ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಂಬೇಡ್ಕರ್ ಚಿಂತನೆಗಳನ್ನು ಅರಾಧಿಸಿದರೆ ಸಾಲದು, ಬದುಕಿನಲ್ಲಿ ಅಚರಣೆಗೆ ತರಬೇಕು ಎಂದು ಮೈಸೂರಿನ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ಘಟಕದ ಎಸ್ಟಿ, ಎಸ್ಟಿ ಅಧಿಕಾರಿಗಳು ಮತ್ತು ನೌಕರರ ಸಮನ್ವಯ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಅಂಬೇಡ್ಕರ್ ಜಯಂತಿ ಅಂದಾಕ್ಷಣ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದು, ದೀಪ ಬೆಳಗಿಸುವುದು, ಭಾಷಣ ಮಾಡುವುದು ಮಾತ್ರವೇ ಅಲ್ಲ, ಅವರು ಹೇಳಿದ ಮಾತುಗಳನ್ನು ದಲಿತ ಸಮುದಾಯ ನಿಜಕ್ಕೂ ಕಾರ್ಯಗತಕ್ಕೆ ತಂದಾಗ ಮಾತ್ರ ಅವರ ಜಯಂತಿಗೆ ಅರ್ಥ ಬರಲಿದೆ ಎಂದರು.ಕಾರ್ಯಕ್ರಯ ಉದ್ಘಾಟಿಸಿದ ಚಿಂತಕ ಹಾಗೂ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್ ಮಾತನಾಡಿ, ಅಂಬೇಡ್ಕರ್ ಅವರಂತಹ ಒಬ್ಬ ಮಹಾನ್ ವ್ಯಕ್ತಿಯನ್ನು ಒಂದು ಸಮುದಾಯಕ್ಕೆ ಸಿಮೀತಗೊಳಿಸಲು ಯತ್ನಿಸಿದ ದುಷ್ಟ ಶಕ್ತಿಗಳು, ಇಂದು ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನೇ ನಿಸ್ತೇಜಗೊಳಿಸುವ ಹುನ್ನಾರ ನಡೆಸಿವೆ. ಇದು ದಲಿತರಿಗೆ ಮಾತ್ರವಲ್ಲ, ಬಹುತ್ವಕ್ಕೆ ಭಾರತಕ್ಕೆ ಒದಗಿದ ಬಹುದೊಡ್ಡ ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ, ಈ ದೇಶದಲ್ಲಿ ದಲಿತರ ಸ್ಥಿತಿ ಬದಲಾಗಿಲ್ಲ. ಒಂದು ಕಾಲದಲ್ಲಿ ದಲಿತರಿಗೆ ಅಕ್ಷರ ಕಲಿಯುವುದನ್ನೇ ನಿರಾಕರಿಸಿದ್ದ ಜನರು, ಈಗಲೂ ತಮ್ಮಶೋಷಣೆಯ ಹೊಸ ಅಸ್ತ್ರಗಳ ಮೂಲಕ ನಮ್ಮನ್ನು ಆಳುತ್ತಲೇ ಇದ್ದಾರೆ. ಆದರೆ ಅಂಬೇಡ್ಕರ್ ಅವರ ಶ್ರಮದ ಫಲವಾಗಿ ಸಿಕ್ಕ ಸಂವಿಧಾನದಡಿ ನಮ್ಮಂತವರು ಪೆನ್ನು ಹಿಡಿಯುವಂತಾಗಿದೆ ಎಂದರು.ವೇದಿಕೆಯಲ್ಲಿ ಕೆಎಸ್ ಆರ್ ಟಿಸಿ ಶಿವಮೊಗ್ಗ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್. ನವೀನ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಪ್ರೊ. ರಾಚಪ್ಪ, ಕಾರ್ಮಿಕ ಮುಖಂಡ ಪ್ರಕಾಶ್, ಅಂಬೇಡ್ಕರ್ ಸ್ಟಡಿ ಸೆಂಟರ್ ನ ಚಂದ್ರಪ್ಪ, ಸಿಪಿಐ ಮುಖಂಡ ರಾಧಾ ಸುಂದರೇಶ್, ಕೆಎಸ್ ಆರ್‌ಟಿಸಿ ಶಿವಮೊಗ್ಗ ವಿಭಾಗದ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಮಹೇಶ್ವರಪ್ಪ, ಕಾರ್ಮಿಕಕಲ್ಯಾಣಾಧಿಕಾರಿ ಅಂಬಿಕಾ , ಮುಖಂಡ ಬಶೇಖರ್ ನಾಯ್ಕ್, ಕೆಂಪುಸಿದ್ದರಾಜು, ಮೋಹನ್ ಇದ್ದರು.