ವರಿಷ್ಠರ ಅಣತಿಯಂತೆ ಮೈತ್ರಿ ಧರ್ಮ ಪಾಲನೆ ಅಗತ್ಯ

| Published : Apr 03 2024, 01:35 AM IST

ಸಾರಾಂಶ

ಜೆಡಿಎಸ್ ವರಿಷ್ಠರ ಅಣತಿಯಂತೆ ಮೈತ್ರಿ ಧರ್ಮ ಪಾಲನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು

ಜೆಡಿಎಸ್ ವರಿಷ್ಠರ ಅಣತಿಯಂತೆ ಮೈತ್ರಿ ಧರ್ಮ ಪಾಲನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಕರೆ ನೀಡಿದರು.

ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮುಂಬರುವ ಸ್ಥಳೀಯ ಚುನಾವಣೆಗಳ ಹಿತದೃಷ್ಟಿಯಿಂದ ಮೈತ್ರಿ ಪಾಲನೆ ಅಗತ್ಯ. ಹೀಗಾಗಲೇ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರು ಹಾಗೂ ಎಚ್. ಡಿ.ಕುಮಾರಸ್ವಾಮಿ ಅವರು ನಾಳೆ ನಡೆಯಲಿರುವ ಬಿಜೆಪಿ ಅಭ್ಯರ್ಥಿ ಬಾಲರಾಜು ಉಮೇದುದಾರಿಕೆಗೆ ಭಾಗಿಯಾಗಲು ಸೂಚಿಸಿದ್ದಾರೆ. ಹಾಗಾಗಿ ಹೆಚ್ಚಿನ ಕಾರ್ಯಕರ್ತರು ಭಾಗಿಯಾಗಿ ಎಂದರು.

ಸಭೆಯ ಪ್ರಾರಂಭದಲ್ಲಿ ಭುಗಿಲೆದ್ದ ಅಸಮಧಾನ:

ಸಭೆಯಲ್ಲಿ ಮುಖಂಡರು ಕಾರ್ಯಕರ್ತರು ಅಭಿಪ್ರಾಯ ಮಾಡಲು ಮುಂದಾದ ವೇಳೆ ಕ್ಷೇತ್ರ ವ್ಯಾಪ್ತಿಯ ದಲಿತ ಬಲಗೈ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ ಶಾಸಕರಾದ ಬಳಿಕ ನೀವು ನಮ್ಮ ದಲಿತ ಸಮುದಾಯದ ಮುಖಂಡರು ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದೀರಿ, ಗ್ರಾಮದಲ್ಲಿ ಪ್ರತಿನಿಧಿಸುವ ನಮ್ಮ ಫೋನ್ ಕರೆಗೆ ಕ್ಯಾರೆ ಅನ್ನಲ್ಲ, ಏಕ ವಚನದಲ್ಲಿ ಸಂಭೋಧಿಸುತ್ತಿರಿ ಎಂದು ಚಿಕ್ಕ ಮಾಲಾಪುರ ಶ್ರೀನಿವಾಸ ಕಿಡಿಕಾರಿದರು.

ದೊಡ್ಡಿಂದುವಾಡಿ ಕೆಂಪಣ್ಣ ನಮ್ಮ ದಲಿತ ಮುಖಂಡರನ್ನು ಕರೆದು ಪ್ರತ್ಯೇಕ ಸಭೆ ನಡೆಸಿ ನಮ್ಮ ಸಮಸ್ಯೆ ಆಲಿಸಬೇಕು ಎಂದರು. ಕಾಮಗೆರೆ ಸುರೇಶ್ ಮಾತನಾಡಿ, ನಾವು ಗ್ರಾಮಗಳಲ್ಲಿ ಇನ್ನೂರು ಮುನ್ನೂರು ಮತಗಳನ್ನು ನೀಡಿಸುವ ಶಕ್ತಿ ಇದೇ. ನಮ್ಮ ಬಗ್ಗೆ ನೀವು ತಾತ್ಸಾರ ಹೊಂದಿದ್ದಿರಿ. ನಾವು ಎಚ್.ನಾಗಪ್ಪ, ಪರಿಮಳ ನಾಗಪ್ಪ, ಜಿ.ರಾಜುಗೌಡ, ನರೇಂದ್ರ ಅಂತಹವರ ಜೊತೆ ಗುರುತಿಸಿಕೊಂಡು ನಿಮ್ಮ ನಂಬಿ ಬಂದವರು. ಆದರೆ ನೀವು ನಮ್ಮನ್ನು ಸೇರಿದಂತೆ ಕಾರ್ಯಕರ್ತರನ್ನು ಕಡೆಗಣಿಸಿದ್ದೀರಿ, ನಿಮ್ಮ ವರ್ತನೆಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಖಾರವಾಗಿ ಕುಟುಕಿದರು.

ಶಾಸಕರಿಂದ ಅಭಿವೃದ್ಧಿಯ ಪ್ರತ್ಯುತ್ತರ:

ಸಭೆಯಲ್ಲಿ ಅಸಮಾಧಾನಗೊಂಡ ಮುಖಂಡರಿಗೆ ಶಾಸಕ ಮಂಜುನಾಥ್ ಸಾವಾಧಾನದಿಂದಲೇ ಉತ್ತರಿಸಿ ಕಳೆದ 9 ತಿಂಗಳ ಅವಧಿಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಶಿಕ್ಷಣ, ಉದ್ಯೋಗಕ್ಕೆ ಒತ್ತನ್ನು ನೀಡಿದ್ದೇನೆ. ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಲು ಮುಖ್ಯಮಂತ್ರಿ, ಸಚಿವರು, ಮುಖ್ಯ ಕಾರ್ಯದರ್ಶಿ ಹಿರಿಯ ಅಧಿಕಾರಿಗಳ ಸಂಪರ್ಕದಲ್ಲಿದ್ದೇನೆ. ಈಗಾಗಲೇ 25 ಕೋಟಿ ರು.ಗಳ ವೆಚ್ಚದಲ್ಲಿ ರಾಮಾಪುರ ನಾಲ್ ರೋಡ್ ರಸ್ತೆಯನ್ನು ದುರಸ್ತಿಗೊಳಿಸಲು ಭೂಮಿ ಪೂಜೆ ನೆರವೇರಿಸಿದ್ದೇನೆ. ಹನೂರು ಬಂಡಳ್ಳಿ ರಸ್ತೆ ನಿರ್ಮಾಣಕ್ಕೆ ಒತ್ತು, ತಾಲೂಕಿನ ಗಡಿಯಂಚಿನಲ್ಲಿ ಹರಿದು ಹೋಗುತ್ತಿರುವ ಕಾವೇರಿ ನದಿಯ ನೀರನ್ನು ಬಳಕೆ ಮಾಡಿಕೊಳ್ಳುವುದು, ಶಾಶ್ವತ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸುವುದು ಸೇರಿದಂತೆ ಅನೇಕ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ನನಗೆ ಸಮಯದ ಅವಕಾಶವಿದೆ. ಲೋಕಸಭೆ ಚುನಾವಣೆ ಬಳಿಕ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಪ್ರತಿ ಮನೆಮನೆಗು ತಿರುಗಿ ಜನತೆಯ ಕಷ್ಟವನ್ನು ಅರಿಯುತ್ತೇನೆ. ನಿಮ್ಮ ಋಣ ನನ್ನ ಮೇಲಿದೆ. ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವುದೇ ನನ್ನ ಗುರಿ ಉದ್ದೇಶವಾಗಿದೆ ಅದನ್ನು ಮಾಡೇ ತೀರುತ್ತೇನೆ ಅಲ್ಲಿಯವರೆಗೆ ನನಗೆ ಕಾಲಾವಕಾಶ ನೀಡಿ ಎಂದು ಪ್ರತ್ಯುತ್ತರಿಸಿದರು. ಸಭೆಯಲ್ಲಿ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.