ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಅದು ಮಹಾತ್ಮಾ ಗಾಂಧಿ ಸಮಾವೇಶ ಅಲ್ಲ. ಇದು ಈ ಗಾಂಧಿಗಳ ಮೆರವಣಿಗೆ ಮಾಡುತ್ತಿದ್ದಾರೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಲೇವಡಿ ಮಾಡಿದರು.ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ವಿಚಾರದ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಗಾಂಧಿ ಸಮಾವೇಶ ಅಲ್ಲ. ಈ ಗಾಂಧಿಗಳ ಸಮಾವೇಶವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಮಾಧ್ಯಮಗಳೇ ಹೇಳುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ಸರಿ ಇಲ್ಲ ಎಂದು ನಾನು ಹೇಳುತ್ತೇನೆ. ಯಾವುದೂ ಸರಿ ಇಲ್ಲ, ದೇಶದ ತುಂಬಾ ದಲಿತರು ಮೆರವಣಿಗೆ ಮಾಡಿ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಿದರು ಎಂದರು.
ಕೇರಳದಲ್ಲಿ ಗಾಂಧಿ ಮನೆತನದವರು ನಾಮಿನೇಷನ್ ಕೊಡಲು ಹೋದರು. ಅಲ್ಲಿ ಐದು ಜನರಿಗೆ ಪರ್ಮಿಷನ್ ಇದೆ. ಆಗ ಇಬ್ಬರು ಮಕ್ಕಳು ತಾನು, ತಾಯಿ ಮತ್ತು ಅಣ್ಣ ಒಳಗೆ ಹೋದರು. ಆದರೆ ಒಬ್ಬ ಅಧ್ಯಕ್ಷನನ್ನು ಹೊರಗಿಟ್ಟು ನಾಮಿನೇಷನ್ ಕೊಡಲು ಹೋಗುತ್ತಾರೆ. ಆಲ್ ಇಂಡಿಯಾ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಕಿಡಕಿಯಲ್ಲಿ ನಿಂತು ನೋಡುತ್ತಾನೆ. ಇದು ಕಾಂಗ್ರೆಸ್ ಪಕ್ಷದ ನಾಚಿಕೆತನ ಅಲ್ಲವಾ? ಎಂದು ಪ್ರಶ್ನಿಸಿದರು. ಇದು ಒಂದು ಘಟನೆ ಅಷ್ಟೇ, ಹಿಂದೆ ಇಂತಹ ಸಾಕಷ್ಟು ಘಟನೆಗಳಾಗಿವೆ. ದಲಿತರ ಅವಮಾನ ಮಾಡಿದ ಘಟನೆ ಸಾಕಷ್ಟಿವೆ. ಬಾಬಾಸಾಹೇಬ್ ಅಂಬೇಡ್ಕರ ಅವರಿಗೆ ಕಾಂಗ್ರೆಸ್‌ನವರು ಅವಮಾನ ಮಾಡಿದ್ದಾರೆ. ಇನ್ನು ಖರ್ಗೆ ಅವರಿಗೆ ಮಾಡಿದ ಅವಮಾನ ಇದೇನು ಸಣ್ಣದಲ್ಲ. ಈ ವಿಚಾರದಲ್ಲಿ ನನಗೆ ಬಹಳ ನೋವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿನ ದಲಿತರಿಗೆ ನೋವಾಗಿದೆಯೋ ಬಿಟ್ಟಿದೆಯೋ ನನಗೆ ಗೊತ್ತಿಲ್ಲ, ನನಗಂತೂ ನೋವಾಗಿದೆ ಎಂದು ಹೇಳಿದರು.ಖರ್ಗೆಗೆ ಮನವಿ:
ಖರ್ಗೆ ಅವರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ನಮ್ಮ ಸಮಾಜದ ಹಿರಿಯ ರಾಜಕಾರಣಿ ಎಂಬ ಕಾರಣಕ್ಕೆ ಗೌರವವಿದೆ. ಖರ್ಗೆ ಸಾಹೇಬರಿಗೆ ವಿನಂತಿ ಮಾಡಿಕೊಳ್ಳುವೆ, ಇಷ್ಟು ಅವಮಾನ ಪಕ್ಷದಲ್ಲಿ ಮಾಡಿದ್ದಾರೆ. ರಾಜಕಾರಣ ಇನ್ನೂ ಸಾಕು ವಯಸ್ಸಾಗಿದೆ ಮನೆಯಲ್ಲಿರಿ ಎಂದು ಸಂಸದ ವಿನಂತಿಸಿದರು.ಪಕ್ಷದ ನಿರ್ಣಯಕ್ಕೆ ಬದ್ಧ:
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿಗಜಿಣಗಿ, ನಾನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ನಮ್ಮ ಪಕ್ಷದ ಹಿರಿಯರು ಅದನ್ನು ನೋಡಿಕೊಳ್ಳಬೇಕು. ತೆಗೆಯುವುದು ಆದರೆ ಬಹಳ ಗುಮ್ಮ(ಆಳವಿದೆ) ಇದೆ. ಅದು ಹೇಳಬೇಕಾಗುತ್ತದೆ. ಆದರೆ ನಾನು ಹೇಳಲ್ಲ. ಪಕ್ಷದವರು ಏನು ನಿರ್ಣಯ ಮಾಡುತ್ತಾರೋ ಮಾಡುತ್ತಾರೆ. ಪಕ್ಷದ ನಿರ್ಣಯಕ್ಕೆ ನಾನು ಬದ್ದ. ನಾನು ಯಾರ ಪರವಾಗಿಲ್ಲ, ಹೈ ಕಮಾಂಡ್ ನಿರ್ಣಯವೇ ಕೊನೆಯ ನಿರ್ಣಯ ಎಂದರು.ವಿಜಯಪುರ ಸೇರಿದಂತೆ ನಾಡಿನಾದ್ಯಂತ ದರೋಡೆಕೋರರ ಹಾವಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸರ್ಕಾರ ಇದೆಯಾ?. ಸುಮ್ಮನೇ ಒಬ್ಬ ದಲಿತ ಮಂತ್ರಿಗೆ ಹೋಮ್ ಡಿಪಾರ್ಟ್ಮೆಂಟ್ ಕೊಟ್ಟಿದ್ದೇವೆ ಎಂದು ಸುಮ್ಮನೆ ಕೂಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವುದೂ ಸರಿ ಇಲ್ಲ. ಅಧಿಕಾರ ಏನೇ ಇರಲಿ ಜನರ ರಕ್ಷಣೆಯನ್ನಾದರೂ ಮಾಡಬೇಕಲ್ಲ. ಹಾಡಹಗಲೇ ಬ್ಯಾಂಕ್ ಲೂಟಿ ಮಾಡುತ್ತಿದ್ದಾರೆ, ಜನರ ಹಣ ಲೂಟಿ ಮಾಡುತ್ತಿದ್ದಾರೆ, ಮನೆಯಲ್ಲಿ ಕಳ್ಳತನ ನಡೆದಿದೆ. ಪೊಲೀಸ್ ಇಲಾಖೆ ಎಂಬುದು ಇದೆಯಾ?, ಸಂಪೂರ್ಣ ರಾಜಕಾರಣ ಹದಗೆಟ್ಟು ಹೋಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಸರ್ಕಾರದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.