ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಶಿಸ್ತು, ಸೇವಾ ಮನೋಭಾವ, ಜವಾಬ್ದಾರಿಯುತ ವ್ಯಕ್ತಿತ್ವವನ್ನು ಬೆಳೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡ ಕಿವಿಮಾತು ಹೇಳಿದರು.ಭಾರತೀ ಕಾಲೇಜಿನ ಕುವೆಂಪು ಸಭಾಗಂಣದಲ್ಲಿ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್‌ನಲ್ಲಿ ವಿದ್ಯಾರ್ಥಿ ನಾಯಕತ್ವ ಪದಗ್ರಹಣ (ಇನ್‌ವೆಸ್ಟಿಚರ್) ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾಯಕತ್ವ ಪಡೆಯುವುದು ಸುಲಭ. ಆದರೆ, ಅದನ್ನು ಪ್ರಾಮಾಣಿಕತೆ, ಶಿಸ್ತು ಹಾಗೂ ಸೇವಾ ಮನೋಭಾವದ ಮೂಲಕ ಉಳಿಸಿಕೊಳ್ಳುವುದೇ ನಿಜವಾದ ಸಾಧನೆ ಎಂದರು.
ನಾಯಕತ್ವ ಎಂದರೆ ಅಧಿಕಾರವಲ್ಲ ಅದು ಜವಾಬ್ದಾರಿ. ವಿದ್ಯಾರ್ಥಿಗಳು ತಮ್ಮ ನಡವಳಿಕೆ ಮೂಲಕ ಶಾಲೆ, ಪೋಷಕರು ಹಾಗೂ ಸಮಾಜಕ್ಕೆ ಹೆಮ್ಮೆ ತರುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.ವಿದ್ಯಾರ್ಥಿ ಪರಿಷತ್ ಚುನಾವಣೆಗಳಿಂದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆ, ಚುನಾವಣಾ ಪ್ರಕ್ರಿಯೆ ಹಾಗೂ ನಾಯಕತ್ವದ ಮೌಲ್ಯಗಳನ್ನು ಪ್ರಾಯೋಗಿಕವಾಗಿ ತಿಳಿಯಲು ಸಹಕಾರಿಯಾಗಿದೆ. ಕಾಂಗ್ರೆಸ್ ಸರ್ಕಾರ ಕಾಲೇಜುಗಳಲ್ಲಿ ಚುನಾವಣೆಗಳನ್ನು ನಡೆಸುವ ಮೂಲಕ ನಾಯಕತ್ವ ಬೆಳೆಯುವ ವ್ಯವಸ್ಥೆ ರೂಪಿಸುತ್ತಿದೆ. ಆದರೆ, ಭಾರತೀ ಶಿಕ್ಷಣ ಸಂಸ್ಥೆ ಈ ಕೆಲಸವನ್ನು ಮೊದಲಿನಿಂದಲೇ ಅನುಷ್ಠಾನಗೊಳಿಸಿದೆ ಎಂದರು.
ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ಪ್ರಾಂಶುಪಾಲೆ ಸಿ.ರಮ್ಯಾ ಮಾತನಾಡಿ, ಇನ್‌ವೆಸ್ಟಿಚರ್ ಸಮಾರಂಭವು ಕೇವಲ ಹುದ್ದೆಗಳನ್ನು ನೀಡುವ ಕಾರ್ಯಕ್ರಮವಲ್ಲ. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸೇವಾ ಮನೋಭಾವ, ಶಿಸ್ತು, ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯುತ ನಾಗರಿಕತ್ವದ ಮೌಲ್ಯಗಳನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದರು.
ಈ ವೇಳೆ ಶಾಲಾ ಮುಖ್ಯ ನಾಯಕನಾಗಿ ಸಾತ್ವಿಕ್ ಜೆ.ಗೌಡ, ಮುಖ್ಯ ನಾಯಕಿಯಾಗಿ ಬಿ.ಕೆ.ಪೂಜಾ, ಸಹಾಯಕ ಮುಖ್ಯ ನಾಯಕನಾಗಿ ಎಂ.ಪ್ರಣವ್, ಸಹಾಯಕ ಮುಖ್ಯ ನಾಯಕಿಯಾಗಿ ಬಿ.ಎಸ್.ಪೂಜಿತಾ, ಕ್ರೀಡಾ ಕಾರ್ಯದರ್ಶಿಗಳಾಗಿ ಎಚ್.ಎನ್.ಪ್ರಥಮ್, ಡಿ.ತನ್ವಿತಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಟಿ.ಡಿ.ನಮೀಶ್ ಗೌಡ, ಬಿ.ಆರ್. ಮನ್ವಿತಾ, ಸಾಹಿತ್ಯ ಕಾರ್ಯದರ್ಶಿಗಳಾಗಿ ಡಿ.ಎಸ್.ಯಶಸ್ ಗೌಡ, ಜಿ.ಪಿ.ಪುಣ್ಯಶ್ರೀ, ಶಿಸ್ತು ಪರಿಪಾಲನಾ ಪ್ರಿಫೆಕ್ಟ್‌ಗಳಾಗಿ ಎಚ್.ಕೆ.ಶಮಂತ್ ಗೌಡ, ಸಿ.ಎಂ.ಪ್ರಣೀತಾ ಹಾಗೂ ಮೋಹನ್ ಗೌಡ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಭರತನಾಟ್ಯ, ಕಥಕ್, ಕಥಕಳಿ, ಕುಚಿಪುಡಿ, ಒಡಿಸ್ಸಿ, ಮಣಿಪುರಿ ಹಾಗೂ ಮೋಹಿನಿಯಾಟ್ಟಂ ಸೇರಿದಂತೆ ಭಾರತದ ಶಾಸ್ತ್ರೀಯ ನೃತ್ಯಗಳ ಮೂಲಕ ದೇಶದ ಸಾಂಸ್ಕೃತಿಕ ಪರಂಪರೆ, ಜನಜೀವನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಮನೋಜ್ಞವಾಗಿ ಪ್ರದರ್ಶಿಸಿದರು.ಈ ವೇಳೆ ಭಾರತದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು ಪ್ರದರ್ಶಸಿ ಭಾರತದ ವಿಶಿಷ್ಟ ಪರಂಪರೆ ಅನಾವರಣಗೊಳಿಸಿ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಭಾರತೀ ಸ್ನಾತಕೋತ್ತರ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನಾಗರಾಜ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.