ಮಹನೀಯರು ರಾಷ್ಟ್ರಕ್ಕೆ ನೀಡಿದ ಕೊಡುಗೆ ಸ್ಮರಣೆ ಅಗತ್ಯ: ಜಿಲ್ಲಾಧಿಕಾರಿ

| Published : Mar 28 2025, 12:33 AM IST

ಮಹನೀಯರು ರಾಷ್ಟ್ರಕ್ಕೆ ನೀಡಿದ ಕೊಡುಗೆ ಸ್ಮರಣೆ ಅಗತ್ಯ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಡಾ.ಬಾಬು ಜಗಜೀವನ್ ರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಪೂರ್ವಭಾವಿ ಸಭೆ ನಡೆಯಿತು.

ಏ.5ರಂದು ಹಸಿರುಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ 118ನೇ ಮತ್ತು ಏ.14ರಂದು ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯನ್ನು ನಗರದ ಗಾಂಧಿ ಭವನದಲ್ಲಿ ಆಚರಿಸಲು ನಿರ್ಧರಿಸಲಾಯಿತು.

ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಂ ಅವರ ಜನ್ಮ ದಿನಾಚರಣೆಗೆ ಎಲ್ಲರೂ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸುವಂತೆ ಕೋರಿದರು.

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಂ ಅವರು ಒಂದು ಸಮಾಜ ಅಥವಾ ಸಮುದಾಯಕ್ಕೆ ಸೀಮಿತವಲ್ಲ. ಅವರು ರಾಷ್ಟ್ರಕ್ಕೆ ನೀಡಿರುವ ಕೊಡುಗೆಯನ್ನು ಸದಾ ಸ್ಮರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು. ನೀಟ್, ಸಿಇಟಿ ಹಾಗೆಯೇ ನಾಗರಿಕ ಸೇವೆ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವಂತಾಗಬೇಕು. ಇದರಿಂದ ಇತರರಿಗೂ ಪ್ರೇರಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ನಗರಸಭೆ ಸದಸ್ಯ ಎಸ್.ಸಿ.ಸತೀಶ್ ಮಾತನಾಡಿ, ವಿವಿಧ ಸಮಾಜದ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತಾಗಬೇಕು ಎಂದು ಕೋರಿದರು.

ಪ್ರಮುಖರಾದ ಮೋಹನ್ ಮೌರ್ಯ ಮಾತನಾಡಿ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಕಲ್ಪಿಸಿದ ಇಬ್ಬರು ಮಹಾನ್ ಸಾಧಕರ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ನೀಡುವಂತಾಗಬೇಕು. ಹಾಗೆಯೇ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯವರನ್ನು ಸಹ ಆಹ್ವಾನಿಸಬೇಕು ಎಂದರು.

ಸಮಿತಿ ಸದಸ್ಯರಾದ ಪಿ.ಪಿ.ಸುಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಅವರ ಜನ್ಮ ದಿನಾಚರಣೆಯಂದು ಮೆರವಣಿಗೆ ಏರ್ಪಡಿಸುವಂತಾಗಬೇಕು, ಜೊತೆಗೆ ಕಲಾತಂಡ ಆಹ್ವಾನಿಸಬೇಕು ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದಿವಾಕರ ಮಾತನಾಡಿ, ಇಬ್ಬರು ಮಹಾನ್ ನಾಯಕರ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಅನಾಥ ಆಶ್ರಮಗಳಿಗೆ ಅಗತ್ಯ ಸಹಕಾರ ನೀಡುವಂತಾಗಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, 2023 ಮತ್ತು 2024ರಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಹಿನ್ನೆಲೆ ಸರಳವಾಗಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಂ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗಿತ್ತು. ಈ ವರ್ಷ ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಸಮಿತಿ ಸದಸ್ಯರಾದ ನಾಗರಾಜ ಶೆಟ್ಟಿ, ಗಣೇಶ್, ಪ್ರೇಮಕುಮಾರ್, ವೇಣುಕುಮಾರ್, ಪೌರಾಯುಕ್ತರಾದ ಎಚ್.ಆರ್.ರಮೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ.ವಿಸ್ಮಯಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಿ.ಪಿ.ಕವಿತ, ಜಿಲ್ಲಾ ವಿಕಲಚೇತನರ ಅಧಿಕಾರಿ ವಿಮಲಾ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಐಟಿಡಿಪಿ ಇಲಾಖೆಯ ವ್ಯವಸ್ಥಾಪಕ ದೇವರಾಜ್, ಕಾರ್ಮಿಕ ಇಲಾಖೆಯ ಶೀರಜ್ ಇತರರು ಇದ್ದರು.