ಸಾರಾಂಶ
ಹಾನಗಲ್ಲ: ಸಂಸ್ಕಾರವಂತ ಕುಟುಂಬದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಅಗತ್ಯ ಇಂದಿನದಾಗಿದ್ದು, ಭಾರತೀಯ ಸಂಸ್ಕೃತಿಯನ್ನು ಪರದೇಶದವರೂ ಒಪ್ಪಿ ಪಾಲಿಸುವಷ್ಟು ಶಕ್ತಿಯುತವಾಗಿದೆ ಎಂದು ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯರು ತಿಳಿಸಿದರು.ಹಾನಗಲ್ಲ ತಾಲೂಕಿನ ಮಾಸನಕಟ್ಟಿಯಲ್ಲಿ ಮಂತ್ರವಾಡಿ ಶಾಖಾಮಠದ ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಧರ್ಮಸಭೆಯ ಸಾನಿಧ್ಯವಹಿಸಿ ಮಾತನಾಡಿದ ಅವರು, ತಾಯಿ ತಂದೆಯೇ ಮೊದಲ ಸಂಸ್ಕಾರದ ಗುರುಗಳು. ಭಾರತ ಇಡೀ ಜಗತ್ತಿಗೆ ಉತ್ತಮ ಸಂಸ್ಕಾರ ಸೇರಿದಂತೆ ಆಧ್ಯಾತ್ಮಿಕ ಕೊಡುಗೆಗಳನ್ನು ನೀಡಿದೆ. ಯೋಗವನ್ನು ಇಡೀ ಜಗತ್ತು ಸ್ವೀಕರಿಸಿ ಅನುಸರಿಸುತ್ತಿದೆ. ಇಡೀ ಜಗತ್ತಿಗೆ ಜಗದ್ಗುರು ಸ್ಥಾನದಲ್ಲಿರುವ ಭಾರತೀಯರು ಸಂಸ್ಕೃತಿ ವಿಹೀನರಾಗುವುದು ಖೇದದ ಸಂಗತಿ. ಹರಕು ಬಟ್ಟೆ ಹಾಕುವುದು ಫ್ಯಾಶನ್ ಆದರೆ, ನಮ್ಮ ಅಂಗ ವಿಕಾರಕ್ಕೆ ಮನಸೋತರೆ ಮನಸ್ಸೂ ಹರುಕು ಮುರುಕಾಗಿ ಬದುಕು ಹರುಕು ಮುರುಕಾಗುತ್ತದೆ ಎಂದು ಎಚ್ಚರಿಸಿದರು.ಶಿಗ್ಗಾವಿಯ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ನಾಗರಾಜ ದ್ಯಾಮನಕೊಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿ, ಮಾನವ ಜನ್ಮ ಸಾರ್ಥಕತೆ ಮೂಲಕ ಸಮರ್ಪಣಾ ಶಕ್ತಿ ಹೊಂದಬೇಕು. ಧರ್ಮ ಪ್ರಚಾರದ ಸ್ಥಾನದಲ್ಲಿದ್ದವರಿಗೆ ಸಮಾಜಮುಖಿಯಾದ ದೂರದೃಷ್ಟಿ ಬೇಕು. ಬದುಕಿನ ತತ್ವಗಳು ನಮ್ಮ ಯಶಸ್ವಿ ಜೀವನದ ಮಾರ್ಗದರ್ಶಿ ಸೂತ್ರಗಳು. ಆದರೆ ಈಗ ಗುರು ಶಿಷ್ಯರ ಸಂಬಂಧಗಳು ಹಳಸಿ, ಸಮಾಜದ ಜಡತ್ವ ಬಿಡಿಸಿ ಚಲನ ಶೀಲತೆ ತರುವ ಸಂದರ್ಭಗಳಿಗೆ ಹಿನ್ನಡೆಯಾಗುತ್ತಿದೆ. ಕಾಯಕ ಧರ್ಮ ಪಾಲಿಸೋಣ ಎಂದರು.ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮ ಮನಸ್ಸು ಬುದ್ಧಿ ವಿವೇಕಗಳಿಗೆ ಶಕ್ತಿಯುತವಾದ ಮಾರ್ಗದರ್ಶನ ಮಾಡುವ ಜನಪದ ಹಾಗೂ ವಚನ ಸಾಹಿತ್ಯ ಮನೆ ಮನಸ್ಸುಗಳಿಗೆ ತಲುಪಿ, ಅದರ ತತ್ವಗಳು ಜೀವನದ ಆದರ್ಶಗಳಾಬೇಕಾಗಿದೆ. ಚಿತ್ತ ಶುದ್ಧಿ ಇಲ್ಲದ, ವಿಕಾರ ಮನೋಸ್ಥಿತಿಯಿಂದಾಗಿ ಸಾಮಾಜಿಕ ಮೌಲ್ಯಗಳು ಗಾಳಿಗೆ ತೂರಿ ಹೋಗುತ್ತಿವೆ. ಸತ್ಸಂಗದ ಸಹಯೋಗದೊಂದಿಗೆ ಸಾಮಾಜಿಕ ಹಾಗೂ ವೈಯಕ್ತಿಕ ಉನ್ನತಿ ಸಾಧ್ಯ. ಇದು ಪ್ರಗತಿ ಹಾಗೂ ಪಾವಿತ್ರ್ಯದ ಆಧಾರ ಎಂದರು.
ಹೀರೂರಿನ ಗುಬ್ಬಿ ನಂಜುಂಡೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ವೇದಮೂರ್ತಿ ಕರಬಸಯ್ಯ ಹಿರೇಮಠ, ವೇದಮೂರ್ತಿ ಚನ್ನವೀರಸ್ವಾಮಿ ಹಿರೇಮಠ ವೇದಿಕೆಯಲ್ಲಿದ್ದರು. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಶಿರಬೂರಿನ ವೇದಮೂರ್ತಿ ಬಸಯ್ಯಶಾಸ್ತ್ರಿಗಳು ಹಿರೇಮಠ ಅಷ್ಟಾವರಣ ಕುರಿತು ಪ್ರವಚನ ನೀಡಿದರು. ಮಾಲತೇಶ ಕಲಬುರ್ಗಿ ಸಂಗೀತ ಸೇವೆ ನೀಡಿದರು. ಅಣ್ಣಪ್ಪ ಕುಡುತಿನ ತಬಲಾ ಸಾಥ ನೀಡಿದರು.