ಡಿಕೆಶಿ ಖೇಡಿ ತರ ಆಡಬಾರದು: ಸಿ.ಟಿ. ರವಿ

| Published : Oct 19 2023, 12:45 AM IST

ಸಾರಾಂಶ

ಆ ರೀತಿಯಲ್ಲಿ ನಡೆದುಕೊಳ್ಳುವುದು ಒಳ್ಳೆಯ ಲಕ್ಷಣ ಅಲ್ಲ: ಸಿ.ಟಿ. ರವಿ
ಡಿ.ಕೆ. ಶಿವಕುಮಾರ್ ಹೇಳಿಕೆಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಖೇಡಿ ತರ ಆಡಬಾರದು. ಆ ರೀತಿಯಲ್ಲಿ ನಡೆದುಕೊಳ್ಳುವುದು ಒಳ್ಳೆಯ ಲಕ್ಷಣ ಅಲ್ಲ. ಅವರ ಪಕ್ಷಕ್ಕೆ, ರಾಜ್ಯಕ್ಕಂತೂ ಒಳ್ಳೆಯ ಲಕ್ಷಣವಂತೂ ಅಲ್ವೇ ಅಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ತಮ್ಮನ್ನು ಲೂಟಿ ರವಿ ಎಂದು ಹೇಳಿರುವ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮನ್ನು ಡಿಕೆ ಬದಲು ಖೇಡಿ ಎಂದು ಕರೆಯ ಬಹುದಲ್ವಾ ಎಂದು ಪ್ರಶ್ನಿಸಿದರು. ಐಟಿ ದಾಳಿಯಲ್ಲಿ ಸಿಕ್ಕಿರುವುದು ಕಾಂಗ್ರೆಸ್‌ನವರ ಬೇನಾಮಿ ಹಣ ಎನ್ನುವುದು ನಮಗೆ ಬಂದಿರುವ ವರದಿ. ಇವರೇ ನಂಬರ್ 1, ನಂಬರ್ 2 ಬೇನಾಮಿಗಳ ಮೂಲಕ ಸಂಗ್ರಹಿಸಿರುವ ಹಣ ಎಂದು ನಮಗೆ ಬಂದಿರುವ ಮಾಹಿತಿ ಎಂದು ಹೇಳಿದ ಸಿ.ಟಿ. ರವಿ, ನಮ್ಮದು ಆರೋಪ. ಅದನ್ನು ನಿರಾಕರಿಸುವ ಅಧಿಕಾರ ಅವರಿಗಿದೆ. ನಿರಾಕರಿಸುವ ಭರದಲ್ಲಿ ಕುಮಾರಸ್ವಾಮಿ ಅವರಿಗೆ ನಕಲಿ ಸ್ವಾಮಿ ಅಂತಾ ಹೇಳೋದು, ಆಶ್ವಥ್ ನಾರಾಯಣ್‌ ಅವರಿಗೆ ನವರಂಗಿ ನಾರಾಯಣ ಅನ್ನೋದು, ನನಗೆ ಸಿ.ಟಿ. ತೆಗೆದು ಲೂಟಿ ಅನ್ನೋದು. ಹಾಗಾದರೆ ನಿಮ್ಮ ಡಿಕೆ ತೆಗೆದು ಖೇಡಿ ಅನ್ನಬಹುದಲ್ವಾ ಎಂದು ಪ್ರಶ್ನಿಸಿದರು. ಅವರು ಖೇಡಿ ಮನಸ್ಥಿತಿಯಲ್ಲಿ ವಿವರಿಸುವುದನ್ನು ಬಿಡಬೇಕು. ಉಪ ಮುಖ್ಯಮಂತ್ರಿ ತಮಗಿರುವ ಜವಾಬ್ದಾರಿಯ ಅರಿವಿಟ್ಟು ನಡೆದುಕೊಳ್ಳಬೇಕು. ಅದನ್ನ ಬಿಟ್ಟು ಹೆದರಿಸುವ, ಬೆದರಿಸುವ, ರಾಜಕಾರಣ ಮಾಡಬಾರದು. ಇಲ್ಲಿ ಹೆದರೋಕೆ ಬೆದರೋಕೆ ಯಾರಿದ್ದಾರೆ ? ಅವ್ರೇನು ರಾಕ್ಷಸ ವಂಶಕ್ಕೆ ಸೇರಿದವರಾ? ಖೇಡಿ ವಂಶಕ್ಕೆ ಸೇರಿದವ್ರಾ? ಎಂದು ಪ್ರಶ್ನಿಸಿದರು. ಅಷ್ಟಕ್ಕೂ ನನ್ನ ಆಸ್ತಿ ಸಾವಿರಾರು ಕೋಟಿ ಏನಿಲ್ಲ. ಲೂಟಿ ಯಾರು ಮಾಡಿದ್ದಾರೆ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ‌. ಆದಾಯದಲ್ಲಿ ಅಜ ಗಜಾಂತರ ಆಗಿರುವುದು ಯಾರದ್ದು ಡಿ.ಕೆ ಶಿವಕುಮಾರ್ ಅವರೇ ? ನೀವು ಏನು ಮಾತನಾಡ್ತೀರೋ ಅದು ನಿಮಗೆ ಅನ್ವಯವಾಗುತ್ತದೆ ಎಂದು ಹೇಳಿದರು. ಶಿವಮೊಗ್ಗ ಮೂಲದ ಉಗ್ರರು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯನ್ನು ಟಾರ್ಗೆಟ್‌ ಮಾಡಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ ಅವರು, ವಿಶ್ವ ಹಿಂದೂ ಪರಿಷತ್, ಬಿಜೆಪಿ ಮತ್ತು ಆರೆಸ್ಸೆಸ್‌ ಉಗ್ರರಿಗೆ ಟಾರ್ಗೆಟ್ ಆಗಿರುವುದು ಸಹಜ. ಚಿಕ್ಕಮಗಳೂರಿನ ಬಿಜೆಪಿ ಕಚೇರಿಯನ್ನು ಟಾರ್ಗೆಟ್ ಮಾಡಿದ್ದರೆ ಆಶ್ಚರ್ಯವಿಲ್ಲ ಎಂದರು. ನಾವು ರಾಷ್ಟ್ರೀಯ ವಿಚಾರ ಹೊಂದಿರುವ ಕಾರಣಕ್ಕೆ ಟಾರ್ಗೆಟ್ ಮಾಡಿದ್ದರೆ ಆಶ್ಚರ್ಯವೇನಿಲ್ಲ. ಮತಾಂಧ ಮುಸಲ್ಮಾನರು, ಮತಾಂಧ ಭಯೋತ್ಪಾದಕರು ಭಾರತವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಹಿಂದುಗಳನ್ನು ಟಾರ್ಗೆಟ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಭಾರತವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮೀರ್‌ ಕಾಸಿಂ ಕಾಲದಿಂದಲೂ ಟಾರ್ಗೆಟ್‌ ನಡೆದೇ ಇದೆ. ಭಾರತವನ್ನು ಇಸ್ಲಾಮಿಕರಣ ಮಾಡುವುದೇ ಅವರ ಉದ್ದೇಶ ಎಂದು ಹೇಳಿದರು.