ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸರ್ಕಾರದಿಂದ ಕೊಡಗಿಗೆ ಒದಗಿಬಂದ ಸೌಲಭ್ಯವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕೆ ಹೊರತು ಅದನ್ನು ಯಾವುದೇ ಕಾರಣಕ್ಕೂ ಕೈಬಿಡುವ ಕೆಲಸ ಆಗಬಾರದು ಎಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆದ ಕೊಡಗು ವಿಶ್ವವಿದ್ಯಾಲಯದ ಸಾಧಕ-ಬಾಧಕ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಸರ್ಕಾರ ರಾಜ್ಯದಲ್ಲಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಚಿಂತನೆ ನಡೆಸಿದ್ದು, ಅದರಲ್ಲಿ ಕೊಡಗು ವಿಶ್ವವಿದ್ಯಾಲಯವೂ ಒಂದು. ನೂರಾರು ಎಕರೆ ಪ್ರದೇಶದಲ್ಲಿ ಈ ವಿವಿ ಸ್ಥಾಪನೆಯಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವ ಸುಸಜ್ಜಿತ ವ್ಯವಸ್ಥೆ ಹೊಂದಿರುವ ವಿವಿಯನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ.ಈ ಹಿಂದೆ ಸರ್ಕಾರ ಎಲ್ಲಾ ವಿಶ್ವವಿದ್ಯಾಲಯಗಳಿಗೆ 2 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಅನುದಾನವನ್ನು ನೀಡದೆ ವಿವಿಯನ್ನು ಮುಚ್ಚುವ ಸರ್ಕಾರದ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಆತಂಕ ಹೆಚ್ಚಾಗಲಿದೆ ಎಂದರು.
ವಿಶ್ವವಿದ್ಯಾಲಯ ಉಳಿಯಬೇಕು: ಶಿಕ್ಷಣ ತಜ್ಞ ಬಾಚರಣಿಯಂಡ ಪಿ.ಅಪ್ಪಣ್ಣ ಮಾತನಾಡಿ, ಕೊಡಗಿನ ಪ್ರಾದೇಶಿಕ, ಬೌಗೋಳಿಕ, ಸಂಸ್ಕೃತಿ, ಆಚಾರ, ವಿಚಾರಗಳು ತಳಮಟ್ಟದಿಂದಲೇ ಸಂಶೋಧನೆಯಾಗಬೇಕು. ಆ ನಿಟ್ಟಿನಲ್ಲಿ ಕೊಡಗು ವಿಶ್ವವಿದ್ಯಾಲಯ ಉಳಿಯಬೇಕು ಎಂದರು.ಹಿಂದೆ ಧಾರ್ಮಿಕ ವಿಚಾರಕ್ಕೆ, ಅಕ್ಷರಭ್ಯಾಸಕ್ಕೆ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಆದರೆ ಇಂದು ಸಂಶೋಧನೆಯಲ್ಲಿ ವಿಶ್ವವಿದ್ಯಾಲಯಗಳು ಮುಂಚುಣಿಯಲ್ಲಿದೆ. ಆದ್ದರಿಂದ ಸರ್ಕಾರದಿಂದ ವಿವಿಧ ಧನಸಹಾಯ, ಪ್ರೋತ್ಸಾಹ ದೊರೆತಲ್ಲಿ ಮಾತ್ರ ಸಂಶೋಧನೆ ನಡೆಸಲು ಸಾಧ್ಯ. ಆ ನಿಟ್ಟಿನಲ್ಲಿ ಕೊಡಗು ವಿವಿ ಉಳಿವಿಗೆ ಎಲ್ಲರೂ ಒಮ್ಮನಸ್ಸಿನಿಂದ ಹೋರಾಟ ಮಾಡಿ ಸರ್ಕಾರವನ್ನು ಎಚ್ಚರಿಸಬೇಕು ಎಂದು ಹೇಳಿದರು.
ಗೊಂದಲದ ಹೇಳಿಕೆ ಬೇಡ:: ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೊಡಗು ವಿಶ್ವವಿದ್ಯಾಲಯವನ್ನು ಮಂಗಳೂರು ವಿಶ್ವವಿದ್ಯಾಲಯಕ್ಕೆ ವಿಲೀನಗೊಳಿಸಲಾಗುವುದೆಂದು ಹೇಳಲಾಗುತ್ತಿದೆ. ಆದರೆ ಮಂಗಳೂರು ವಿವಿಯ ಪರಿಸ್ಥಿತಿ ಏನು ಎಂಬುದನ್ನು ಅವಲೋಕ ಮಾಡಬೇಕಾಗಿದೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಸುಲಭದ ಶಿಕ್ಷಣ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಕೊಡಗು ವಿಶ್ವವಿದ್ಯಾಲಯವನ್ನು ಮುಂದುವರೆಸುವ ಪ್ರಯತ್ನ ನಡೆಯಬೇಕೆ ಹೊರತು, ವಿವಿಗಳಲ್ಲಿ ದಾಖಲಾತಿ ಆರಂಭವಾಗುತ್ತಿರುವ ಸಂದರ್ಭದಲ್ಲಿ ಗೊಂದಲದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ರಾಜ್ಯ ಸರ್ಕಾರದಿಂದ ಅನುದಾನ ನೀಡದಿದ್ದರೂ ಪರವಾಗಿಲ್ಲ, ಕೊಡಗು ವಿವಿಯನ್ನು ಉಳಿಸಿಕೊಂಡು ಗೊಂದಲ ಹೇಳಿಕೆಗಳಿಗೆ ಕಡಿವಾಣ ಹಾಕಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಗೆ ನಂಬರ್ ಒನ್ ವಿಶ್ವವಿದ್ಯಾಲಯ ಎನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.ಕೊಡಗು ವಿಶ್ವವಿದ್ಯಾಲಯದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೃಷ್ಣೆ ಗೌಡ ಮಾತನಾಡಿ, ಜಿಲ್ಲೆಗೊಂದು ವಿಶ್ವವಿದ್ಯಾಲಯ ಆಗಬೇಕು ಎಂಬ ನಿಟ್ಟಿನಲ್ಲಿ ಕೊಡಗಿನಲ್ಲಿ ಕೊಡಗು ವಿಶ್ವವಿದ್ಯಾಲಯ ಆರಂಭಗೊಂಡಿದ್ದು, 10 ಶಿಕ್ಷಣ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಉತ್ತಮ ಸಂಸ್ಥೆಯಾಗಿ ನಡೆಯುತ್ತಿದೆ. ಆದರೆ ಕೆಲವರು ಉಪಮುಖ್ಯಮಂತ್ರಿಗಳನ್ನು ಪದೇ ಪದೇ ಭೇಟಿ ಮಾಡುವ ಮೂಲಕ ಸರ್ಕಾರಕ್ಕೆ ತಪ್ಪು ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕೊಡಗು ಜಿಲ್ಲೆ ಹಿಂದಿನಿಂದಲೂ ಶೈಕ್ಷಣಿಕವಾಗಿ ಬೇರೆ ಬೇರೆ ಹಂತದಲ್ಲಿ ಪ್ರಗತಿಯಲ್ಲಿದೆ. ಕೊಡಗು ಶೈಕ್ಷಣಿಕ ಜಿಲ್ಲೆ ಎಂದು ಹೇಳಿಕೊಂಡಿದ್ದರೂ ಹಲವರು ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ ಕೆಲವು ವರ್ಷಗಳಿಂದ ಉನ್ನತ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆ ಹಾಗೂ ಆಡಳಿತಾತ್ಮಕವಾಗಿ ಜಿಲ್ಲೆಗೆ ವಿಶ್ವವಿದ್ಯಾಲಯ ಬೇಕು ಎಂಬ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೆ ನೂತನ ಸರ್ಕಾರದಿಂದ ಲಭಿಸಿದೆ. ಇದೀಗ ವಿವಿಗೆ ಬೇಕಾದ ಮೂಲಭೂತ ಸೌಲಭ್ಯಗಳು ದೊರೆತಿದೆ. ಆದರೂ ಒಂದು ಬಾರಿ ಕೊಟ್ಟಿದ್ದನ್ನು ಹಿಂದೆ ಪಡೆಯುವುದು ಯಾಕೆ ಎಂದು ಪ್ರಶ್ನಿಸಿದರು.ಉಪನ್ಯಾಸಕರ ಕೊರತೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ ಮಾತನಾಡಿ, ಈಗಾಗಲೇ ಸಂಪುಟದ ಉಪಸಮಿತಿಗಳನ್ನು ರಚಿಸಿ ಕೊಡಗು ವಿಶ್ವವಿದ್ಯಾಲಯದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ವರದಿ ನೀಡುವಂತೆ ಹೇಳಲಾಗಿದೆ. ಆದರೆ ಈಗಾಗಲೇ ಜಿಲ್ಲೆಯಲ್ಲಿರುವ ಕಾರ್ಯಪ್ಪ ಕಾಲೇಜಿನಲ್ಲಿ ಕೆಲವು ವಿಷಯವಾರು ಕೋರ್ಸುಗಳು ಮುಚ್ಚಿಹೋಗಿದೆ. ಹೀಗಿರುವಾಗ ಇಂದಿನ ಆಧುನಿಕರಣದ ವ್ಯವಸ್ಥೆಗೆ ತಕ್ಕಂತೆ ಉಪನ್ಯಾಸಕರ ಕೊರತೆ ಇದೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕ್ಷೀಣತೆ, ಮಾರುಕಟ್ಟೆಯಲ್ಲಿರುವ ಮೌಲ್ಯಧಾರಿತ ಶಿಕ್ಷಣಕ್ಕೆ ಒತ್ತು, ಉದ್ಯೋಗಾವಕಾಶಗಳು, ಕೈಗೆಟುವ ಶಿಕ್ಷಣ ನೀಡವಂತಾಗಬೇಕು. ಅಲ್ಲದೇ ಕೊಡಗು ವಿವಿ ಇದೀಗ ಪ್ರಾರಂಭವಾಗಿದ್ದರಿಂದ ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಬೇರೆ ವಿಶ್ವವಿದ್ಯಾಲಯದಲ್ಲಿ ಅವಕಾಶ ಪಡೆಯಲು ಕಷ್ಟವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಒಂದಷ್ಟು ಕಾಲವಕಾಶ ಅಗತ್ಯ ಇದೆ ಎಂದರು.
ಸಮಾಜ ಸೇವಕ ನಾಪಂಡ ಮುತ್ತಪ್ಪ ಮಾತನಾಡಿ, ಸದ್ಯದಲ್ಲಿ ಮುಚ್ಚುವ ಮತ್ತು ವಿಲೀನಗೊಳಿಸುವ ಯಾವುದೇ ಪ್ರಕ್ರಿಯೆ ಆಗಲ್ಲ. ಇದಕ್ಕೆ ಬೇಕಾದ ಅನುದಾನವನ್ನು ಓದಗಿಸುವ ಕೆಲಸ ಸರ್ಕಾರ ಮಾಡಬೇಕು. ಯಾವ ಸರ್ಕಾರ ಇದ್ದರೂ ಕೊಡಗಿಗೆ ಬಂದಿದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು.ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಮಾತನಾಡಿ, ಯಾವುದೇ ಕಾರಣಕ್ಕೂ ಕೊಡಗಿನ ವಿವಿ ಮುಚ್ಚದಂತೆ ಮುಚ್ಚಲು ಬಿಡುವುದಿಲ್ಲ. ಯುವ ಜನರ ಓದಿಗೆ ಅಗತ್ಯವಾದ ವಿವಿ ಕಳೆದುಕೊಂಡರೆ ಭವಿಷ್ಯದಲ್ಲಿ ವಿದ್ಯಾರ್ಥಿಗಳು ದೂರದ ಊರಿಗೆ ತೆರಳಬೇಕಾಗತ್ತದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದರಿಂದ ಹೆಚ್ಚಿನ ಹೊರೆಯಾಗಲಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡ ಕೊಡಗಿನ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ಬಗ್ಗೆ ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಕೊಡಗು ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮ್ಮದ್ ಮಾತನಾಡಿ, ಖಾಸಗಿ ವಿವಿಗಳಿಗೆ ಸಿಗುವ ಪ್ರೋತ್ಸಾಹ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಏಕೆ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು.ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್ ಮತ್ತು ಕೆ.ಎಸ್.ಮೂರ್ತಿ,
ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿದರು.