ಸಾಹಿತ್ಯ ಬರೀ ಪ್ರತಿಬಿಂಬವಾದರೆ ಸಾಲದು

| Published : Sep 04 2025, 01:00 AM IST

ಸಾರಾಂಶ

ಕನ್ನಡಿ ಕವನ ಸಂಕಲನವು ಜನಜೀವನಕ್ಕೆ ದಾರಿ ತೋರಿಸುವ ಒಂದು ಮಾರ್ಗದರ್ಶಕ ಕಾವ್ಯವಾಗಿದ್ದು, ಸಾಹಿತ್ಯ ಒಂದು ಪ್ರತಿಬಿಂಬ, ಜನಜೀವನದ ಪ್ರತಿಬಿಂಬವೇ ಒಂದು ಸಾಹಿತ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಕನ್ನಡಿ ಕವನ ಸಂಕಲನವು ಜನಜೀವನಕ್ಕೆ ದಾರಿ ತೋರಿಸುವ ಒಂದು ಮಾರ್ಗದರ್ಶಕ ಕಾವ್ಯವಾಗಿದ್ದು, ಸಾಹಿತ್ಯ ಒಂದು ಪ್ರತಿಬಿಂಬ, ಜನಜೀವನದ ಪ್ರತಿಬಿಂಬವೇ ಒಂದು ಸಾಹಿತ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನ್ನಡ ವಿಭಾಗ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ, ಒಲುಮೆಯ ಗೂಡು, ಚಾಮರಾಜನಗರ, ವೆಂಕಟಯ್ಯಛತ್ರ ಸರ್ಕಾರಿ ಪದವಿಪೂರ್ವ ಕಾಲೇಜಿನ 1996ನೇ ಸಾಲಿನ ಎಸ್‌ಎಸ್‌ಎಲ್‌ಸಿಯ ಹಿರಿಯ ವಿದ್ಯಾರ್ಥಿಗಳ ವೃಂದ ಸಂಯುಕ್ತಾಶ್ರಯದಲ್ಲಿ ಕವಿ ಸಿ.ಶಂಕರ ಅಂಕನಶೆಟ್ಟಿಪುರ 7ನೇ ಕೃತಿ ಕನ್ನಡಿ ಕವನ ಸಂಕಲನವು ಸಾರ್ವಜನಿಕ ಗ್ರಂಥಾಲಯದ ಪುಸ್ತಕ ಖರೀದಿ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿರುವುದರಿಂದ ಕನ್ನಡಿ ಕೃತಿಯ ಸಂವಾದ, ಕನ್ನಡಿಯೊಳಗಿನ ಕವಿತೆಗಳ ದರ್ಶನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜನಜೀವನ ಹೇಗಿದೆ, ನಮ್ಮ ಬದುಕು ಹೇಗಿದೆ ಅನ್ನುವುದು ಪ್ರತಿಬಿಂಬಿಸುವುದೇ ಕನ್ನಡಿ ಕೃತಿ ಜಿಲ್ಲೆಯ ದಲಿತ ಸಮುದಾಯದ ಜನಜೀವನ, ಆಚಾರ-ವಿಚಾರ, ನೋವು, ಸಂಕಷ್ಠ ಏನಿದೆ ಅನ್ನುವುದನ್ನು ಕನ್ನಡಿ ರೂಪದಲ್ಲಿ ಪ್ರತಿಬಿಂಬಿಸುತ್ತದೆ. ಸಾಹಿತ್ಯ ಬರೀ ಪ್ರತಿಬಿಂಬವಾದರೆ ಸಾಲದು. ಸಾಹಿತ್ಯ ಗತಿಬಿಂಬವೂ ಹೌದು, ಎಲ್ಲ ಸಮಸ್ಯೆಗಳನ್ನಿಟ್ಟುಕೊಂಡು ನಾವು ಯಾವ ದಾರಿಯಲ್ಲಿ ಹೋಗಬೇಕು ಅನ್ನುವುದನ್ನು ಒಂದು ದಾರಿಯನ್ನು ತೋರಿಸುವುದು ಒಂದು ಸಾಹಿತ್ಯವಾಗಿದೆ. ಜನಜೀವನಕ್ಕೆ ದಾರಿ ತೋರಿಸುವ ಒಂದು ಮಾರ್ಗದರ್ಶಕ ಕಾವ್ಯವಾಗಿ ಈ ಕನ್ನಡಿ ಕೃತಿ ಇದೆ. ಕವನ ಸಂಕಲನವು ಸಾರ್ವಜನಿಕ ಗ್ರಂಥಾಲಯದ ಪುಸ್ತಕ ‌ ಖರೀದಿ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿರುವುದು ಬಹಳ ಸಂತೋಷಕರವಾಗಿದೆ ಎಂದರು.

ಸಾಹಿತಿ ಹರದನಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ಶಂಕರ ಅಂಕನಶೆಟ್ಟಿಪುರ ಅವರು ಬರೆದಿರುವ ಕನ್ನಡಿ ಕವನ ಸಂಕಲನದಲ್ಲಿ ಹೃದಯ ಕವಿತೆಗಳಿದ್ದು, ಅದನ್ನು ಹೃದಯದೊಳಗಿಟ್ಟುಕೊಂಡರೆ ಮಾತ್ರ ಅರ್ಥ ಸಿಗುತ್ತದೆ. ದಲಿತ ಸಾಹಿತ್ಯದಲ್ಲಿ ಶಂಕರ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರು.

ಕನ್ನಡಿ ಕವನ ಸಂಕಲನವನ್ನು ಎದೆಯೊಳಗಿಟ್ಟುಕೊಂಡರೆ ಮಾತ್ರ ಅರ್ಥವಾಗುತ್ತದೆ. ಇಡೀ ಭಾರತೀಯ ಸಾಹಿತ್ಯ, ಇಡೀ ಕನ್ನಡ ಸಾಹಿತ್ಯವನ್ನು ನಾವು ನೋಡಿದಾಗ ತಲೆಯ ಸಂಸ್ಕೃತಿ ಸಾಹಿತ್ಯವನ್ನು ನೋಡುತ್ತಾ ಬರುತ್ತೇವೆ. ಆದರೆ ಕುವೆಂಪು ಅವರು ಬರೆದಿರುವ ಶ್ರೀರಾಮಯಾಣ ದರ್ಶನಂ ಎದೆಯಕಾವ್ಯ ಶಂಕರ ಅವರ ಕನ್ನಡಿ ಕಾವ್ಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಎದೆಯ ಸಂಸ್ಕೃತಿ ಗೊತ್ತಿದ್ದರೆ ಮಾತ್ರ ಅರ್ಥ ಮಾಡಿಕೊಳ್ಳಬಹುದು ಎಂದರು.

ಧ್ಯಾನ ಅನ್ನುವುದು ತಲೆಗೆ ಮಾತ್ರ ಸೀಮಿತವಾಗಿತು. ನಂತರ ಕಾಲಘಟ್ಟದಲ್ಲಿ ಬಸವವಾದಿ ಶರಣರು ಇಡೀ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊಟ್ಟಮೊದಲು ಎದೆಯ ಸಂಸ್ಕೃತಿ ಕೊಟ್ಟವರು ಬಸವವಾದಿ ಶರಣರು. ಅದು ನಮಗೆ ಧ್ವನಿ, ಆದರ್ಶವಾಯಿತು ಎಂದರು.

ಕಾಲೇಜು ಪ್ರಾಂಶುಪಾಲೆ ಡಾ.ಆರ್.ಎಸ್.ಅಶ್ವಿನಿ ಮಾತನಾಡಿದರು. ಕವಿ ಸಿ.ಶಂಕರ ಅಂಕನಶೆಟ್ಟಿಪುರ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಎ.ಎಂ.ಶಿವಸ್ವಾಮಿ, ಉದ್ಯಮಿ ಹೆಚ್.ಡಿ.ಪ್ರತಾಪ್, ಹೋರಾಟಗಾರ ಪಿ.ಸಂಘಸೇನಾ ಸಾಹಿತಿ ಬಸವಣ್ಣ, ಜಿ.ಕೆ.ದೀಪಿತ, ಸಾವಯವ ಕೃಷಿಕ ವಿ.ನಟರಾಜು, ಯುವಸೇನೆ ಕರ್ನಾಟಕ ಸೇವಾ ಸಂಘ ನಮ್ಮನೆ ಪ್ರಶಾಂತ್, ಶಿವಶಂಕರ್ ಚಟ್ಟು, ಡಿ.ಎನ್.ಉಷಾ, ಪದ್ಮಾಕ್ಷಿ, ಕೋಮಲ, ರೇಷ್ಮಾ, ರಮೇಶ್, ಮಲ್ಲು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.