ಸಾಗುವಳಿ ರೈತರಿಗೆ ನೋಟಿಸ್ ಕೊಡುತ್ತಿರುವುದು ಸರಿಯಲ್ಲ

| Published : Mar 16 2025, 01:52 AM IST

ಸಾರಾಂಶ

ಶಿವಮೊಗ್ಗ: ಜಿಲ್ಲೆಯಲ್ಲಿ ಸಾಗುವಳಿ ಪತ್ರ ಕೊಟ್ಟ ರೈತರಿಗೆ ನೋಟಿಸ್‌ ಕೊಡುತ್ತಿರುವುದು ಸರಿಯಲ್ಲ. ಅವರಿಗೆ ರಕ್ಷಣೆ ಕೊಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.

ಶಿವಮೊಗ್ಗ: ಜಿಲ್ಲೆಯಲ್ಲಿ ಸಾಗುವಳಿ ಪತ್ರ ಕೊಟ್ಟ ರೈತರಿಗೆ ನೋಟಿಸ್‌ ಕೊಡುತ್ತಿರುವುದು ಸರಿಯಲ್ಲ. ಅವರಿಗೆ ರಕ್ಷಣೆ ಕೊಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಕೇಸ್ ಹಾಕಿದ್ದಾರೆ. ಎಸಿ ಮೂಲಕ ನೋಟಿಸ್‌ ಕೊಡಲಾಗಿದೆ. ತಕ್ಷಣ ಬಂದು ಎಸಿ ಎದುರುಗಡೆ ಹಾಜರಾಗದಿದ್ದರೆ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವ ಬೆದರಿಕೆ ಕೂಡ ಹಾಕಲಾಗುತ್ತಿದೆ ಎಂದರು.ಅರಣ್ಯಾಧಿಕಾರಿಗಳು ಕೆಲವು ಕಡೆ ನೋಟಿಸ್ ನೀಡುವ ಮತ್ತು ರೈತರನ್ನು ತೆರವುಗೊಳಿಸುವ ದೃಶ್ಯಗಳನ್ನು ರೀಲ್ಸ್ ಮಾಡುವುದರ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವ ಮೂಲಕ ರೈತರಿಗೆ ಬೆದರಿಕೆವೊಡ್ಡುತ್ತಿದ್ದಾರೆ. ಆತಂಕ ಮೂಡಿಸುತ್ತಿದ್ದಾರೆ. ಹಿಂದೆ ಕಂದಾಯ ಇಲಾಖೆಯೇ ಎಲ್ಲಾ ರೈತರಿಗೆ ಸಾಗುವಳಿ ಚೀಟಿ, ಹಕ್ಕುಪತ್ರ ಸೇರಿದಂತೆ ಎಲ್ಲಾ ಸೌಲಭ ಕಲ್ಪಿಸಿದೆ. ಈಗ ಏಕಾಏಕಿ ಅರಣ್ಯಭೂಮಿ ಎಂದು ಜಮೀನು ತೆರವು ಮಾಡಲು ನೋಟಿಸ್ ನೀಡಿದರೆ ರೈತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.ಅರಣ್ಯ ಭೂಮಿಗೆ ಸಂಬಂಧಿಸಿ ಕಾನೂನು ಸಮಸ್ಯೆ ಇದೆ. ಕಾನೂನು ಪ್ರಕಾರ ಹೋಗಬೇಕು. ಆದರೆ ರೈತರ ಹಿತ ಬಲಿ ಕೊಡಬಾರದು. ಯಾವಾಗಲೂ ಆಗದೇ ಇದ್ದುದು ಈಗ ಆಗುತ್ತಿದೆ. ಇದನ್ನು ಸರ್ಕಾರಕ್ಕೆ ತಿಳಿಸಬೇಕು. ನ್ಯಾಯಾಲಯ ಅಧಿಕಾರಿಗಳನ್ನು ಪಾರ್ಟಿ ಮಾಡಿದ್ದರೂ ಮಾಹಿತಿ ಕೊಡಬೇಕು. ರೈತರಿಗೆ ಈ ರೀತಿ ನೋಟಿಸ್ ಕೊಟ್ಟರೆ ಬ್ಯಾಂಕ್ ಸಾಲ ಕೊಡಲ್ಲ. ರೈತರು ಬದುಕಲು ಆಗಲ್ಲ. ಪದೇ ಪದೇ ರೈತರಿಗೆ ತೊಂದರೆ ಕೊಟ್ಟರೆ ಬದುಕಲು ಆಗಲ್ಲ ಎಂದು ಆತಂಕ ವ್ಯಕ್ತಪಡಿಸಿದರು.3 ಎಕರೆಯವರೆಗೆ ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ನ್ಯಾಯಾಲಯದ ಆದೇಶವಿದೆ. ಆದರು ಯಾಕೆ ಈ ರೀತಿ ನೋಟಿಸ್ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು.ಜಿಲ್ಲಾಧಿಕಾರಿಗಳು ಮಾತನಾಡಿ, 2015ರಂದು ಪೂರ್ವ ಸಾಗುವಳಿ ಮಾಡಿರುವ ಸಣ್ಣ ಹಿಡುವಳಿ ರೈತರ ಒಕ್ಕಲೆಬ್ಬಿಸಬಾರದು ಎಂದು ಸರ್ಕಾರ ಹೇಳಿದೆ. ನ್ಯಾಯಾಲಯಕ್ಕೆ ಇದನ್ನು ತಿಳಿಸಬೇಕು. ಯಾರಿಗೆ ನೋಟಿಸ್ ಬಂದಿದೆ ಅವರು ಎಸಿ ಕೋರ್ಟ್‌ಗೆ ಹಾಜರಾದರೆ ಸಾಕು. ಬಾರದೇ ಇದ್ದವರು ಯೋಚನೆ ಮಾಡಬೇಕಾದ ಅಗತ್ಯ ಇಲ್ಲ ಎಂದು ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಅರಣ್ಯ ಉಪಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಪ್ರಮುಖರಾದ ವೀರಭದ್ರ ಪೂಜಾರಿ, ಮಂಗೋಟಿ ರುದ್ರೇಶ್, ಜಗದೀಶ್ ಹಾಗೂ ಭದ್ರಾವತಿ ಭಾಗದ ರೈತರು ಉಪಸ್ಥಿತರಿದ್ದರು.