ಹಾವೇರಿ: ಭಕ್ತ ಕನಕದಾಸರ ಕರ್ಮಭೂಮಿ ಕಾಗಿನೆಲೆಗೆ ಹೋಗುವ ಮಾರ್ಗದ ವೃತ್ತದಲ್ಲಿ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದು ಶ್ಲಾಘನೀಯ. ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಸಾಲದು, ಪ್ರತಿಯೊಬ್ಬರ ಹೃದಯದಲ್ಲೂ ಕನಕದಾಸರ ತತ್ವಗಳನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ನಗರದ ಕಾಗಿನೆಲೆ ವೃತ್ತದಲ್ಲಿ ಭಕ್ತ ಕನಕದಾಸರ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಕನಕದಾಸರ ಆದರ್ಶ ಹಾಗೂ ತತ್ವಗಳನ್ನು ಅಳವಡಿಕೊಂಡು ಬದುಕಿದರೆ ಮಾತ್ರ, ಬದುಕಿಗೆ ಬೆಲೆ ಬರುತ್ತದೆ. ಮೂರ್ತಿ ಪ್ರತಿಷ್ಠಾಪನೆ ಬಳಿಕ, ಈ ಸ್ಥಳವನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಳ್ಳಬೇಕು. ಜಿಲ್ಲಾ ಕೇಂದ್ರದಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಬಹುದಿನಗಳ ಕನಸಾಗಿತ್ತು. ಎಸ್.ಎಫ್.ಎನ್. ಗಾಜೀಗೌಡ್ರ ಅವರ ಮುಂದಾಳತ್ವದಲ್ಲಿ ಶಾಸಕ ಬಸವರಾಜ ಶಿವಣ್ಣನವರ ಅವರ ಮಾರ್ಗದರ್ಶನದಲ್ಲಿ ಈ ಕನಸು ನನಸಾಗುತ್ತಿದೆ. ಸೊಸೈಟಿಯವರು ಜಾಗ ನೀಡಿ, ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟಿರುವುದು ಶ್ವಾಘನೀಯ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕುರುಬ ಸಮಾಜದ ಮುಖಂಡ ಎಸ್.ಎಫ್.ಎನ್. ಗಾಜೀಗೌಡ್ರ ಮಾತನಾಡಿ, ಈ ನಾಡಿಗೆ ಭಕ್ತ ಕನಕದಾಸರ ಕೊಡುಗೆ ಅಪಾರ. ಅಂತಹ ಮಹಾನ್ ಪುರುಷ ಜನಿಸಿದ ಹಾವೇರಿಯ ಜಿಲ್ಲಾ ಕೇಂದ್ರದಲ್ಲಿ ಮೂರ್ತಿ ಇರಲಿಲ್ಲ. ಬಹುದಿನಗಳ ಪ್ರಯತ್ನದಂತೆ ಈಗ ಮೂರ್ತಿ ಪ್ರತಿಷ್ಠಾಪನೆಗೆ ಕಾಲ ಕೂಡಿಬಂದಿದೆ. ಸದ್ಯದಲ್ಲೇ ಮೂರ್ತಿ ಪ್ರತಿಷ್ಠಾಪಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದರು.

ಎಂಟೂವರೆ ಅಡಿ ಎತ್ತರದ ಕಂಚಿನ ಮೂರ್ತಿ ಇದಾಗಿದೆ. ಮೂರ್ತಿ ಪ್ರತಿಷ್ಠಾಪನೆಗೆ ತಗುಲುವ ವೆಚ್ಚವನ್ನು ಸಮಾಜದ ಜನರು ದೇಣಿಗೆ ಮೂಲಕ ನೀಡುತ್ತಿದ್ದಾರೆ. ವೃತ್ತದ ಅಭಿವೃದ್ಧಿಗಾಗಿ ಪ್ರಾಧಿಕಾರದಿಂದ 20 ಲಕ್ಷ ರು. ಅನುದಾನ ನೀಡಲಾಗುತ್ತಿದ್ದು, ಸದ್ಯದಲ್ಲೇ ಕಾಮಗಾರಿ ಸಹ ಶುರುವಾಗಲಿದೆ ಎಂದರು.


ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಸಮಾಜದ ಜನರು ಒಗ್ಗಟ್ಟಿನಿಂದ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದು ಸಂತಸದ ಸಂಗತಿ. ಮೂರ್ತಿ ಪ್ರತಿಷ್ಠಾಪನೆ ಜೊತೆಯಲ್ಲಿ ವೃತ್ತದ ಅಭಿವೃದ್ಧಿಯೂ ಆಗಲಿದೆ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿರುವುದು ಹೆಮ್ಮೆಯ ಸಂಗತಿ. ನಾನು ಸಹ ಧನ ಸಹಾಯ ಮಾಡಿದ್ದೇನೆ ಎಂದರು.

ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ನಾಗರಾಜ ಆನ್ವೇರಿ, ಉಪಾಧ್ಯಕ್ಷ ಅಶೋಕ ಬಣಕಾರ ಸಮಾಜದ ಮುಖಂಡರಾದ ಮಹದೇವಗೌಡ ಗಾಜೀಗೌಡ್ರ, ರಾಜೇಂದ್ರ ಹಾವೇರಿಯಣ್ಣನವರ, ಸಿದ್ದಣ್ಣ ಲಿಂಗಮ್ಮನವರ, ಹನುಮಂತಗೌಡ್ರ ಗಾಜೀಗೌಡ್ರ, ವಿರೂಪಾಕ್ಷಪ್ಪ ಹುಲ್ಲೂರು, ಕಾಂತೇಶ ಯಲ್ಲಾಪುರ, ಮಾಲತೇಶ ಘಂಟೇರ, ಪ್ರಕಾಶ ಮಜ್ಜಗಿ, ಪರಶುರಾಮ ಪಾಟೀಲ, ವಿಜಯಕುಮಾರ ಮುದಕಣ್ಣನವರ, ಪರಮೇಶ್ವರಪ್ಪ ಶಿವಣ್ಣನವರ, ಬಸವಣ್ಣ ಕಂಬಳಿ, ಶಾಂತಾಬಾಯಿ ಶಿರೂರ, ಅಶೋಕ ಮುದಕಣ್ಣನವರ ಹಾಗೂ ಇತರರು ಇದ್ದರು.