ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ವಕ್ಫ್ ಕಾಯ್ದೆ ಮುಸ್ಲಿಂ ಮತ್ತು ಕುರಾನ್ ನಿಯಮಗಳಿಗೂ ಒಗ್ಗುವುದಿಲ್ಲ. ಅಮಾನವೀಯ, ಹೀನ ಮತ್ತು ಕೌರ್ಯ ಮೆರೆಯುವ ಕಾಯ್ದೆ ಅಸಂವಿಧಾನಿಕವಾಗಿದೆ. ಕಾಯ್ದೆಗೆ ಶೀಘ್ರ ರದ್ದುಪಡಿಸುವ ಅವಶ್ಯಕತೆ ಇದೆ ಎಂದು ಕೊಲ್ಲಾಪುರ ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಹೇಳಿದರು.ವಕ್ಫ್ ಮಂಡಳಿ ವಿರುದ್ಧ ಬೆಳಗಾವಿ ನಗರದ ಧರ್ಮವೀರ ಸಂಭಾಜಿ ಉದ್ಯಾನದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಜರುಗಿದ ಬೃಹತ್ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಬ್ರಿಟಿಷರು ಜಾರಿಗೆ ತಂದ ಈ ಕಾಯ್ದೆ ಸ್ವಾತಂತ್ರ್ಯ ನಂತರದ ಕಾಲದಲ್ಲಿ ಮುಸ್ಲಿಂ ಓಲೈಕೆ ರಾಜಕಾರಣ ಪರಿಣಾಮ ಬಹಳಷ್ಟು ತಿದ್ದುಪಡಿಗಳಿಗೆ ಒಳಗಾಗಿ ಈ ಮಟ್ಟಕ್ಕೆ ಶಕ್ತಿಶಾಲಿಯಾಗಿದೆ. ನರಸಿಂಹರಾವ್ ಹಾಗೂ ಮನಮೋಹನ ಸಿಂಗ್ ಆಡಳಿತದಲ್ಲಿ ಈ ಕಾಯ್ದೆಗೆ ಹೊಸ ನಿಯಮ ಸೇರ್ಪಡೆಗೊಳಿಸಿದ ಪರಿಣಾಮ ಈ ದುಃಸ್ಥಿತಿ ರೈತರಿಗೆ ಬಂದಿದೆ ಎಂದು ಹರಿಹಾಯ್ದರು.ವಕ್ಫ್ ಮಂಡಳಿಯಲ್ಲಿ ಓರ್ವ ಸಂಸದ, ಎಂಎಲ್‌ಎ, ಜಿಲ್ಲಾಧಿಕಾರಿ, ನಿವೃತ್ತ ಐಎಎಸ್ ಅಧಿಕಾರಿ, ಗುಮಾಸ್ತ ಮತ್ತು ನಿರ್ವಾಹಕ ಸೇರಿದಂತೆ ಓರ್ವ ಮುಸ್ಲಿಂ ಪರ್ಸನಲ್ ಕಾನೂನು ಪರಿಣಿತ ವ್ಯಕ್ತಿ ಸೇರಿ ಏಳು ಜನರು ಸದಸ್ಯರಾಗಿರುತ್ತಾರೆ. ಈ ಮಂಡಳಿಯಲ್ಲಿ ಮುಸ್ಲಿಂಯೇತರರಿಗೆ ಮತ್ತು ಮುಸ್ಲಿಂ ಮಹಿಳೆಯರಿಗೆ ಸ್ಥಾನವೇ ಇಲ್ಲ. ಶಿಯಾ ಮತ್ತು ಸುನ್ನಿ ಹೊರತಾಗಿ ಉಳಿದ ಮುಸ್ಲಿಂ ಮುಸ್ಲಿಂನ ಉಪಪಂಗಡಗಳಿಗೆ ಈ ವಕ್ಫ್ ಕಾಯ್ದೆಯಿಂದ ಯಾವುದೇ ಪ್ರಯೋಜನವಿಲ್ಲ. ಈ ಬಗೆಯ ಅಸಂವಿಧಾನಿಕ ನಿಯಮಗಳ ಪರಿಣಾಮದಿಂದ ವಕ್ಫ್ ಮಂಡಳಿ ಹುಚ್ಚಾಟ ನಡೆಸಿದೆ ಎಂದು ಹೇಳಿದರು.
ಅಕ್ಟರ್ ಕಾಲದಲ್ಲಿ ಅವರ ಕುರಿ ಓಡಾಡಿದ್ದು, ಔರಂಗಜೇಬ್ ಅರಮನೆಯ ಕುದರೆ ಓಡಾಡಿದ್ದು ಎಂತೆಲ್ಲ ಪಿಳ್ಳೆ ನೆಪಗಳನ್ನು ತಿಳಿಸಿ, ಜಮೀನು ಕಬಳಿಸಲಾಗುತ್ತಿದೆ. ಹೀಗೆ ವಕ್ಫ್ ಕೆಲಸ ಮಾಡುತ್ತಿರುವುದರ ದುಷ್ಪರಿಣಾಮದಿಂದ ನಾಡಿನ ಮಠ, ಮಂದಿರ ಮತ್ತು ಕೃಷಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ ಎಂದರು.ಕ್ರೈಸ್ತ, ಪಾರ್ಸಿ ಮತ್ತು ಜೈನ ಸೇರಿದಂತೆ ಉಳಿದ ಅಲ್ಪಸಂಖ್ಯಾತರಿಗೆ ನೀಡದ ವಿಶೇಷ ಸವಲತ್ತುಗಳು ಕೇವಲ ಮುಸ್ಲಿಮರಿಗೆ ಏಕೆ ಎಂದು ಪ್ರಶ್ನಿಸಿದರು. ಇದು ತುಷ್ಟೀಕರಣದ ನೀತಿಯಾಗಿದೆ ಎಂದು ಸರ್ಕಾರದ ನೀತಿಗಳನ್ನು ಖಂಡಿಸಿದರು.
ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ನಾಡಿನ ಅನ್ನದಾತರು ರೈತರು ಸಮಸ್ಯೆಗೆ ಎಲ್ಲ ಮಠಗಳ ಸ್ವಾಮೀಜಿಗಳು ಒಗ್ಗೂಡಿ ಹೋರಾಟ ಮಾಡುತ್ತಿದ್ದೇವೆ. ರೈತರಿಗೆ ಸಂಕಷ್ಟ ನೀಡುವುದು ಸೂಕ್ತವಲ್ಲ ಎಂದು ಸರ್ಕಾರದ ನೀತಿಗಳನ್ನು ಖಂಡಿಸಿದರು.ನಾಗರಿಕ ಹಿತರಕ್ಷಣೆ ಸಮಿತಿ ಸದಸ್ಯ ರೋಹಿತ ಉಮನಾದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಹನ ಜುವಳಿ ಸ್ವಾಗತಿಸಿದರು. ಶಿವಾಜಿ ಶಹಾಪುರಕರ ವಂದಿಸಿದರು. ಡಾ.ಬಸವರಾಜ ಭಾಗೋಜಿ ಮತ್ತು ವಿನೋದ ನಿರೂಪಿಸಿದರು.
ಸನಾತನ ಬೋರ್ಡ್ ಸ್ಥಾಪನೆಗೆ ಒತ್ತಾಯ:ವಕ್ಫ್ ಮಾದರಿ ಸನಾತನ ಬೊರ್ಡ್ ಸ್ಥಾಪನೆಗೆ ಸರ್ಕಾರ ಮುಂದಾದರೆ, ಸನಾತನಿಗಳ ಅಟಕ್‌ದಿಂದ ಕಟಕ್‌ವರೆಗೆ ಅಂದರೆ ಇರಾನ್, ಇರಾಕ್‌ಮ ಅಫಘಾನಿಸ್ತಾನ, ಪಾಕಿಸ್ತಾನ ಈ ಎಲ್ಲಾ ಭೂಮಿ ಭಾರತಕ್ಕೆ ಸೇರ್ಪಡೆಗೊಳ್ಳಲಿವೆ. ಸನಾತನಿ ಬೋರ್ಡ್ ಸ್ಥಾಪನೆಗೊಂಡಲ್ಲಿ ನಾವು ಕೂಡ ಸಾಮ್ರಾಟ್ ಅಶೋಕ, ಇಮ್ಮಡಿ ಪುಲಕೇಶಿ, ಹರ್ಷವರ್ಧನ ಈ ರಾಜರ ಆಡಳಿತ ಕಾಂಬೋಡಿಯಾದವರೆಗೆ ಹಬ್ಬಿತ್ತು. ಪ್ರಪಂಚದ ಎಲ್ಲ ಖಂಡಗಳಲ್ಲಿ ಸಾಂಸ್ಕೃತಿಕವಾಗಿ ಭಾರತ ತನ್ನ ಪ್ರಭಾವ ಬೀರಿರುವುದನ್ನು ಕಾಣುತ್ತೇವೆ. ಆ ಎಲ್ಲ ಖಂಡಗಳು ಸನಾತನ ಬೋರ್ಡ್ ವ್ಯಾಪ್ತಿಗೆ ಬರುತ್ತವೆ ಅದ್ರಶ್ಯ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.
ಹಿಂದುಗಳಿಗೆ ಹಿಂದುಗಳೇ ಶತ್ರುಅನಾದಿ ಕಾಲದಿಂದ ಹಿಂದುಗಳು ಸೋಲು ಹಿನ್ನೆಡೆಗೆ ಅನ್ಯರಿಗಿಂತ ಹಿಂದೂಗಳ ಕುತಂತ್ರವೇ ಕಾರಣವಾಗಿದೆ. ಆದ್ದರಿಂದ ಹಿಂದೂಗಳು ಒಗ್ಗೂಡಿ ಹೋರಾಟ ನಡೆಸಿದರೆ ಯಾವುದೆ ಸರ್ಕಾರ ಕೂಡ ಮಣಿಸಬಹುದು. ರಾಜ್ಯ ಸರ್ಕಾರ ಉಪಚುನಾವಣೆ ಕಾರಣ ವಕ್ಫ್ ನೋಟಿಸ್ ವಾಪಸ್ ಪಡೆದಿದೆ. ಮುಂದಿನ ದಿನ ಏನು ಮಾಡುವುದು ಎಂಬುವುದರ ಬಗ್ಗೆ ಖಾತ್ರಿಯಿಲ್ಲ. ಆದ್ದರಿಂದ ವಕ್ಫ್ ರದ್ದುಗೊಳ್ಳುವವರೆಗೂ ಹೋರಾಟ ನಡೆಸಬೇಕು ಎಂದು ಶ್ರೀಗಳು ಕರೆ ನೀಡಿದರು.