ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿಯನ್ನು ತಾಲೂಕಿನ ಬಸವ ಸಂಘಟನೆಗಳೆಲ್ಲ ಒಂದಾಗಿ ಆಚರಣೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಅವರು ಕೊಳ್ಳೇಗಾಲದಲ್ಲಿ ಬಸವಪರ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಅದ್ಧೂರಿ ಬಸವ ಜಯಂತಿ

ಸಮಾರಂಭದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಎಲ್ಲರೂ ಒಗ್ಗೂಡಿ ಬಸವಣ್ಣನ ಜಯಂತಿ ಆಚರಣೆ ಜೊತೆ ಜೊತೆಗೆ ಬಸವೇಶ್ವರರ ಆದರ್ಶಗಳನ್ನು ಆಚರಣೆಗೆ ತರುವಲ್ಲಿ ಕಾರ್ಯಪ್ರವೃತ್ತರಾಗೇಬೇಕು, ಹಾಗಾದಾಗ ಮಾತ್ರ ಬಸವ ಜಯಂತಿ ಕಾರ್ಯಕ್ರಮಕ್ಕೆ ನೈಜ ಅರ್ಥ ಬರಲಿದೆ ಎಂದರು.

ಹಿಂದೆ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಬಸವ ಜಯಂತಿ ಆಚರಿಸಿ ಬಸವಣ್ಣನವರನ್ನು ಸ್ಮರಿಸುವ ಕೆಲಸ


ಆಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಮೂಲೆಗಳಲ್ಲೂ ಬಸವಣ್ಣನನ್ನು ಸ್ಮರಿಸುವ ಕೆಲಸ ಆಗುತ್ತಿದೆ.

ಎಲ್ಲೆಡೆ ಗೌರವ- ಮನ್ನಣೆಗಳು ಬಸವಣ್ಣನಿಗೆ ದೊರಕುತ್ತಿರುವುದು ಹೆಮ್ಮೆಯ ಸಂಗತಿ. ಅಮೆರಿಕಾದಂತಹ ದೇಶದಲ್ಲಿ

ಬಸವ ಜಯಂತಿಯ ದಿನವನ್ನು ಬಸವ ದಿನ ಎಂದು ಘೋಷಣೆ ಮಾಡಲು ಮುಂದಾಗಿರುವುದು ಸಹ ಸಂತಸದ ವಿಚಾರ. ನ್ಯೂಜಿಲ್ಯಾಂಡ್, ಯುರೋಪ್ ಸೇರಿ ವಿಶ್ವದ ಅನೇಕ ದೇಶಗಳು ಬಸವೇಶ್ವರರ ಜಯಂತಿ ಆಚರಿಸಿ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಸಂವಿಧಾನದ ಮೂಲಕ ಇಂದು ಬಸವಣ್ಣನವರ ಕನಸುಗಳು ನನಸಾಗುತ್ತಿವೆ. ಮನುಷ್ಯ ಕಾನೂನಿನ ಚೌಕಟ್ಟಿನ ಮೂಲಕ ತನ್ನ ಬದುಕನ್ನು ಸುಧಾರಿಸಿಕೊಳ್ಳುವುದಕ್ಕಿಂತ ಅಂತರಂಗದ ಸಾಕ್ಷಿ ಪ್ರಜ್ಞೆ ಮೂಲಕ ಸುಧಾರಣೆ ಮಾಡಿಕೊಳ್ಳಬೇಕಿದೆ. ಬಸವಣ್ಣನನ್ನು ಸ್ಮರಿಸುವ ಈ ಸುದಿನ ಅವರ ತತ್ವಾದರ್ಶಗಳನ್ನು ಕಿಂಚಿತ್ತಾದರೂ ಆಚರಣೆಗೆ ತರುವ ಸುದಿನವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಕೊಳ್ಳೇಗಾಲದ ಪ್ರಮುಖ ಮುಖ್ಯ ರಸ್ತೆಯೊಂದಕ್ಕೆ ಬಸವೇಶ್ವರರ ವೃತ್ತ ಎಂದು ಹೆಸರಿಡುವ ಕುರಿತು ಶಾಸಕ ಎ. ಆರ್. ಕೃಷ್ಣಮೂರ್ತಿಯವರು ಪ್ರಸ್ತಾಪಿಸಿ ಈ ಕುರಿತು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ, ಈ ಕಾರ್ಯ ಬೇಗ ಸಾಗಲಿ ಎಂದರು.

ಈ ವೇಳೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಳ್ಳೇಗಾಲ ಶಾಸಕ ಎ. ಆರ್. ಕೃಷ್ಣಮೂರ್ತಿ ಮಾತನಾಡಿ,

ಪಟ್ಟಣದ ಪ್ರಮುಖ ರಸ್ತೆಗೆ ಬಸವೇಶ್ವರರ ಹೆಸರಿಡಲು ಅಗತ್ಯ ಕ್ರಮಕೈಗೊಳ್ಳುವೆ, ಈ ನಿಟ್ಟಿನಲ್ಲಿ ನಗರಸಭೆ ಸಭಾ

ನಡಾವಳಿಗಳಲ್ಲಿ ಪಾಲ್ಗೊಂಡು ಕ್ರಮ ವಹಿಸುವೆ, ಬಸವೇಶ್ವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು ಎಲ್ಲರೂ ಬಸವೇಶ್ವರರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳೋಣ, ಶರಣರು ಹಾಕಿ ಕೊಟ್ಟ ಹಾದಿಯಲ್ಲಿ ಸಾಗೋಣ ಎಂದು ತಿಳಿಸಿದರು.

ಗಮನ ಸೆಳೆದ ಮೆರವಣಿಗೆ ಕೊಳ್ಳೇಗಾಲದ ಎಂ.ಜಿ.ಎಸ್. ವಿ. ಕಾಲೇಜಿನಿಂದ ಪ್ರಾರಂಭಗೊಂಡ ಬಸವೇಶ್ವರ ಭಾವಚಿತ್ರವಿದ್ದ ಮೆರವಣಿಗೆಯುದ್ದಕ್ಕೂ ಕಲಾತಂಡಗಳು ಸಾಥ್ ನೀಡಿದವು. ಗಾರುಡಿ ಗೊಂಬೆ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿ ಅನೇಕ ಕಲಾತಂಡಗಳ ಪ್ರದರ್ಶನ, ಯುವಕರ ಕುಣಿತದೊಂದಿಗೆ ಸಾಗಿ ಬಂದ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಸಾಲೂರು ಮಠಾಧ್ಯಕ್ಷ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹನೂರು ಶಾಸಕ ಎಂ. ಆರ್. ಮಂಜುನಾಥ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕಿ ಪರಿಮಳ ನಾಗಪ್ಪ, ಆರ್.ನರೇಂದ್ರ, ಎಸ್.ಬಾಲರಾಜು, ಹನೂರು ಬಿಜೆಪಿ ನಾಯಕ ನಿಶಾಂತ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಮಾನಸ ಸಂಸ್ಥೆಯ ಡಾ.ದತ್ತೇಶ್ ಕುಮಾರ್, ತಿಮ್ಮರಾಜಿಪುರ ಪುಟ್ಟಣ್ಣ, ಬಿಂಧು ಲೋಕೇಶ್, ಯುಪಿಎಸ್ ಮಹದೇವಸ್ವಾಮಿ, ಅಚ್ಗಾಳು ಮಹದೇವಸ್ವಾಮಿ, ರಾಜೇಶ್, ಕೆಂಪನಪಾಳ್ಯ ಮಹೇಶ್, ಮಹದೇವಪ್ರಸಾದ್, ಬಸವಪ್ಪನದೊಡ್ಡಿ ಬಸವರಾಜು, ಹರ್ಷ, ಯರಿಯೂರು ಮಹದೇವಸ್ವಾಮಿ. ಗುಂಡೇಗಾಲ ಮಠಾಧ್ಯಕ್ಷರು ಸೇರಿ ಹಲವು ಮಠಾಧೀಶರು ಪಾಲ್ಗೊಂಡಿದ್ದರು.