ಜಾತಿಗಣತಿ ಬಗ್ಗೆ ಸರಿಯಾಗಿ ಅರಿಯದೇ ಟೀಕೆ ಸಲ್ಲ: ಮಾಯಕೊಂಡ ಶಾಸಕ ಬಸವಂತಪ್ಪ

| Published : Apr 19 2025, 12:40 AM IST

ಜಾತಿಗಣತಿ ಬಗ್ಗೆ ಸರಿಯಾಗಿ ಅರಿಯದೇ ಟೀಕೆ ಸಲ್ಲ: ಮಾಯಕೊಂಡ ಶಾಸಕ ಬಸವಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಯಾರೇ ಮಾತನಾಡಿದರೂ ಆರೋಗ್ಯಕರವಾಗಿ ಮಾತನಾಡಲಿ. ಡಾ.ಶಾಮನೂರು ಶಿವಶಂಕರಪ್ಪ ಅವರು ಹಿರಿಯರಿದ್ದು, ಜಾತಿಗಣತಿ ಬಗ್ಗೆ ಮಾತನಾಡಲಿ. ಅಂತಹ ಹಿರಿಯರು ಮಾತನಾಡಿದರೆ ಅರ್ಥವಿರುತ್ತದೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ.

- ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಿರಿಯರು, ಅವರ ಮಾತಲ್ಲಿ ಅರ್ಥವಿದೆ ।

- - - - ಡಾ.ಅಂಬೇಡ್ಕರ್ ದೇಶದಲ್ಲಿ ಪ್ರತಿಯೊಬ್ಬರಿಗೂ ಮಾತನಾಡಲು ಅವಕಾಶ ಕೊಟ್ಟಿದ್ದಾರೆ

- ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಧ್ಯಯನದ ಸಮೀಕ್ಷೆಯಿದು, ಜಾತಿ ಜನಗಣತಿ ಅಲ್ಲ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಯಾರೇ ಮಾತನಾಡಿದರೂ ಆರೋಗ್ಯಕರವಾಗಿ ಮಾತನಾಡಲಿ. ಡಾ.ಶಾಮನೂರು ಶಿವಶಂಕರಪ್ಪ ಅವರು ಹಿರಿಯರಿದ್ದು, ಜಾತಿಗಣತಿ ಬಗ್ಗೆ ಮಾತನಾಡಲಿ. ಅಂತಹ ಹಿರಿಯರು ಮಾತನಾಡಿದರೆ ಅರ್ಥವಿರುತ್ತದೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಅಂಬೇಡ್ಕರ್ ದೇಶದಲ್ಲಿ ಪ್ರತಿಯೊಬ್ಬರಿಗೂ ಮಾತನಾಡಲು ಅವಕಾಶ ಕೊಟ್ಟಿದ್ದಾರೆ. ಜಾತಿ ಜನಗಣತಿಯಲ್ಲಿ ತಪ್ಪು ಏನು ಎಂಬುದನ್ನು ತಿಳಿದುಕೊಂಡು, ವಿರೋಧ ಮಾಡಬೇಕು ಎಂಬುದಷ್ಟೇ ನನ್ನ ಮನವಿ ಎಂದರು.

ಜಾತಿ ಜನಗಣತಿ ವರದಿಯಲ್ಲಿ ತಪ್ಪು ಎಲ್ಲಿ ಆಗಿದೆ, ಯಾವ ಸಮುದಾಯಕ್ಕೆ ಅನ್ಯಾಯ ಆಗಿದೆ ಎಂಬುದನ್ನು ತಿಳಿದುಕೊಂಡು ಮಾತನಾಡಬೇಕು. ಅಂಕಿ ಅಂಶಗಳನ್ನೇ ನೋಡದರೆ, ವರದಿ ಬಹಿರಂಗವಾಗದಿದ್ದರೂ ವರದಿಯಲ್ಲಿ ತಪ್ಪುಗಳಿವೆ ಎಂದರೆ ಹೇಗೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ನಿರ್ಣಯ ತೆಗೆದುಕೊಂಡರೂ, ಅದನ್ನು ಕಾರ್ಯರೂಪಕ್ಕೆ ತಂದ ಉದಾಹರಣೆ ಇವೆ ಎಂದು ಹೇಳಿದರು.

ಇದು ಜಾತಿ ಜನಗಣತಿಯಲ್ಲ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಧ್ಯಯನಕ್ಕಾಗಿ ಯಾರೆಲ್ಲಾ ಹಿಂದುಳಿದಿದ್ದಾರೆ ಎಂಬುದನ್ನು ಕೈಗೊಂಡಿದ್ದ ಸಮೀಕ್ಷೆಯಾಗಿದೆ. ಎಲ್ಲ ಲಿಂಗಾಯತರಲ್ಲಿ, ಪರಿಶಿಷ್ಟ ಜಾತಿ- ಪಂಗಡಗಳಲ್ಲಿ, ಹಿಂದುಳಿದ ವರ್ಗಗಳಲ್ಲೂ ಅತ್ಯಂತ ಕಡುಬಡವರಿದ್ದಾರೆ. ಅಂತಹವರಿಗೆ ಈ ವರದಿಯಿಂದ ಅನುಕೂಲವಾಗುತ್ತದೆ ಎಂದು ಸರ್ಕಾರದ ಜಾತಿ ಜನಗಣತಿ ವರದಿಯನ್ನು ಶಾಸಕ ಬಸವಂತಪ್ಪ ಸಮರ್ಥಿಸಿಕೊಂಡರು.

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ವಿಚಾರದಲ್ಲಿ ಕೆಲವೊಂದಿಷ್ಟು ಗೊಂದಲಗ‍ಳಿವೆ. ಅದರ ಬಗ್ಗೆ ಎಲ್ಲರ ಜೊತೆಗೆ ಕುಳಿತು, ಚರ್ಚಿಸಿ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ತರುತ್ತಾರೆ. ಅದರ ಬಗ್ಗೆ ಯಾವುದೇ ಅನುಮಾನಗಳೂ ಬೇಡ ಎಂದು ಬಸವಂತಪ್ಪ ಹೇಳಿದರು.

- - -

(ಬಾಕ್ಸ್‌)

* ಜಾತಿ ಜನಗಣತಿ ಬೇಡಿಕೆ ಇಡ್ಬೇಕಿರೋದು ಶೋಷಿತರೇ ಹೊರತು ಬಲಾಢ್ಯರಲ್ಲ: ಜಿಬಿವಿ

ದಾವಣಗೆರೆ: ಲಿಂಗಾಯತ, ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡಲು ಆಗುತ್ತದಾ ಎಂಬುದಾಗಿ ಕಾಂಗ್ರೆಸ್‌ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿರುವುದು ಸರಿಯಲ್ಲ ಎಂದು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಆಕ್ಷೇಪಿಸಿದ್ದಾರೆ.ರಾಜ್ಯದಲ್ಲಿ ಸದ್ಯ ಜಾತಿ ಗಣತಿ ವಿಚಾರವೇ ಬಹು ಚರ್ಚಿತವಾಗುತ್ತಿದೆ. ಆದರೆ, ಇದು ಜಾತಿಗಣತಿಯಲ್ಲ, ಎಲ್ಲ ಜಾತಿ, ಧರ್ಮದವರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಸಮೀಕ್ಷೆ ಎಂದು ಸರ್ಕಾರವೇ ಹೇಳಿದೆ. ಆದರೂ, ಪರ-ವಿರೋಧ ಚರ್ಚೆಯಾಗುತ್ತಿದೆ ಎಂದಿದ್ದಾರೆ.

ಜಾತಿ ಜನಗಣತಿ ಬೇಡಿಕೆ ಇಡಬೇಕಾಗಿರುವುದು ಶೋಷಿತರೇ ಹೊರತು, ಬಲಾಢ್ಯರಲ್ಲ. ಜಾತಿ ಜನಗಣತಿ ವರದಿ ಜಾರಿಗಾಗಿ ನಾವೆಲ್ಲರೂ ಸಂಘಟಿತರಾಗಿ ಹೋರಾಡಿ, ಹಕ್ಕುಗಳನ್ನು ಪಡೆಯಬೇಕು. ಜಾತಿಗಣತಿ ಜಾರಿಗೆ ಸಿದ್ದರಾಮಯ್ಯ ಮಾಡುತ್ತಿರುವ ಕೆಲಸ ಶ್ಲಾಘನೀಯ. ಇದು ಅನುಷ್ಠಾನ ಆಗಬೇಕು. ಬಹುಮತವಿರದಿದ್ದರೆ ಅಸಮಾನತೆ ಇದ್ದೇ ಇರುತ್ತದೆ. ಕೆಳಗಿರುವವರನ್ನು ಬೆಳೆಸುವ ಕೆಲಸ ಆಗುತ್ತಿಲ್ಲ. ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಕ್ಕಿದ್ದರೆ ನಾನು ಸಂಸದನಾಗುತ್ತಿದ್ದೆ ಎಂದಿದ್ದಾರೆ.ನಾವೇನೂ ಯಾರದ್ದೋ ಸ್ವಂತ ಆಸ್ತಿ ಕೇಳುತ್ತಿಲ್ಲ. ಕಾನೂನು ಬದ್ಧವಾಗಿ, ಸಂವಿಧಾನಬದ್ಧವಾಗಿ, ಪ್ರಜಾಪ್ರಭುತ್ವದಲ್ಲಿ ಸಮಾನ ಅವಕಾಶ ಸಿಗಬೇಕು ಎಂಬ ನಿಟ್ಟಿನಲ್ಲಿ ಜಾತಿಗಣತಿ ವರದಿ ಜಾರಿಗೆ ಕೇಳುತ್ತಿದ್ದೇವೆ ಎಂದು ವಿನಯಕುಮಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- - -

(ಬಾಕ್ಸ್‌)

* ಎಲ್ಲರೂ ಕಾದು ನೋಡೋಣ: ಡಾ.ಪ್ರಭಾ

ದಾವಣಗೆರೆ: ಜಾತಿಗಣತಿ ಬಗ್ಗೆ ಪ್ರತಿಯೊಬ್ಬ ಸಮಾಜದವರಿಗೂ ಆತಂಕವಿದೆ. ಹತ್ತು ವರ್ಷಗಳ ಹಿಂದೆ ಮಾಡಿದ ಜಾತಿ ಜನಗಣತಿ ವರದಿ ಇದಾಗಿದೆ. ಎಲ್ಲ ಸಮುದಾಯದ ಜನಸಂಖ್ಯೆಯೂ ಹೆಚ್ಚಾಗಿದೆ. ಈ ವರದಿ ಜಾರಿಗೊಳಿಸಲು ಮತ್ತೆ ಸಚಿವ ಸಂಪುಯದಲ್ಲಿ ಚರ್ಚೆಯಾಗಲಿದೆ. ಎಲ್ಲರೂ ಕಾದು ನೋಡೋಣ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಬಗ್ಗೆ ನಿನ್ನೆ ಸಂಜೆಯಷ್ಟೇ ಸಂಪುಟ ಸಭೆ ನಡೆದಿದೆ. ಎಲ್ಲ ಸಚಿವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಭೆಯಲ್ಲಿ ಆಳವಾಗಿ ಚರ್ಚಿಸಲು ಮತ್ತೆ ಸಮಯ ನಿಗದಿಯಾಗಿದೆ ಎಂದರು.

ಸಂಪುಟ ಸಭೆ ನಿರ್ಣಯ ಕಾಯ್ದಿರಿಸಲಾಗಿದೆ. ಜಾತಿಗಣತಿ ಸರಿಯಾಗಿ ಆಗಿಲ್ಲವೆಂದು ತುಮಕೂರು ಸಿದ್ಧಗಂಗಾ ಶ್ರೀಗಳು ಹೇಳಿದ್ದಾರೆ. ಎಲ್ಲ ಸಮಾಜದವರಿಗೂ ಜಾತಿಗಣತಿಯಿಂದ ಒಳ್ಳೆಯದಾಗಲಿ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲರೂ ವರದಿಗಾಗಿ ಕಾದುನೋಡೋಣ ಎಂದು ತಿಳಿಸಿದರು.- - -

-18ಕೆಡಿವಿಜಿ6: ಕೆ.ಎಸ್.ಬಸವಂತಪ್ಪ

-18ಕೆಡಿವಿಜಿ1: ವಿನಯಕುಮಾರ

-18ಕೆಡಿವಿಜಿ5: ಡಾ.ಪ್ರಭಾ ಮಲ್ಲಿಕಾರ್ಜುನ