ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ವಿದ್ಯುತ್ ಕಳ್ಳತನ, ದುರುಪಯೋಗ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಹಾಸನ ಸೆಸ್ಕ್ ಜಾಗೃತದಳ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಎಸ್. ಎಂ. ವೀಣಾ ಎಚ್ಚರಿಸಿದರು.ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹಾಸನ ಸೆಸ್ಕ್ ಜಾಗೃತ ದಳ, ಪಟ್ಟಣ ಸೆಸ್ಕ್ ಇಲಾಖೆ ಮತ್ತು ಅರಣ್ಯ ಇಲಾಖೆ ಸರ್ಕಾರೇತರ ಸಂಸ್ಥೆ ಪ್ರಕೃತಿ ಸಂರಕ್ಷಕ ಪ್ರತಿಷ್ಠಾನ(ಎನ್.ಸಿ.ಎಫ್) ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಕಾಡಂಚಿನ ಗ್ರಾಮ ಜನ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ದಾಖಲೆಯಿಲ್ಲದೆ ವಿದ್ಯುತ್ ಕಳ್ಳತನ ಮಾಡಿದರೆ ಕಲಂ ೧೩೫ ಸೆಕ್ಷನ್ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಮೊದಲ ಬಾರಿಗೆ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದೆ. ಪುನಃ ಅದೇ ಜಾಗದಲ್ಲಿ ಎರಡನೇ ಬಾರಿ ಪ್ರಕರಣ ಕಂಡುಬಂದಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುವುದು.
ಕಾಡಂಚಿನ ಪ್ರದೇಶದಲ್ಲಿ ಸುರಕ್ಷತೆ ದೃಷ್ಟಿಗಾಗಿ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕಾಡುಪ್ರಾಣಿಗಳನ್ನು ನಾಶ ಮಾಡುವುದು ಘೋರ ಅಪರಾಧವಾಗುತ್ತದೆ. ಮಳೆ, ಗಾಳಿ ಇದ್ದ ಸಂದರ್ಭದಲ್ಲಿ ಮರಗಿಡಗಳು ವಿದ್ಯುತ್ ತಂತಿ ಮೇಲೆ ಬಿದ್ದು ತಂತಿ ತುಂಡಾಗಿರುತ್ತದೆ. ತಂತಿಯಲ್ಲಿ ವಿದ್ಯುತ್ ಪ್ರಸರಿಸುತ್ತಿರುವುದು ಕಣ್ಣಿಗೆ ಕಾಣುವುದಿಲ್ಲ. ಆಕಸ್ಮಿಕವಾಗಿ ಸ್ಪರ್ಶಿಸಿದರೆ ಕೆಲ ಸೆಕೆಂಡ್ ಸಮಯದಲ್ಲಿ ಪ್ರಾಣ ಹಾರಿ ಹೋಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಜಾಗ್ರತೆಯಿಂದ ಇರಬೇಕು. ಕಳ್ಳತನ, ದುರುಪಯೋಗದಂತಹ ಪ್ರಕರಣ ಕಂಡುಬಂದಲ್ಲಿ ಸಂಬಂಧಿಸಿದ ಸೆಸ್ಕ್ ಜಾಗೃತದಳ ಇಲಾಖೆಗೆ ತಿಳಿಸಬೇಕು ಎಂದರು.ಜಾಗೃತದಳ ಸಹಾಯಕ ಎಂಜಿನಿಯರ್ ಜಗದೀಶ್, ನೂತನ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ತಾತ್ಕಾಲಿಕ ಸಂಪರ್ಕವನ್ನು ತಪ್ಪದೆ ಪಡೆಯಬೇಕು. ಹಳೆ ಖಾತೆಯಿಂದ ವಿದ್ಯುತ್ ಸಂಪರ್ಕ ಪಡೆದರೆ ದುಪ್ಪಟ್ಟು ದಂಡ ಕಟ್ಟಬೇಕಾಗುತ್ತದೆ. ಮನುಷ್ಯನಿಗೆ ೧೨೦-೧೩೦ ವೋಲ್ಟ್ ವಿದ್ಯುತ್ ಸ್ಪರ್ಷಿಸಿದರೆ ಅಪಾಯಕ್ಕೀಡಾಗುತ್ತಾನೆ. ಆದರೆ ಕಾಡಾನೆಗಳು ದೈತ್ಯಾಕಾರವಾಗಿದ್ದರೂ ಕೇವಲ ೨೦-೩೦ ವೋಲ್ಟ್ ವಿದ್ಯುತ್ ಸ್ಪರ್ಶಿಸಿದರೆ ಸಾಕು, ಅತ್ಯಂತ ಕಡಿಮೆ ವೋಲ್ಟೆಜ್‌ಗೆ ಆನೆ ಸಾವನ್ನಪ್ಪುತ್ತದೆ ಎಂದರು. ಬೆಂಕಿ, ನೀರು ಕಾಣಿಸುತ್ತದೆ. ಆದರೆ ವಿದ್ಯುತ್ ಹರಿಯುವುದು ಕಣ್ಣಿಗೆ ಕಾಣಿಸುವುದಿಲ್ಲ. ಎಚ್ಚರದಿಂದ ಇರಬೇಕು ಎಂದರು.
ಸಭೆಯನ್ನುದ್ದೇಶಿಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಘವೇಂದ್ರ, ಸೆಸ್ಕ್ ಸಹಾಯಕ ಎಂಜಿನಿಯರ್ ಎನ್. ಡಿ. ಕುಮಾರ್, ದೀಪಕ್ ಮಾತನಾಡಿದರು.ಸಭೆಯಲ್ಲಿ ಪ. ಪಂ. ಅಧ್ಯಕ್ಷೆ ತಾಹಿರಬೇಗಂ, ಪಿ.ಎಸ್.ಐ. ಲೋಹಿತ್, ಜಾಗೃತದಳ ಸಿಬ್ಬಂದಿಯಾದ ಲೋಕೇಶ್, ಆಂತೋಣಿ, ನವೀನ್, ನಿಶಾಂತ್, ವಿಜಯಕುಮಾರ್, ಶಶಿಕುಮಾರ್, ಮಮತಾ, ಎನ್.ಸಿ.ಎಫ್. ಸಂಯೋಜಕರಾದ ದೀಪಕ್ ಭಟ್, ನಿಸಾರ್ ಅಹಮದ್, ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.