ಹಿರಿಯರಿಂದ ಬಳುವಳಿಯಾಗಿ ಬಂದ ಕಲೆಯ ಸಂರಕ್ಷಣೆ ಕರ್ತವ್ಯ: ಶ್ರೀ ಶ್ರೀನಿವಾಸ ನರಸಿಂಹ ಗುರೂಜಿ

| Published : Jul 19 2025, 02:00 AM IST

ಹಿರಿಯರಿಂದ ಬಳುವಳಿಯಾಗಿ ಬಂದ ಕಲೆಯ ಸಂರಕ್ಷಣೆ ಕರ್ತವ್ಯ: ಶ್ರೀ ಶ್ರೀನಿವಾಸ ನರಸಿಂಹ ಗುರೂಜಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಬಿ.ಸಿ ರಂಗಪ್ಪ ವಿದ್ಯಾನಿಧಿ ಟ್ರಸ್ಟ್ ಬೆಂಗಳೂರು, ಶ್ರೀ ಯತಿರಾಜದಾಸರ್ ಗುರುಪೀಠ ಮೇಲುಕೋಟೆ ಮಂಡ್ಯ ಜಿಲ್ಲೆ ಮತ್ತು ಕೊಡಗು ಕಣಿಯರ ವಿದ್ಯಾಭಿವೃದ್ಧಿ ಸಂಘ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆ ಬಿಟ್ಟಂಗಾಲ ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಣಿಯರ್‌ ಜನಾಂಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಣಿಯರ್ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಭಾರತ ಖಂಡವು ವಿವಿಧತೆಯಲ್ಲಿ ಏಕತೆ ಸಾರುವ ದೇಶ. ಬಹು ಸಂಸ್ಕೃತಿಗಳನ್ನು ಆಚರಿಸುತ್ತಾ ಪರೋಪಕಾರಿ ಕಾರ್ಯಗಳನ್ನು ನಿರ್ವಹಿಸುತ್ತಾ ಸರ್ವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಗುಣಗಳಿಂದ ನಾವು ಪ್ರಖ್ಯಾತರಾಗಿದ್ದೇವೆ. ನಮಗೆ ಬಳುವಳಿಯಾಗಿ ಬಂದಿರುವ ಕಲೆಯನ್ನು ಉಳಿಸಬೇಕು ಎಂದು ಮೇಲುಕೋಟೆಯ ಶ್ರೀ ಯತಿರಾಜದಾಸರು ಗುರುಪೀಠ ಗೃಹಸ್ಥ ಪೀಠಾಧಿಪತಿ ಶ್ರೀ ಶ್ರೀನಿವಾಸ ನರಸಿಂಹ ಗುರೂಜಿ ಹೇಳಿದರು.ಶ್ರೀ ಬಿ.ಸಿ ರಂಗಪ್ಪ ವಿದ್ಯಾನಿಧಿ ಟ್ರಸ್ಟ್ ಬೆಂಗಳೂರು, ಶ್ರೀ ಯತಿರಾಜದಾಸರ್ ಗುರುಪೀಠ ಮೇಲುಕೋಟೆ ಮಂಡ್ಯ ಜಿಲ್ಲೆ ಮತ್ತು ಕೊಡಗು ಕಣಿಯರ ವಿದ್ಯಾಭಿವೃದ್ಧಿ ಸಂಘ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆ ಬಿಟ್ಟಂಗಾಲ ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಣಿಯರ್‌ ಜನಾಂಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೌರಾಣಿಕ ಹಿನ್ನೆಲೆ, ದೈವಿಕ ಶಕ್ತಿ, ಪುರಾತನ ಕಾಲದ ನಮ್ಮ ಪೂರ್ವಜರಿಂದ ಬಂದ ಕಲೆಯು ಇಂದು ನಶಿಸಿ ಹೋಗುವ ಹಂತದಲ್ಲಿದೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ಕಣಿಯರು ಜನಾಂಗವು ನೆಲೆ ನಿಂತಿದ್ದರೂ ಆರ್ಥಿಕವಾಗಿ ಸಬಲತೆ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಶಾಸ್ತ್ರ ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು. ಕೊಡಗಿನ ಆರಾಧ್ಯ ದೈವ ಇಗ್ಗುತಪ್ಪ ದೇಗುಲದಲ್ಲಿ ಹುತ್ತರಿ ಮತ್ತು ಕೈಲ್ ಮುಹೂರ್ತದ ದಿನಾಂಕ ಮತ್ತು ಸಮಯ ನಿಗದಿ ಮಾಡುವ ಕಣಿಯರು ದೈವಸಂಭೂತರು ಎನಿಸಿಕೊಂಡಿದ್ದಾರೆ. ಇದು ಜನಾಂಗಕ್ಕೆ ದೊರತಿರುವ ಮನ್ನಣೆಯಾಗಿದೆ ಎಂದರು.

ಮೇಲುಕೋಟೆ ಗುರುಪೀಠವು ಜನಾಂಗದ ಎಲ್ಲ ಬಾಂಧವರಿಗೆ ಸಕಲ ನೆರವು ನೀಡಲು ಸಿದ್ಧವಾಗಿದೆ. ರಾಜ್ಯ ಸರ್ಕಾರವು ಇತರ ಜನಾಂಗಕ್ಕೆ ನೀಡುವ ಸೌಲಭ್ಯ ಮತ್ತು ಸವಲತ್ತುಗಳನ್ನು ನಮ್ಮ ಕಣಿಯರ್‌ ಜನಾಂಗಕ್ಕೂ ನೀಡುವಂತೆ ಈ ವೇದಿಕೆಯ ಮೂಲಕ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

ಕೊಡಗು ಕಣಿಯರ್‌ ವಿದ್ಯಾಭಿವೃದ್ಧ ಸಂಘ ಕೊಡಗು ಅಧ್ಯಕ್ಷ ದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಕಣಿಯರು ಜನಾಂಗ ಬಾಂಧವರು ಅಲ್ಪ ಪ್ರಮಾಣದಲ್ಲಿದ್ದು, ಇವರ ಸಾಧನೆಗಳು ಅಪಾರ. ಸೇನೆಯಲ್ಲಿ, ಕ್ರೀಡೆಯಲ್ಲಿ ತಮ್ಮ ಸೇವೆಯನ್ನು ನೀಡಿದ್ದಾರೆ. ಕಣಿಯರ ಜನಾಂಗದ ಕುಲ ಕಸುಬುಗಳನ್ನು ಮರೆತು ಸಾಗಬಾರದ, ಅಳಿವಿನಂಚಿನಲ್ಲಿರುವ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ವರು ಪ್ರಯತ್ನ ಪಡಬೇಕು ಎಂದರು ಹೇಳಿದರು.

ಕೊಡಗು ಕಣಿಯರ್‌ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ಕಣಿಯರ ಜೆ.ಪ್ರಕಾಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಣಿಯರು ಜನಾಂಗದ ಸಂಖ್ಯೆ ಬಹು ವಿರಳವಾಗಿದೆ. ಜನಾಂಗದ ಹಿರಿಯರು ಇತರ ಎಲ್ಲ ಜನಾಂಗದ ಕಷ್ಟಸುಖಗಳಲ್ಲಿ ಭಾಗಿಗಳಾಗಿ ಶಾಸ್ತ್ರದ ಮೂಲಕದ ಪರಿಹಾರ ಕೊಡುತ್ತಿದ್ದರು. ಇಂದಿಗೂ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಸ್ಥಾನಮಾನ ಕಣಿಯರಿಗೆ ಲಭಿಸಿರುವುದು ಧನ್ಯ. ಜನಾಂಗದ ಅಭಿವೃದ್ಧಿಗೆ ಎಲ್ಲ ಸಹಕಾರ ಅತ್ಯಗತ್ಯವಾಗಿದೆ ಎಂದರು.

ವೇದಿಕೆಯಲ್ಲಿ ಲ್ಯಾಂಡ್ ಡೆವಲಪರ್ ಸಿ.ಸಂಜಯ್ ಕುಮಾರ್, ಬಿಇಎಲ್ ನಿವೃತ್ತ ಡಿಜಿಎಂ ಲೋಲಕೃಷ್ಣ, ಕಣಿಯರ ಸೇವಾ ಸಮಾಜ ಬೆಂಗಳೂರು ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕಣಿಯರ ವಿದ್ಯಾಭಿವೃದ್ಧಿ ಸಂಘ ಕೊಡಗು ಸಂಸ್ಥಾಪಕ ಅಧ್ಯಕ್ಷ ಕೆ.ಎನ್. ನಾಣಯ್ಯ ಮತ್ತು ಕಣಿಯರು ವಿದ್ಯಾಭಿವೃದ್ಧಿ ಸಂಘ ಕೊಡಗು ಕಾರ್ಯದರ್ಶಿ ಕಣಿಯರ ಜೆ. ಪ್ರಕಾಶ್ ಉಪಸ್ಥಿತರಿದ್ದರು.

ಬಿ.ಸಿ. ರಂಗಪ್ಪ ವಿದ್ಯಾನಿಧಿ ಟ್ರಸ್ಟ್ ಬೆಂಗಳೂರು ಸಂಸ್ಥಾಪಕ ಆರ್. ರಂಗಸ್ವಾಮಿ, ಎನ್. ಕೃಷ್ಣಮೂರ್ತಿ, ಬಾಲಚಂದ್ರ ಆರ್., ಲಕ್ಷಣ ಸಿ. ಕಣಿಯರ್ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸಿದ ಕಣಿಯರ ಸೇವಾ ಸಂಘದ ಪದಾಧಿಕಾರಿಗಳು, ಜನಾಂಗ ಬಾಂಧವರು, ಕೊಡಗು ಜಿಲ್ಲಾ ಕಣಿಯರ ಜನಾಂಗದ ಮುಖಂಡರು ಹಾಜರಿದ್ದರು.

ಕಣಿಯರು ಜನಾಂಗದ ಗ್ರಾಮೀಣ ಭಾಗದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ನಗದು, ಪರಿತೋಷಕ ನೀಡಿ ಸನ್ಮಾನಿಸಲಾಯಿತು. ಕೊಡಗಿನಲ್ಲಿ ಕಣಿಯರು ಜ್ಯೋತಿಷ್ಯ ಸಮುದಾಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಸಾಧಕರಿಗೆ ಸನ್ಮಾನ:

ಸಮಾಜ ಸೇವೆಯಲ್ಲಿ ಸಿ. ಸಂಜಯ್ ಕುಮಾರ್, ಸಂಗೀತ ಕ್ಷೇತ್ರದಲ್ಲಿ ವಿದ್ವಾನ್ ಆರ್. ಪುರುಷೋತ್ತಮ, ನೃತ್ಯ ಕ್ಷೇತ್ರದಲ್ಲಿ ವಿದ್ವಾನ್ ಯೋಗೇಶ್ ಕುಮಾರ್ ಎಸ್., ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಗಿರೀಶ್‌ಚಂದ್ರ, ಕಿರುತೆರೆಯ ಕಲಾವಿದರಾದ ಕಡುವಚೇರಿರ ಉಮೇಶ್, ನಿವೃತ್ತ ಸೈನಿಕರಾದ ಚೋಂಡೆಪಂಡ ಶಂಬು ಪೂಣಚ್ಚ, ಜ್ಯೋತಿಷ್ಯ ಕ್ಷೇತ್ರದಲ್ಲಿ ಪಂ. ನಾಗರತ್ನ ಆರ್., ಡಾ. ರವಿಕುಮಾರ್ ಬೆಂಗಳೂರು, ಶಶಿಕುಮಾರ್ ಪಂಡಿತ್ ಸುಳ್ಯ, ಪಂಡಿತ್ ಶಿಜು ಗುರುಕಳ್ ವಿರಾಜಪೇಟೆ, ಪ್ರಭಾಕರ್ ಪಂಡಿತ್ ಉಳ್ಳಾಲ ಅವರನ್ನು ಸನ್ಮಾನಿಸಲಾಯಿತು. ಬಳಿಕ ಜನಾಂಗದ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.