತದೆ. ದೇಶದ ಪ್ರಜೆಗಳ ಜೀವನ ಮಟ್ಟ ಸುಧಾರಣೆ ಆಗುತ್ತದೆ ಎಂದರು.ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಶೇಖರಪ್ಪ ಮಾತನಾಡಿ, ಆಡುತ್ತ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಆ ನಿಟ್ಟಿನಲ್ಲಿ ಪಠ್ಯಪುಸ್ತಕದಲ್ಲಿರುವ ವಿಜ್ಞಾನ ಪ್ರಯೋಗ ಮತ್ತು ಚಟುವಟಿಕೆ ಅರ್ಥೈಸಿಕೊಂಡರೆ ವಿಜ್ಞಾನದ ಪರಿಕಲ್ಪನೆ ಸುಲಭವಾಗಿ ಅರ್ಥವಾಗುತ್ತದೆ. ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಜ್ಞಾನ ಪಡೆಯಲು ಸಹಾಯವಾಗುತ್ತದೆ. ಇದಕ್ಕೆ ಪೂರಕವಾದ ವಿಜ್ಞಾನ ವಿಚಾರಗೋಷ್ಠಿ ವಿಷಯಗಳು ಹಾಗೂ ನಾಟಕಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಗತ್ಯ ಎಂದರು. ಡಯಟ್ ನ ಉಪನ್ಯಾಸಕ ಶಿವಕುಮಾರ್ ಮಾತನಾಡಿ ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳ ಸಂಶೋಧನಾ ಭಾವನೆಗಳನ್ನು ಉದ್ದೀಪನಗೊಳಿಸಲು ಹಾಗೂ ಶಿಕ್ಷಕರ ಜ್ಞಾನಾರ್ಜನೆಗೆ ಸಹಾಯವಾಗಿದೆ ಎಂದರು. ವಿಜ್ಞಾನ ಕೇಂದ್ರದ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡುತ್ತಾ ವಿಜ್ಞಾನ ವಿಚಾರಗೋಷ್ಠಿಗಳು ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಸವಾಲು ಒಡ್ದುವ ಜೊತೆಗೆ ಭಾಷಾ ಸಾಮರ್ಥ್ಯ ಹಾಗೂ ಜ್ಞಾನ ಹುಡುಕುವ, ವಿದ್ಯಾರ್ಥಿಗಳಲ್ಲಿ ದೇಶಕ್ಕಾಗಿ ಏನಾದರು ಸಾಧಿಸಬೇಕೆಂಬ ಭಾವನೆ ಮೂಡುತ್ತದೆ. ದೇಶ ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಗಳು ಹಾಗೂ ಸಾಧಿಸಬೇಕಾದ ವೈಜ್ಞಾನಿಕ ಕೌಶಲ್ಯ ಅರಿಯಲು ಸಹಾಯಕ ಎಂದರು. ವಿಜ್ಞಾನ ಸಂಘದ ಕಾರ್ಯದರ್ಶಿ ಮಂಜುಳಾ ಅವರು ಬೋಧನೆ ಕಲಿಕಾ ಪ್ರಕ್ರಿಯೆ ಜೊತೆಗೆ ಇಂತಹ ಗೋಷ್ಠಿಗಳು ಮತ್ತು ನಾಟಕ ಸ್ಪರ್ಧೆಗಳು ಮನೋ ಸ್ಥೈರ್ಯ ಹೆಚ್ಚಿಸುತ್ತದೆ ಇದಕ್ಕೆ ಕಾರಣರಾದ ವಿಜ್ಞಾನ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು . ಅಕ್ಕಮಹಾದೇವಿ ಶಾಲೆಯ ಶಿಕ್ಷಕ ಲಕ್ಷ್ಮಣ ರೆಡ್ಡಿ ಅಧ್ಯಕ್ಷತೆ ವಹಿಸಿ ಶುಭಕೋರಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ಮೂರ್ತಿ, ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಪದಾಧಿಕಾರಿ ಚಂದ್ರಶೇಖರ್ ನಾಯಕ್, ರಘು, ಅನಂತೇಶ್ ಕೆ.ಎಂ. ಉಪಸ್ಥಿತರಿದ್ದರು.
ವಿಜ್ಞಾನ ವಿಚಾರಗೋಷ್ಠಿಯಲ್ಲಿ ಹರ್ಷಿತಾ ಪಿ ಎಂ ಸರ್ಕಾರಿ ಪ್ರೌಢಶಾಲೆ ಸಖರಾಯಪಟ್ಟಣ ಪ್ರಥಮ ಸ್ಥಾನ, ಸುಬ್ರಮಣ್ಯ ಕ್ರಮುಖ ಪ್ರೌಢಶಾಲೆ ಬೀರೂರು ದ್ವಿತೀಯ, ಚೇತನ್ ಸರ್ಕಾರಿ ಪ್ರೌಢಶಾಲೆ ಜೋಡಿಸಿಮ್ಮಾಪುರ ತೃತೀಯ ಸ್ಥಾನ ಪಡೆದರು. ನಾಟಕ ವಿಭಾಗದಲ್ಲಿ ಕ್ರಮುಖ ಪ್ರೌಢಶಾಲೆ ಬೀರೂರು ವಿದ್ಯಾರ್ಥಿಗಳು ಪ್ರಥಮ, ಮಾರ್ಗದ ಮಹದೇವಪ್ಪ ಪ್ರೌಢಶಾಲೆ ಎಂ ಕ್ಯಾಂಪ್ ಬೀರೂರು ವಿದ್ಯಾರ್ಥಿಗಳು ದ್ವಿತೀಯ, ಮೊರಾರ್ಜಿ ವಸತಿ ಶಾಲೆ ನಂದಿ ಬಟ್ಟಲು ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು.4 ಬೀರೂರು 1ಶ್ರೀ ಅಕ್ಕಮಹಾದೇವಿ ಪ್ರೌಢ ಶಾಲೆಯಲ್ಲಿ ಬೀರೂರು ಶೈಕ್ಷಣಿಕ ವಲಯದ ಪ್ರೌಢ ಶಾಲಾ ವಿಜ್ಞಾನ ವಿಚಾರ ಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಚೋಪ್ದಾರ್ ಉದ್ಘಾಟಿಸಿದರು.