ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಅರ್ಹ ಪದವೀಧರರು ಮತದಾರರಾಗಿ ನೋಂದಾಯಿಸಿಕೊಳ್ಳಲು ಪದೇ ಪದೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅನುಸರಿಸಲಾಗುತ್ತಿರುವುದು ಪದವೀಧರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಶಿಗ್ಗಾಂವಿ:ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಅರ್ಹ ಪದವೀಧರರು ಮತದಾರರಾಗಿ ನೋಂದಾಯಿಸಿಕೊಳ್ಳಲು ಪದೇ ಪದೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅನುಸರಿಸಲಾಗುತ್ತಿರುವುದು ಪದವೀಧರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಒಮ್ಮೆ ಪದವಿ ಪಡೆದ ವ್ಯಕ್ತಿಯ ಶೈಕ್ಷಣಿಕ ಅರ್ಹತೆ ಶಾಶ್ವತವಾಗಿರುವಾಗ, ಅದೇ ಅರ್ಹತೆಯ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಪ್ರತಿ ಬಾರಿ ಹೊಸದಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಎಷ್ಟು ಸಮಂಜಸ ಎಂದು ಹಂಪಿ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಫಕ್ಕೀರಗೌಡ ಪಾಟೀಲ ಪ್ರಶ್ನಿಸಿದ್ದಾರೆ.
ಈ ಕುರಿತು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಚುನಾವಣಾ ಆಯೋಗ ನಿಗದಿಪಡಿಸಿರುವ ನಿಯಮಾನುಸಾರ ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ ಪದವಿ ಪಡೆದಿರುವ ಬಗ್ಗೆ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರದ ಶೈಕ್ಷಣಿಕ ದಾಖಲೆಗಳಲ್ಲಿ ಮಾಹಿತಿ ಲಭ್ಯವಿರುವ ಹಿನ್ನೆಲೆಯಲ್ಲಿ, ಅರ್ಹ ಪದವೀಧರರನ್ನು ಗುರುತಿಸಿ ಮತದಾರರ ಪಟ್ಟಿಯನ್ನು ನಿರಂತರವಾಗಿ ನವೀಕರಿಸುವ ವ್ಯವಸ್ಥೆ ರೂಪಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದರು.ಒಮ್ಮೆ ಪದವಿ ಪಡೆದಿರುವುದು ಶಾಶ್ವತ ಅರ್ಹತೆಯಾಗಿದೆ, ಜೊತೆಗೆ ಗ್ರಾಮೀಣ ಭಾಗದ ಪದವೀಧರರು, ಉದ್ಯೋಗ ನಿಮಿತ್ತ ಬೇರೆಡೆ ವಾಸಿಸುವವರು ಹಾಗೂ ಪ್ರಕ್ರಿಯೆಯ ಮಾಹಿತಿ ಇಲ್ಲದ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆಯೂ ಇದೆ, ಪದವಿ ಪಡೆದಿರುವುದು ಬದಲಾಗದ ಶೈಕ್ಷಣಿಕ ಅರ್ಹತೆಯಾಗಿರುವುದರಿಂದ, ಪದವೀಧರ ಕ್ಷೇತ್ರದ ಮತದಾರರ ನೋಂದಣಿ ವ್ಯವಸ್ಥೆಯನ್ನೂ ಸರಳಗೊಳಿಸುವ ಅಗತ್ಯವಿದೆ. ವಿಶ್ವವಿದ್ಯಾಲಯಗಳು ಮತ್ತು ಸಂಬಂಧಿಸಿದ ಸರ್ಕಾರಿ ಇಲಾಖೆಗಳ ದಾಖಲೆಗಳನ್ನು ಚುನಾವಣಾ ಆಯೋಗದ ವ್ಯವಸ್ಥೆಯೊಂದಿಗೆ ಸಮನ್ವಯಗೊಳಿಸಿ, ಅರ್ಹ ಪದವೀಧರರ ಹೆಸರುಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ ಮತದಾರರ ಪಟ್ಟಿಯಲ್ಲಿ ಸೇರಿಸುವ ಅಥವಾ ಸರಳವಾದ ನಿರಂತರ ನೋಂದಣಿ ವ್ಯವಸ್ಥೆ ಜಾರಿಗೆ ತರುವ ಕುರಿತು ಚಿಂತನೆ ನಡೆಸಬೇಕು ಎಂಬುದು ಪದವೀಧರರ ಆಗ್ರಹವಾಗಿದ್ದು ಮತದಾನದ ಹಕ್ಕು ಚಲಾಯಿಸಲು ಯಾವುದೇ ಅನಗತ್ಯ ತೊಂದರೆ ಉಂಟಾಗದಂತೆ ಚುನಾವಣಾ ವ್ಯವಸ್ಥೆ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.