ಜಮೀನು ಬಿಟ್ಟುಕೊಡಲ್ಲ ಎನ್ನಲು ನಿಮ್ಮಪ್ಪನ ಆಸ್ತಿಯಲ್ಲ

| Published : Oct 30 2024, 12:43 AM IST

ಜಮೀನು ಬಿಟ್ಟುಕೊಡಲ್ಲ ಎನ್ನಲು ನಿಮ್ಮಪ್ಪನ ಆಸ್ತಿಯಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಣ ಹೋದರು ವಕ್ಫ್ ಜಮೀನು ಬಿಟ್ಟುಕೊಡಲ್ಲ ಎಂಬ ಸಚಿವ ಜಮೀರ್ ಹೇಳಿಕೆಗೆ ಶಿವಮೊಗ್ಗದಲ್ಲಿ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಟ್ಟುಕೊಡಲ್ಲ ಎನ್ನಲು ಇದು ನಿಮ್ಮಪ್ಪನ ಆಸ್ತಿಯಲ್ಲ ಎಂದು ಕಿಡಿಕಾರಿದ್ದಾರೆ.

- ನಿಮ್ಮ ಬಂಗಲೆಯನ್ನು ವಕ್ಫ್ ಬೋರ್ಡಿಗೆ ಕೊಡುತ್ತೀರಾ ಎಂದು ಪ್ರಶ್ನಿಸಿ ಸಚಿವ ಜಮೀರ್ ಖಾನ್ ವಿರುದ್ಧ ಹರಿಹಾಯ್ದ ಶಾಸಕ ಚನ್ನಬಸಪ್ಪ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಾಣ ಹೋದರು ವಕ್ಫ್ ಜಮೀನು ಬಿಟ್ಟುಕೊಡಲ್ಲ ಎಂಬ ಸಚಿವ ಜಮೀರ್ ಹೇಳಿಕೆಗೆ ಶಿವಮೊಗ್ಗದಲ್ಲಿ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಟ್ಟುಕೊಡಲ್ಲ ಎನ್ನಲು ಇದು ನಿಮ್ಮಪ್ಪನ ಆಸ್ತಿಯಲ್ಲ ಎಂದು ಕಿಡಿಕಾರಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಕತ್ತಿದ್ದರೆ ನಿಮ್ಮಪ್ಪನ ಮನೆ ಆಸ್ತಿ, ನಿನ್ನ ಮನೆಯನ್ನು ವಕ್ಫ್ ಬೋರ್ಡ್‌ಗೆ ಬರೆದು ಕೊಡು ನೋಡೋಣ ಎಂದು ಏಕವಚನದಲ್ಲಿ ಹರಿಹಾಯ್ದರ ಅವರು, ಮಂತ್ರಿ ಎನ್ನುವ ಕಾರಣಕ್ಕೆ ನಿಮ್ಮ ಬಗ್ಗೆ ಗೌರವವಿದೆ. ಆದರೆ, ಈ ರಾಜ್ಯವನ್ನು ಮುಸ್ಲಿಮರ ರಾಜ್ಯವನ್ನಾಗಿ ಮಾಡಲು ಹೊರಟರೆ ಬಿಜೆಪಿ ಸುಮ್ಮನೆ ಬಿಡಲ್ಲ. ಇಡೀ ಹಿಂದೂ ಸಮಾಜ ಇದಕ್ಕೆ ವಿರೋಧ ಮಾಡುತ್ತೆ ಎಂದು ಗುಡುಗಿದರು.

ಸಚಿವ ಜಮೀರ್ ಅವರ ವೈಭವಿಕೃತ ಜೀವನವನ್ನು ನಾವು ನೋಡಿದ್ದೇವೆ. ನಿಮ್ಮ ಬಂಗಲೆಯನ್ನು ಮಸೀದಿಗೆ ಬಿಟ್ಟು ಕೊಡಿ. ಅದನ್ನು ಬಿಟ್ಟು ರೈತರ ಜಮೀನನ್ನು ವಕ್ಫ್ ಬೋರ್ಡಿಗೆ ಕೊಡುತ್ತೀರಾ? ನಿಮ್ಮ ಜಮೀನನ್ನು ಬಂಗಲೆಯನ್ನಾಗಿ ಮಾಡಿಕೊಳ್ಳುತ್ತೀರಿ ಎಂದರೆ ಈ ರಾಜ್ಯದ ಜನರು ಬಿಡಲ್ಲ. ರೈತರು ಕಂಗಾಲಾಗುತ್ತಿದ್ದಾರೆ. ಹಿಂದೂ ದೇವಸ್ಥಾನಗಳನ್ನು ವಕ್ಫ್ ಆಸ್ತಿ ಎಂದು ಘೋಷಣೆ ಮಾಡುತ್ತಿದ್ದೀರಾ. ಇದನ್ನು ಹಿಂದೂ ಸಮಾಜ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು.ಯಾದಗಿರಿ, ಬಿಜಾಪುರ ಜಿಲ್ಲೆಗಳಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಕ್ಫ್ ಆಸ್ತಿಯೆಂದು ಘೋಷಣೆ ಮಾಡಿದ್ದಾರೆ. ಮುಸಲ್ಮಾನ್ ಬಂಧುಗಳು ಎಂದು ಹೇಳಿಕೊಂಡು ಅವರು ಮಾಡಬಾರದ ಕೆಲಸ ಮಾಡುತ್ತಿರುವುದು ಅಸಹ್ಯ ಎನಿಸಿದೆ. ಮುಖ್ಯಮಂತ್ರಿಗಳೇ ರಾಜ್ಯದ ಎಲ್ಲಾ ಆಸ್ತಿಗಳನ್ನು ವಕ್ಫ್ ಬೋರ್ಡ್‌ಗೆ ಸೇರಿದೆ ಎಂದು ಬರೆದು ಕೊಟ್ಟುಬಿಡಿ. ಇದು ರೈತದ್ರೋಹಿ ಸರ್ಕಾರ ಎಂದು ಅರೋಪಿಸಿದರು.

ಶಿವಮೊಗ್ಗದಲ್ಲಿ ಈ ಹಿಂದೆ ವಿನಾಯಕ ಟಾಕೀಸ್ ಪಕ್ಕದ ಜಾಗವನ್ನು ಕಬಳಿಸಲು ಹೊರಟಿದ್ದರು. ಕೋಟ್ಯಾಂತರ ರು. ಮಹಾನಗರ ಪಾಲಿಕೆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಬೋರ್ಡ್ ಹಾಕಲು ಮುಂದಾಗಿದ್ದರು. ಆಗ ನಗರಸಭೆ ಅಧ್ಯಕ್ಷರಾಗಿದ್ದ ಸುಭಾಷ್ ಅವರ ನೇತೃತ್ವದಲ್ಲಿ ಆಸ್ತಿ ಉಳಿಸುವ ಪ್ರಯತ್ನ ಮಾಡಿದ್ದೇವು ಎಂದು ತಿಳಿಸಿದರು.

ಅಲ್ಲದೆ ಶಿವಪ್ಪ ನಾಯಕ ವಂಶಸ್ಥರಿಗೆ ಸೇರಿದ ಸಮಾಧಿಯನ್ನು ತಮಗೆ ಸೇರಿದ ಜಾಗವೆಂದು ವಶಪಡಿಸಿಕೊಳ್ಳಲು ಮುಂದಾಗಿದ್ದರು. ನಗರಸಭೆ ದಾಖಲೆಗಳಲ್ಲಿ ವರ್ಷಕ್ಕೆ ಒಮ್ಮೆ ಪ್ರಾರ್ಥನೆ ಮಾಡಲು ಜಾಗ ಬಿಟ್ಟುಕೊಡಲಾಗಿದೆ ಎಂದು ದಾಖಲಾಗಿದೆ. ವಕ್ಫ್ ಬೋರ್ಡ್ ನವರು ಆಸ್ತಿ ಹೊಡೆಯಲು ರಾಜ್ಯ ಸರ್ಕಾರ ಕುಮಕ್ಕು ನೀಡುತ್ತಿದೆ. ವಕ್ಫ್ ಲ್ಯಾಂಡ್ ಮಾಫಿಯಾ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಹರಿಹಾಯ್ದರು.

ಕೋಟ್

ಜಮೀರ್ ದೇಶವನ್ನು ಒಡೆಯುವ ನೀತಿ ಅನುಸರಿಸುತ್ತಿದ್ದಾರೆ. ರಾಜ್ಯವನ್ನು ವಕ್ಫ್ ಬೋರ್ಡ್ ಮೂಲಕ ಮುಸಲ್ಮಾನ್ ರಾಜ್ಯ ಮಾಡಲು ಹೊರಟಿದ್ದಾರೆ. ರೈತರ ಜಮೀನನ್ನು ಬೋರ್ಡ್ ಗೆ ಸೇರಿಸಿಕೊಂಡು ಕುತಂತ್ರ ನಡೆಸಿದ್ದಾರೆ. ಭಯೋತ್ಪಾದಕರಿಗೆ ಕುಮಕ್ಕು ಕೊಡುತ್ತೀರಾ? ದಾಳಿಕೋರರಿಗೆ ಹಣಕೊಟ್ಟು ಸಾಕುತ್ತೀರಾ? ಈ ನಿಮ್ಮ ತೊಘಲಕ್ ದರ್ಬಾರ್‌ ಹೆಚ್ಚಿನ ದಿನ ನಡೆಯೋದಿಲ್ಲ. ಇದನ್ನು ಎಚ್ಚರಿಕೆ ಗಂಟೆಯಾಗಿ ಜಮೀರ್ ಅಹ್ಮದ್ ತೆಗೆದುಕೊಳ್ಳಬೇಕು.

ಎಸ್‌.ಎನ್‌. ಚನ್ನಬಸಪ್ಪ, ಶಾಸಕ 29ಎಸ್‌ಎಂಜಿಕೆಪಿ03: ಶಾಸಕ ಎಸ್‌.ಎನ್‌. ಚನ್ನಬಸಪ್ಪ