ಸಾರಾಂಶ
ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಅಭಿಪ್ರಾಯ । ಮಾನವೀಯ ಗುಣಗಳ ಅಳವಡಿಸಿಕೊಳ್ಳಿ
ಕನ್ನಡಪ್ರಭ ವಾರ್ತೆ ದಾವಣಗೆರೆಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ರಾಷ್ಟ್ರಕವಿ ಕುವೆಂಪುರವರ ಚಿಂತನೆಗಳ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿಶ್ವಮಾನವರಾಗಲು ಸಾಧ್ಯ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜನರು ವೈಚಾರಿಕವಾಗಿ ಯೋಚಿಸದೆ ಮೌಢ್ಯತೆ ಕಡೆಗೆ ವಾಲುತ್ತಿದ್ದಾರೆ. ದೇಶದಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಗಳ ವೈಭವೀಕರಿಸದೆ ಶಾಲಾ-ಕಾಲೇಜು ಹಾಗೂ ಆಸ್ಪತ್ರೆಗಳ ವೈಭವಿಕರಿಸಿದಾಗ ಮಾತ್ರ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ. ಕುವೆಂಪುರನ್ನು ಕೇವಲ ದಿನಾಚರಣೆಗೆ ಮಾತ್ರ ಸೀಮಿತಗೊಳಿಸದೇ ಅವರ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಒಬ್ಬರು ಇನ್ನೊಬ್ಬರ ಮೇಲೆ ದ್ವೇಷ ಸಾಧಿಸುವುದರಿಂದ ವಿಶ್ವ ಮಾನವರಾಗಲು ಸಾಧ್ಯವಿಲ್ಲ, ಬದಲಾಗಿ ಜೀವನದಲ್ಲಿ ಮಾನವೀಯತೆ ಗುಣಗಳ ಅಳವಡಿಸಿಕೊಂಡು ದೊಡ್ಡತನ ತೋರ್ಪಡಿಸಬೇಕಾಗಿದೆ. ಯಾವ ದೇಶ ಮಾನವೀಯತೆಯ ಗುಣಗಳ ಅಳವಡಿಸಿಕೊಂಡಿದೆಯೊ ಆ ದೇಶ ಪ್ರಪಂಚದಲ್ಲಿ ಉನ್ನತ ಸ್ಥಾನವನ್ನೇರಲಿದೆ ಎಂದರು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾತನಾಡಿ, ಕುವೆಂಪುರವರು ರಾಜ್ಯ ಹಾಗೂ ದೇಶ ಕಂಡ ಶ್ರೇಷ್ಠ ಕವಿಯಾಗಿದ್ದು, ಕನ್ನಡ ಭಾಷೆ, ಕನ್ನಡ ನಾಡು ಹಾಗೂ ಕನ್ನಡಿಗರಿಗೆ ಸಾಹಿತ್ಯದ ಮೂಲಕ ಅದ್ಭುತ ಕೊಡುಗೆ ನೀಡಿದ್ದಾರೆ. ಮೊಟ್ಟ ಮೊದಲನೇ ಜ್ಞಾನಪೀಠ ಪ್ರಶಸ್ತಿ ಕುವೆಂಪುರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಸಂದಿರುವುದು ಕನ್ನಡ ಸಾಹಿತ್ಯದ ಹಿರಿಮೆಯಾಗಿದೆ. ಅವರು ರಚಿಸಿರುವ ಕಾವ್ಯ, ಕೃತಿ, ನಾಟಕ, ವಿಮರ್ಶೆಗಳಲ್ಲಿ ವಿಜ್ಞಾನ, ತತ್ವಜ್ಞಾನ, ಮನೋವಿಜ್ಞಾನ ಹಾಗೂ ಜೀವ ವಿಜ್ಞಾನ ಕಾಣಬಹುದು. ನಾಡಿನ ಸಂಸ್ಕೃತಿಯ ಹಿರಿಮೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಶೀರ್ಷಿಕೆಯನ್ನು ಕುವೆಂಪುರವರ ಕಾವ್ಯದಲ್ಲಿ ಕಾಣಬಹುದು. ಜನರು ಹುಟ್ಟುತ್ತಲೇ ವಿಶ್ವಮಾನವರಾಗಿ ಸಾಯುವಾಗ ಅಲ್ಪ ಮಾನವರಾಗುವುದಕ್ಕಿಂತ ತಮ್ಮ ಆಚರಣೆಗಳಲ್ಲಿ ಮೌಢ್ಯತೆಗಳನ್ನು ಕೈಬಿಟ್ಟು ವೈಚಾರಿಕವಾಗಿ ಚಿಂತಿಸಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಪಾಲಿಕೆ ಉಪ ಮಹಾಪೌರರಾದ ಯಶೋಧಾ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಷಣ್ಮುಖಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಪತ್ರಕರ್ತ ಬಿ.ಎನ್ ಮಲ್ಲೇಶ್, ಅವರಗೆರೆ ರುದ್ರಮುನಿ ಉಪಸ್ಥಿತರಿದ್ದರು. ಕುವೆಂಪುರವರು ಮೌಢ್ಯತೆಗಳನ್ನು ನಿರ್ಮೂಲನೆ ಮಾಡಲು ಹಲವಾರು ವೈಚಾರಿಕ ಕಾದಂಬರಿ, ಕಾವ್ಯ ಹಾಗೂ ವಿಮರ್ಶಕ ರಚನೆಗಳನ್ನು ರಚಿಸಿದರೂ ಪೋಷಕರು ಮಕ್ಕಳನ್ನು ಮೌಢ್ಯತೆ ಕಡೆಗೆ ತಳ್ಳುತ್ತಿರುವುದು ವಿಪರ್ಯಾಸದ ಸಂಗತಿ.
ಕೆ.ಎಸ್.ಬಸವಂತಪ್ಪ, ಶಾಸಕ........