ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ

| Published : Aug 16 2024, 12:52 AM IST

ಸಾರಾಂಶ

ದೇಶಕ್ಕಾಗಿ ಹೋರಾಟ, ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಹನೂರು

ದೇಶಕ್ಕಾಗಿ ಹೋರಾಟ, ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಯುವ ಪೀಳಿಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಬಗ್ಗೆ ಸ್ಮರಿಸಿ ಅಭಿಮಾನ ಹೊಂದಬೇಕು. ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮುಂದುವರೆಯಬೇಕು. ಮಹಾ ನಾಯಕರ ಸದ್ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸ್ವಾತಂತ್ರ್ಯಗೊಂಡ ಎಷ್ಟೋ ದೇಶಗಳು ತಮ್ಮ ಮೂಲ ಅಸ್ತಿತ್ವವನ್ನು ಕಳೆದುಕೊಂಡಿವೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಫಲವಾಗಿ ಸದೃಢವಾಗಿ ದೇಶ ಸಾಗುತ್ತಿದೆ. ಭಾರತದ ಸಂವಿಧಾನ ವಿಶ್ವದಲ್ಲೇ ಬೃಹತ್ ಲಿಖಿತ ಸಂವಿಧಾನವಾಗಿದೆ. ವಿವಿಧತೆಯ ಏಕತೆಯಿಂದ ಸಾಗಲು ದಾರಿ ದೀಪವಾಗಿದೆ ಎಂದರು.

ಇದೇ ವೇಳೆ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ಲ್ಯಾಪ್ ಟ್ಯಾಪ್ ವಿತರಣೆ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಗುರುಪ್ರಸಾದ್, ಬಿ.ಒ.ಗುರುಲಿಂಗಯ್ಯ, ತಾಪಂ ಮುಖ್ಯ ನಿರ್ವಹಣಾಧಿಕಾರಿ ಉಮೇಶ್, ಪಪಂ ಮುಖ್ಯಾಧಿಕಾರಿ ಅಶೋಕ್, ಇನ್ಸ್‌ಪೆಕ್ಟರ್‌ ಶಶಿಕುಮಾರ್, ಪಪಂ ಸದಸ್ಯರು ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ

ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ಉತ್ತಮ ರಸ್ತೆ, ಸಾರಿಗೆ ಅನುಕೂಲ, ವೈದ್ಯಕೀಯ ಸೇವೆಗೆ, ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ರೈತರು, ಆದಿವಾಸಿ ಪರಿಶಿಷ್ಟ ಜಾತಿ ಪಂಗಡ ಜನತೆಯ ಕಲ್ಯಾಣಕ್ಕೆ ಬದ್ಧ ಎಂದು ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದರು.

ಆಕರ್ಷಕ ಪಥ ಸಂಚಲನ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನಡೆದ ಪಥ ಸಂಚಲನ ಅತ್ಯಾಕರ್ಷಕವಾಗಿತ್ತು. ತಮ್ಮ ಶಾಲೆಯನ್ನು ಪ್ರತಿನಿಧಿಸುವ ಸಮವಸ್ತ್ರದ ಜೊತೆಗೆ ಕೈಗವಸು, ಶೂಗಳನ್ನು ತೊಟ್ಟು ಶಿಸ್ತಿನ ಸಿಪಾಯಿಗಳಾಗಿ ಹೆಜ್ಜೆ ಇಟ್ಟು ಅತಿಥಿ ಗಣ್ಯ ಮಹೋದಯರಿಗೆ ಸೆಲ್ಯೂಟ್ ಮಾಡುತ್ತಿದ್ದ ದೃಶ್ಯ ನೋಡುಗರ ಮೈನವಿರೇಳುವಂತೆ ಮಾಡಿತು. ಪಥ ಸಂಚಲನದ ಮೊದಲಿಗೆ ಪಟ್ಟಣದ ಪೊಲೀಸರು ಪೊಲೀಸ್ ಸಮವಸ್ತ್ರದಲ್ಲಿ ಪಥ ಸಂಚಲನ ಮಾಡುತ್ತಿದ್ದಂತೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.