ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಾನವ ಆರೋಗ್ಯಕರ ಜೀವನಕ್ಕೆ ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವುದು ಅಗತ್ಯ. ನಿರ್ಲಕ್ಷಿಸಿದರೆ ಕಾಯಿಲೆ ಕೊನೆಘಟ್ಟಕ್ಕೆ ತಲುಪಿದಾಗ ಚಿಕಿತ್ಸೆ ಒದಗಿಸುವುದು ಕಷ್ಟಸಾಧ್ಯ ಎಂದು ನೇಚರ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದರು.

ತಾಲೂಕಿನ ಎಸ್.ಬಿದರೆ ಗ್ರಾಮದ ಡಾ.ಆರ್.ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ನೇಚರ್ ಕನ್ಸರ್ವೇಷನ್ ಟ್ರಸ್ಟ್, ಲಯನ್ಸ್ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಉಚಿತ ದಂತ, ಕಣ್ಣು ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಶರೀರದಲ್ಲಿ ಮೇಲ್ನೋಟದಲ್ಲಿ ಕಣ್ಣು ಹಾಗೂ ದಂತ ಅತಿಮುಖ್ಯ ಪಾತ್ರ ನಿರ್ವಹಿಸುತ್ತದೆ. ದೃಷ್ಟಿದೋಷ ಅಥವಾ ಹಲ್ಲಿನ ಸಮಸ್ಯೆಗಳು ಕಾಡಿದರೆ ಬಹಳಷ್ಟು ಸಮಸ್ಯೆ. ಹೀಗಾಗಿ ಕಾಯಿಲೆ ಸ್ವಲ್ಪಮಟ್ಟಿನಲ್ಲೇ ಚಿಕಿತ್ಸೆ ಹಾಗೂ ತಪಾಸಣೆಗೆ ಒಳಗಾಗಿ ಆರೋಗ್ಯಕರ ಜೀವನ ನಡೆಸಬೇಕು ಎಂದರು.

ಹಳ್ಳಿಗಾಡಿನಲ್ಲಿ ಹಿರಿಯರು, ಮಹಿಳೆಯರು ತಮ್ಮ ದೈನಂದಿನ ಕಾಯಕದಲ್ಲೇ ಹೆಚ್ಚು ತಲ್ಲೀನರಾಗುವ ಕಾರಣ ಸ್ವಂತ ಆರೋಗ್ಯದ ಬಗ್ಗೆ ಗಮನಹರಿಸುವುದಿಲ್ಲ. ಆದ್ದರಿಂದ ಗ್ರಾಮೀಣರಿಗೆ ಆರೋಗ್ಯ ಲಭಿಸುವ ದೃಷ್ಟಿ ಯಿಂದ ಗ್ರಾಮದಲ್ಲೇ ಉಚಿತ ಶಿಬಿರ ಆಯೋಜಿಸುವ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸಲಾಗುತ್ತಿದೆ ಎಂ ದು ಹೇಳಿದರು.


ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಹಾಗೂ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಆ ನಿಟ್ಟಿ ನಲ್ಲಿ ಅಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು, ಅಧಿಕಾರಿಗಳಿಗೆ ಸ್ಥಳೀಯವಾಗಿ ಉಳಿದುಕೊಳ್ಳಲು ಅನುಕೂಲ ಮಾಡಿಕೊಡಬೇಕು. ನಗರದಿಂದ ಸಂಚರಿಸುವ ಅಧಿಕಾರಿಗಳಿಂದ ಗ್ರಾಮೀಣ ಭಾಗ್ಯಕ್ಕೆ ಸರಿಯಾಗಿ ಸೌಲಭ್ಯಗ ಳು ಲಭ್ಯವಾಗುತ್ತಿಲ್ಲ ಎಂದರು.

ಲಯನ್ಸ್ ಅಧ್ಯಕ್ಷ ಕುಮಾರ್ ಮಾತನಾಡಿ, ರೈತರ ಶ್ರಮದಿಂದ ದೇಶ ಇಂದು ಮುನ್ನೆಡೆ ಸಾಧಿಸುತ್ತಿದೆ. ರೈತನಿಲ್ಲದ ಜೀವನ ಪ್ರತಿಯೊಬ್ಬರಿಗೂ ತುಂಬಲಾರದ ನಷ್ಟ. ಆ ರೈತ ಕುಟುಂಬಗಳು ಸದೃಢವಾಗಿಡಲು ಈ ಆರೋಗ್ಯ ಶಿಬಿರ ಆಯೋಜಿಸಿದ್ಧು ಪ್ರತಿಯೊಬ್ಬರು ಮುಕ್ತವಾಗಿ ಪಾಲ್ಗೊಂಡು ಆರೋಗ್ಯದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಶಿಬಿರದಲ್ಲಿ ಸುಮಾರು 15 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು. ಈ ಸಂದರ್ಭದಲ್ಲಿ ಡಾ.ಆರ್.ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆ ಕಾರ್ಯದರ್ಶಿ ಶಂಕರಲಿಂಗೇಗೌಡ, ಆಸ್ಪತ್ರೆ ವೈದ್ಯರು, ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.