ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪ್ರತಿಯೊಂದನ್ನು ಟೀಕಿಸುವ ಭರದಲ್ಲಿ ಶಾಸಕರು ಹಾಗೂ ಶಾಸಕ ಸ್ಥಾನವನ್ನು ಪದೇ ಪದೇ ಟೀಕಿಸುವುದು ಸಮಂಜಸವಲ್ಲ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರಿಗೆ ಸಲಹೆ ನೀಡಿದರು.ಪಟ್ಟಣದ ತಾಪಂನ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎರಡು ಬಾರಿ ಶಾಸಕನಾಗಿ, ಒಂದು ಬಾರಿ ಸಚಿವನಾಗಿದ್ದೇನೆ. ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಮೊದಲು ತಮ್ಮ ಆಡಳಿತದಲ್ಲಿ ಸಾಧನೆ ಏನು ಎನ್ನುವುದನ್ನು ಜನರಿಗೆ ತಿಳಿಸಲಿ ಎಂದು ಸಲಹೆ ನೀಡಿದರು.
ಕೆಆರ್ ಎಸ್ ಅಣೆಕಟ್ಟೆ ತುಂಬಿದರೂ ಮಂಡ್ಯ ಜಿಲ್ಲೆಯಲ್ಲಿ ಬರಗಾಲ ಮುಂದುವರಿದ ಪರಿಣಾಮ ಗರಿಷ್ಠ ನೀರನ್ನು ಕಾಲುವೆಗೆ ಹರಿಸಿದರೂ ನೀರಿನ ಸಮಸ್ಯೆ ಎದುರಾಯಿತು. ಮಳವಳ್ಳಿಯಿಂದ ಕೆಆರ್ ಎಸ್ ಅಣೆಕಟ್ಟೆಯವರೆಗೆ ಮೂರು ಬಾರಿ ಅಧಿಕಾರಿಗಳೊಂದಿಗೆ ನಾಲೆ ಪರಿಶೀಲನೆ ನಡೆಸಲಾಯಿತು. ಕೊನೆ ಭಾಗಕ್ಕೆ ಬರಬೇಕಾಗಿದ್ದ ನೀರನ್ನು ಮೇಲ್ಭಾಗದ ರೈತರು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದರೂ ಯಾರು ಪ್ರಶ್ನೆ ಮಾಡಿಲ್ಲ ಎಂದರು.ಮಂಡ್ಯ ಜಿಲ್ಲೆಯ ಜನ ನೀರು ಕೇಳಲು ಹೋದಾಗ ಕೆಆರ್‌ಎಸ್ ಕೀ ನನ್ನ ಬಳಿ ಇಲ್ಲ, ಕೇಂದ್ರದವರ ಕೈಯಲ್ಲಿದೆ ಎಂದಿದ್ದ ನಿಮ್ಮ ನಾಯಕರ ಮಾತನ್ನು ಮರೆತು ಈಗ ಕೆರೆಗಳ ಬಳಿ ನಿಂತು ನೀರು ಬಿಟ್ಟಿಲ್ಲ ಎಂದು ಕೂಗು ಹಾಕುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಮಳವಳ್ಳಿ ತಾಲೂಕಿಗೆ ಒಂದೇ ಒಂದು ನೀರಾವರಿ ಯೋಜನೆ, ಏತ ನೀರಾವರಿ ಯೋಜನೆ ತರದೇ ಕೇವಲ ಭರವಸೆಗಳನ್ನು ಕೋಡುತ್ತಾ ಬಂದವರು ಹಾಗೂ ಮಣ್ಣಿನ ಮಕ್ಕಳೆಂದು ಬೊಂಬಡಿ ಬಾರಿಸುವ ಇವರ ನಾಯಕರು ಇಗ್ಗಲೂರು ಬಲದಂಡೆ ಯೋಜನೆಯನ್ನು ಜಾರಿಗೆ ತಂದು ಈ ಭಾಗದ ಕೆರೆಗಳನ್ನು ತುಂಬಿಸಿಯೇ ನಂತರ ಹಲಗೂರಿಗೆ ಕಾಲಿಡುವುದಾಗಿ ಶಪಥ ಮಾಡಿದ್ದವರೂ ಯಾವ ಕೆಲಸವನ್ನು ಮಾಡದೆ ಜನರನ್ನು ವಂಚಿಸಿದ್ದಾರೆ ಎಂದು ದೂರಿದರು.ಪಟ್ಟಣದ ಕುಡಿಯುವ ನೀರು ಪೂರೈಕೆ ಯೋಜನೆ, ಕಿರುಗಾವಲು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ, ಪೂರಿಗಾಲಿ ಹನಿ ನೀರಾವರಿ ಯೋಜನೆಗಳನ್ನು ಮಣ್ಣು ಪಾಲು ಮಾಡಿದ್ದ ಮಹಾನುಭಾವ, ಕೆರೆಗಳಿಗೆ ಬಾಗಿನ ಅರ್ಪಿಸುವ ಹಿಂದಿನ ದಿನ ನನ್ನನ್ನು ಟೀಕಿಸಿ ವೀಡಿಯೋ ಹರಿಬಿಟ್ಟಿರುವುದು ಈತನ ಸಣ್ಣತನಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಗುದ್ದಾಡಿ ಕ್ಷೇತ್ರಕ್ಕೆ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಯಾರಿಂದಲೂ ಹೇಳಿಸಿಕೊಳ್ಳಬೇಕಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಎಷ್ಟು ಅನುದಾನ ಬಂದಿದೆ ಎನ್ನುವುದನ್ನು ಮಾಹಿತಿ ಹಕ್ಕು ಹಾಕಿ ಪಡೆದುಕೊಳ್ಳಲಿ ಎಂದು ಸಲಹೆ ನೀಡಿದರು.ಪಟ್ಟಣದ ಪೇಟೆ ವೃತ್ತದಲ್ಲಿ ನೀರು ತುಂಬಿಕೊಂಡು ಹತ್ತಾರು ಅಂಗಡಿ ಮಳಿಗೆಗಳಿಗೆ ನೀರು ನುಗ್ಗುತ್ತಿದ್ದುದ್ದನ್ನು ಐದು ವರ್ಷಗಳ ಕಾಲ ಸರಿಪಡಿಸಲಾಗದೇ ಕಂದೇಗಾಲ ಕೆರೆಗೆ ಒಂದು ಗೇಟ್ ವಾಲ್ ಹಾಕಿ ನೀರು ಸೋರಿಕೆ ತಡೆಯಲಾಗದ ಶೂರ ಅದೇ ಕೆರೆಯಲ್ಲಿ ನಿಂತು ನನ್ನ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.